ಮಳೆ ನೀರಿನ ಕೊಯ್ಲು ಮೂಲಕ ನೀರು ಸದ್ಬಳಕೆಯಾಗಲಿ

| Published : Mar 22 2025, 02:06 AM IST

ಸಾರಾಂಶ

ಭೂ ವಿಜ್ಞಾನ ವಿಷಯದಲ್ಲಿ ಕಲ್ಪನೆಗೆ ಅವಕಾಶವಿರುವುದಿಲ್ಲ. ವೈಜ್ಞಾನಿಕತೆ ಮತ್ತು ಪ್ರಾಯೋಗಿಕವಾದ ವಿಧಾನಗಳಿಗೆ ಮಾತ್ರ ಪಾಧಾನ್ಯತೆ ಇರುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರು

ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲದ ಮಟ್ಟ ಕಡಿಮೆ ಆಗುತ್ತಿದೆ. ಇದರಿಂದ ನೀರಿನ ಅಭಾವ ಕಂಡು ಬರುತ್ತಿದ್ದು, ನೀರನ್ನು ಪ್ರತಿಯೊಬ್ಬರೂ ಹಿತಮಿತವಾಗಿ ಬಳಸಬೇಕು. ಮಳೆ ನೀರಿನ ಕೊಯ್ಲು ಮೂಲಕ ನೀರನ್ನು ಸಂಗ್ರಹಿಸಿ ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಬೇಕು ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ತಿಳಿಸಿದರು.

ಮೈಸೂರು ವಿವಿ ಮಾನಸಗಂಗೋತ್ರಿಯ ಭೂ ವಿಜ್ಞಾನ ಅಧ್ಯಯನ ವಿಭಾಗದ ಮುಂಭಾಗದಲ್ಲಿ ಮಳೆ ನೀರಿನ ಕೊಯ್ಲು, ಮಳೆ ನೀರಿನ ಪುನರ್ ಬಳಕೆ ಮತ್ತು ಹೊಸ ಬೊರ್ ವೆಲ್ ಕುರಿತು ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭೂ ವಿಜ್ಞಾನ ವಿಷಯದಲ್ಲಿ ಕಲ್ಪನೆಗೆ ಅವಕಾಶವಿರುವುದಿಲ್ಲ. ವೈಜ್ಞಾನಿಕತೆ ಮತ್ತು ಪ್ರಾಯೋಗಿಕವಾದ ವಿಧಾನಗಳಿಗೆ ಮಾತ್ರ ಪಾಧಾನ್ಯತೆ ಇರುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಭೂವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಪ್ರಯೋಗ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳು ವಿವರಿಸುವ ರೀತಿಯಲ್ಲಿ ಪರಿಣಿತಿ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.

ಭೂವಿಜ್ಞಾನ ವಿಷಯದ ವಿದ್ಯಾರ್ಥಿಗಳು ಭೂ ವಿಜ್ಞಾನಕ್ಕೆ ಸಂಬಂಧಿಸಿದ ಮೂಲಭೂತವಾದ ವಿಷಯಗಳು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಭೂಮಿ ಮತ್ತು ಭೂಮಿಯ ಅಂತರಾಳಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯವನ್ನು ಅಧ್ಯಯನ ಮಾಡಿ ಅರ್ಥೈಸಿಕೊಳ್ಳಬೇಕು ಎಂದರು.

ಭೂವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಡಿ. ನಾಗರಾಜು ಮಾತನಾಡಿ, ರಭಸವಾಗಿ ಸುರಿಯುವ ಮಳೆಯ ನೀರು ಮತ್ತು ಜಮೀನಿನಲ್ಲಿ ವಿವಿಧ ಬೆಳೆಗಳ ಪೋಷಣೆಗೆ ಬಿಡುವ ನೀರಿನಿಂದ ಮಣ್ಣಿನ ಸವಕಳಿ ಹೆಚ್ಚುತ್ತದೆ. ಮಾತ್ರವಲ್ಲದೇ ನೀರು ಅನಗತ್ಯವಾಗಿ ವ್ಯರ್ಥವಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ಮಳೆ ನೀರಿನ ಕೊಯ್ಲು ಪದ್ಧತಿತ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ನೀರಿನ ಮಿತಬಳಕೆ, ಮಳೆಯ ನೀರಿನ ಕೊಯ್ಲು, ಕೆರೆಕಟ್ಟೆಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆಯುವ ಕಾರ್ಯಗಳಿಂದ ನೀರಿನ ಮೂಲಗಳು ಉಳಿಯುತ್ತವೆ. ಇದರಿಂದ ಅಂತರ್ಜಲದ ಮಟ್ಟ ಹೆಚ್ಚುತ್ತದೆ. ಮಳೆ ನೀರಿನ ಕೊಯ್ಲಿಗೆ ಸಂಬಂಧಿಸಿದ ಹೊಸ ವಿಧಾನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದರು.

ವಿಭಾಗದ ಪ್ರಾಧ್ಯಾಪಕ ಡಾ.ಬಿ.ವಿ. ಸುರೇಶ್ ಕುಮಾರ್ ಮೊದಲಾದವರು ಇದ್ದರು.