ಇಂದಿನಿಂದ ತುಳಸಿಗಿರಿ ಹನುಮಪ್ಪನ ಸಡಗರ

| Published : Dec 14 2024, 12:46 AM IST

ಸಾರಾಂಶ

ಉತ್ತರ ಕರ್ನಾಟಕದ ಸುಪ್ರಸಿದ್ಧವಾದ ತುಳಸಿಗಿರಿ ತಿರುಪತಿ ವೆಂಕಟೇಶನೆಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಹನುಮಂತ ದೇವರ ಕಾರ್ತಿಕೋತ್ಸವದ ಮೊದಲ ಜಾತ್ರೆ ಸಂಭ್ರಮ ಡಿ.14ರಂದು ನಡೆಯಲಿದೆ.

ಚಂದ್ರಶೇಖರ ಹಡಪದ

ಕನ್ನಡಪ್ರಭ ವಾರ್ತೆ ಕಲಾದಗಿ

ಉತ್ತರ ಕರ್ನಾಟಕದ ಸುಪ್ರಸಿದ್ಧವಾದ ತುಳಸಿಗಿರಿ ತಿರುಪತಿ ವೆಂಕಟೇಶನೆಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಹನುಮಂತ ದೇವರ ಕಾರ್ತಿಕೋತ್ಸವದ ಮೊದಲ ಜಾತ್ರೆ ಸಂಭ್ರಮ ಡಿ.14ರಂದು ನಡೆಯಲಿದೆ. ತಿಮ್ಮಪ್ಪನ ದರ್ಶನ ಪಡೆಯಲು ಈ ಭಾಗದ ನೂರಾರು ಹಳ್ಳಿಗಳ ಲಕ್ಷಾಂತರ ಭಕ್ತರು ಸಜ್ಜಾಗಿದ್ದು ಕಾತುರದಲ್ಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಾಕಷ್ಟು ತಯಾರಿಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.

ತುಳಸಿಗಿರಿಯು ಹನುಮಂತ ದೇವರು ನೆಲೆ ನಿಂತಿರುವ ಪುಣ್ಯಕ್ಷೇತ್ರವಾಗಿದ್ದು. ತನ್ನದೇ ಆದ ಮಹತ್ವ, ವೈಶಿಷ್ಟ್ಯ ಮತ್ತು ದೈವಿಕ ಶಕ್ತಿಯಿಂದ ಜಿಲ್ಲೆಯಲ್ಲದೆ ದೂರದ ವಿವಿಧ ಜಿಲ್ಲೆಯಲ್ಲಿಯೂ ಮತ್ತು ನೆರೆ ರಾಜ್ಯ ಮಹಾರಾಷ್ಟ್ರದ ಮುಂಬೈ, ಪೂಣೆಯಲ್ಲಿಯೂ ಅಸಂಖ್ಯಾತ ಭಕ್ತರನ್ನು ಹೊಂದಿದೆ. ಸ್ವಾಮಿಯು ಸದ್ಗುಣಿಗಳಿಗೆ ಸಾಕಾರಮೂರ್ತಿಯಾಗಿ, ದುರ್ಗುಣಿಗಳಿಗೆ ದುಷ್ಟ ಸಂಹಾರನಾಗಿ ಗೋಚರಿಸುತ್ತಾನೆ.

ನೀರಬೂದಿಹಾಳ ಗ್ರಾಮದ ಕೃಷ್ಣರಾಜ ದೊರೆಗಳಿಗೆ ತಿರುಪತಿ ವೆಂಕಟೇಶನ ಮೇಲೆ ಅಪಾರಭಕ್ತಿ. ಇವರ ಭಕ್ತಿಗೆ ಮೆಚ್ಚಿದ ತಿರುಪತಿ ವೆಂಕಟೇಶ ಅದೊಮ್ಮೆ ನಾನೇ ಹನುಮಂತನಾಗಿ ವಲ್ಮೀಕ (ಹುತ್ತ)ದಲ್ಲಿ ಅವತರಿಸುತ್ತೇನೆ. ಅಲ್ಲಿಯೇ ದೇವಾಲಯ ಕಟ್ಟಿಸು ಪೂಜಿಸು ತಿರುಪತಿಗೆ ಬರಬೇಡ ಎಂದನಂತೆ.ಹೀಗೆ ಅಂದಂತೆ ತುಳಸೀಗಿರಿಯ ಇಂದಿನ ದೇವರ ಸ್ಥಳದಲ್ಲಿಯೇ ಅಂದು ಹುತ್ತ ಬೆಳೆಯಿತು. ಅದರೊಳಗೆ ಪ್ರತ್ಯಕ್ಷವಾಗಿದ್ದೆ ಇಂದಿನ ಹನುಮಂತ ದೇವರು ಎಂಬ ಪ್ರಚಲಿತ ಕಥೆಯೊಂದು ತುಳಸಿಗೇರಿ ಗ್ರಾಮಸ್ಥರಿಂದ ಕೇಳಿ ಬರುತ್ತದೆ. ಈ ಹಿನ್ನೆಲೆಯಲ್ಲಿಯೇ ಇಂದಿಗೂ ನೀರಬೂದಿಹಾಳದ ದೇಸಾಯಿಯರಿಗೆ ಮತ್ತು ಅವರ ಮತೆತನದ ಮನೆ ಮಂದಿಗೆಲ್ಲಾ ಇಲ್ಲಿನ ಹನುಮಂತ ದೇವರು ಎಂದರೆ ಆರಾಧ್ಯದೈವ ಮತ್ತು ಅಪಾರ ಶ್ರದ್ಧಾ ಭಕ್ತಿ. ಶಕ್ತಿಯುತ ದೈವವಾಗಿ ಹನುಮಂತ ದೇವರು ಇಲ್ಲಿ ನೆಲೆ ನಿಂತಿದ್ದರು. ತಿರುಪತಿಯ ವೆಂಕಟೇಶನ ಸ್ಮರಣೆ, ಅವನಿಗೆ ಸಲ್ಲುವ ಪೂಜಾ ಪದ್ಧತಿ, ಗೋಪಾಳ ತುಂಬಿಸುವ ಬಗೆ ಎಲ್ಲವು ಇಲ್ಲಿ ವಿಧಿವಿಧಾನವಾಗಿ ನಡೆಯುತ್ತವೆ.

ಬಾಗಲಕೋಟೆಯ ಮಹಾನ್‍ದಾಸ ವರೇಣ್ಯರಾದ ಶ್ರೀ ಪ್ರಸನ್ನ ವೆಂಕಟದಾಸರು ತಿರುಪತಿಯಲ್ಲಿ ವೆಂಕಟೇಶನ ಸೇವೆಯಲ್ಲಿದ್ದಾಗ ಅದೊಮ್ಮೆ ವೆಂಕಟೇಶ ಪ್ರತ್ಯಕ್ಷನಾಗಿ ಅವರಿಗೆ ಹೇಳಿದನಂತೆ ನಾ ತುಳಸಿಗಿಯಲ್ಲಿ ಹನುಮಂತನ ಅವತಾರವಾಗಿ ಇದ್ದೇನೆ ನೀ ಅಲ್ಲಿಗೆ ಹೋಗಿ ಸೇವೆ ಮಾಡು ಎಂದು ಅಂತೆಯೇ ಪ್ರಸನ್ನವೆಂಕಟ ದಾಸರು ತಮ್ಮ ಬಹುದಿನಗಳನ್ನು ತುಳಸಿಗಿರೀಶನ ಎದುರಿಗೆ ಕಳೆಯುತ್ತಾರೆ.

ಬ್ರಿಟೀಷರ ವಿರುದ್ಧ ಸೆಡ್ಡು ಹೊಡೆದ ವೀರ ಸಿಂಧೂರ ಲಕ್ಷ್ಮಣ ಹುಟ್ಟಿದ್ದು ಸಹ ಈತನ ವರ ಪ್ರಸಾದದಿಂದ ಎಂಬುದು ಗಮನೀಯ ವಿಶೇಷ. ಹಿಗಾಗೀ ಈ ಭಾಗದದಲ್ಲಿ ಮದುವೆಯಾದ ನವಜೋಡಿಗಳು ತುಳಸಿಗೇರಿಗೆ ಬಂದು ಸಂತಾನ ಪ್ರಾಪ್ತಿಗೆ ಬೇಡಿಕೊಳ್ಳುತ್ತಾರೆ, ಹರಕೆ ತೀರಿಸುತ್ತಾರೆ.

ಆಳೆತ್ತರಕ್ಕೆ ನಿಂತ ಹನುಮಂತದೇವರು ನಿಂತ ನಿಲುವಿನಲ್ಲಿ ಎಲ್ಲರನ್ನು ಸೆಳೆಯುತ್ತಾನೆ. ಇಲ್ಲಿ ಆತನೊಬ್ಬನೇ ನೆಲೆ ನಿಂತಿಲ್ಲವೆಂಬುದು ಚಿತ್ತೀಕರಿಸಲೇ ಬೇಕಾದ ಅಂಶ. ಈತನ ಬೆನ್ನಹಿಂದೆ ಬೆಣ್ಣೆಪ್ಪನೆಂದು ಕರೆಸಿಕೊಳ್ಳುವ ಕಡಗೋಲ ಶ್ರೀಕೃಷ್ಣನಿದ್ದಾನೆ. ಪಕ್ಕದಲ್ಲಿಯೇ ಈಶ್ವರಗುಡಿ ಇದೆ. ಅಹೋಬಲ ನರಸಿಂಹ ದೇವರಗುಡಿಯೂ ಇದೆ. ಹೀಗೆ ಸರ್ವ ದೈವಗಳನ್ನೊಳಗೊಂಡ ತಿರುಪತಿ ವೆಂಕಟೇಶನೆಂದು ಗುರುತಿಸಿಕೊಳ್ಳುವ ಭಕ್ತರಿಂದ ತುಳಸೀಗಿರೀಶನೆಂದು ಸಹ ಕರೆಸಿಕೊಳ್ಳುವ ಈ ಹನುಮಂತದೇವರಿಗೆ ಡಿ.14 ಮತ್ತು ಡಿ.21ರಂದು ಕಾರ್ತಿಕೋತ್ಸವ ಸಂಭ್ರಮ.