ನಾಳೆಯಿಂದ ಚಿತ್ರದುರ್ಗದಲ್ಲಿ ಫಲ-ಪುಷ್ಪ ಪ್ರದರ್ಶನ

| Published : Feb 01 2024, 02:03 AM IST

ಸಾರಾಂಶ

ಚಿತ್ರದುರ್ಗದ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಫೆ.2ರಿಂದ 4ರವರೆಗೆ 31ನೇ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಭಾರತ ಸಂವಿಧಾನದ ಬಗ್ಗೆ ಕಲಾಕೃತಿ, ಚಂದ್ರಯಾನ-3, ಐತಿಹಾಸಿಕ ಚಿತ್ರದುರ್ಗ ಕೋಟೆಯಲ್ಲಿ ಮಳೆ ನೀರು ಕೊಯ್ಲು ಘಟಕಗಳು ಫಲ-ಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿರಲಿದೆ

ಚಿತ್ರದುರ್ಗ: ಚಿತ್ರದುರ್ಗದ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಫೆ.2ರಿಂದ 4ರವರೆಗೆ 31ನೇ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಭಾರತ ಸಂವಿಧಾನದ ಬಗ್ಗೆ ಕಲಾಕೃತಿ, ಚಂದ್ರಯಾನ-3, ಐತಿಹಾಸಿಕ ಚಿತ್ರದುರ್ಗ ಕೋಟೆಯಲ್ಲಿ ಮಳೆ ನೀರು ಕೊಯ್ಲು ಘಟಕಗಳು ಫಲ-ಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿರಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.

ಜಿಲ್ಲಾ ತೋಟಗಾರಿಕೆ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಫೆ.2ರಂದು ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಫಲ-ಪುಷ್ಪ ಪ್ರದರ್ಶನ ಉದ್ಘಾಟನೆ ನೆರವೇರಿಸುವರು. ಫಲ-ಪುಷ್ಪ ಪ್ರದರ್ಶನಕ್ಕೆ ಎಲ್ಲ ಸಾರ್ವಜನಿಕರಿಗೂ ಉಚಿತ ಪ್ರವೇಶವಿದೆ ಎಂದರು.

ಪ್ರದರ್ಶನವನ್ನು ಪ್ರತಿ ವರ್ಷವೂ ಆಯೋಜಿಸುತ್ತಿದ್ದು, ವಿವಿಧ ಜಾತಿಯ ಹೂಗಳು, ಹಣ್ಣುಗಳು, ತರಕಾರಿಗಳು, ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕಾ ಗಿಡಗಳನ್ನು ಬೆಳೆಸಿ ಪ್ರದರ್ಶಿಸಲಾಗುತ್ತಿದೆ. ಫಲ-ಪುಷ್ಪ ಪ್ರದರ್ಶನದಲ್ಲಿ ಹೂವಿನ ಗಿಡಗಳ ಬೃಹತ್ ಪ್ರದರ್ಶನ, ಇಕೆಬಾನ, ಕುಬ್ಜ ಮರ (ಬೊನ್ಸಾಯ್) ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಿ, ವಿವಿಧ ಸ್ಪರ್ಧೆಗಳನ್ನು ಸಹ ಹಮ್ಮಿಕೊಳ್ಳಲಾಗುವುದು. ಜೊತೆಗೆ ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳ ಕುರಿತು ಪ್ರದರ್ಶನ ಮಳಿಗೆ, ಸ್ತ್ರೀಶಕ್ತಿ ಸಂಘಗಳ ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದರು.

ಭಾರತದ ಸಂವಿಧಾನದ ಬಗ್ಗೆ ಕಲಾ ಕೃತಿ, ಚಂದ್ರಯಾನ-3, ಐತಿಹಾಸಿಕ ಚಿತ್ರದುರ್ಗ ಕೋಟೆಯಲ್ಲಿ ಮಳೆ ನೀರು ಕೊಯ್ಲು ಘಟಕಗಳು ಈ ಬಾರಿಯ ಫಲ-ಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಗಳಾಗಿವೆ. ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಕರಡು ರಚನಾ ಸಮಿತಿ ಅಧ್ಯಕ್ಷರಾಗಿ ಸಂವಿಧಾನದ ಅಂತಿಮ ಪ್ರತಿ ಸಾಂವಿಧಾನಿಕ ಸಭೆ ಅಧ್ಯಕ್ಷರಾದಂತಹ ಡಾ.ರಾಜೇಂದ್ರ ಪ್ರಸಾದ್ ಅವರಿಗೆ 1949 ನ.11ರಂದು ಸಲ್ಲಿಸಿದ್ದು, ಆ ಕ್ಷಣದ ಕಲಾಕೃತಿಯನ್ನು ರಚಿಸಿ ವಿವಿಧ ಹೂಗಳಿಂದ ಅಲಂಕರಿಸಲಾಗುವುದು ಎಂದರು.

ಇತ್ತೀಚೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಚಂದ್ರನ ದಕ್ಷಿಣ ಧೃವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ್ದು, ಪ್ರಪಂಚದ ಮೊದಲನೇ ದೇಶವಾಗಿದೆ. ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಗ್ಯಾನ್ ಪ್ರತಿಕೃತಿಗಳ ಪ್ರದರ್ಶಿಸಲಾಗುವುದು. ಐತಿಹಾಸಿಕ ಚಿತ್ರದುರ್ಗ ಕೋಟೆಯಲ್ಲಿ ಅಂದಿನ ಕಾಲದಲ್ಲಿ ಅತ್ಯುತ್ತಮ ಮಳೆ ನೀರು ಕೊಯ್ಲು ಮಾಡಿ ಜನ, ಜಾನುವಾರುಗಳಿಗೆ ಹಾಗೂ ಕೃಷಿಗೆ ನೀರನ್ನು ಬಳಸಲಾಗುತ್ತಿತ್ತು. ಪ್ರಸ್ತುತ ಮಳೆ ನೀರು ಕೊಯ್ಲು ಮಾಡುವುದು ಜಿಲ್ಲೆಯ ಕೃಷಿಗೆ ಅವಶ್ಯಕವಾಗಿರುತ್ತದೆ. ಗೋಪಾಲಸ್ವಾಮಿ ಹೊಂಡ, ಅಕ್ಕತಂಗಿ ಹೊಂಡ, ಸಿಹಿ ನೀರು ಹೊಂಡ ಹಾಗೂ ಸಂತೆಹೊಂಡಗಳು ಒಂದಕ್ಕೊಂದು ಸಂಪರ್ಕಿಸಿರುವ ಮಾದರಿಗಳನ್ನು ಪ್ರದರ್ಶಿಸಲಾಗುವುದು ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ ಕಲಾಕೃತಿ:

ಹಿರಿಯೂರಿನ ಮಾರಿಕಣಿವೆಯಲ್ಲಿ 1907ರಲ್ಲಿ ವಾಣಿ ವಿಲಾಸ ಸಾಗರ ಅಣೆಕಟ್ಟು ಕಟ್ಟಿ ಇಂದಿಗೂ ಜನರ ದಾಹವನ್ನು ತಣಿಸುತ್ತಿರುವ ಚೇತನ, ಹಾಗೂ ಚಿತ್ರದುರ್ಗ ಚಿಕ್ಕಜಾಜೂರು ರೈಲ್ವೆ ಮಾರ್ಗ ಮತ್ತು ಚಿತ್ರದುರ್ಗದಿಂದ ಬೆಂಗಳೂರಿಗೆ 220 ಮೈಲಿ ರಸ್ತೆ ಮಾರ್ಗವನ್ನು ಕಲ್ಪಿಸಿ ಸಾರಿಗೆ ಸಂಪರ್ಕವನ್ನು ಸ್ಥಿರಗೊಳಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ ಕೃತಿ ಪ್ರದರ್ಶಿಸಲಾಗುವುದು.

12ನೇ ಶತಮಾನದಲ್ಲಿಯೇ ಸಮಸಮಾಜದ ಚಿಂತನೆಯಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ಸರ್ವಸಮಾನತೆಯ ಕನಸನ್ನು ಸರ್ವಕಾಲಿಕ ನನಸನ್ನಾಗಿಸಿದ ಧೀಮಂತ ಶಕ್ತಿ ಬಸವಣ್ಣನವರ ಕಲಾಕೃತಿ ಪ್ರದರ್ಶಿಸಲಾಗುವುದು. ಇದರ ಜೊತೆಗೆ ಶಿವಕುಮಾರ ಸ್ವಾಮಿಜಿ, ಸಿದ್ದೇಶ್ವರ ಸ್ವಾಮೀಜಿ ಹಾಗೂ ಪುಟ್ಟರಾಜ ಗವಾಯಿಗಳ ಕೃತಿಗಳು ಪ್ರದರ್ಶಿಸಲಾಗುವುದು ಎಂದರು.

ವಿವಿಧ ಪುಷ್ಪ ಜೋಡಣೆಗಳಿಗೆ ಹಲವು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ಸುಮಾರು 50ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಆರ್ಕಿಡ್ಸ್, ಕಾರ್ನೇಶನ್, ಕಾಕ್ಸ್ ಕೂಂಬ್, ಸೆಲೋಶಿಯಾ, ಪ್ಲಾಕ್ಸ್, ಗಾಕ್ಸೀನಿಯ, ಕಲಂಚಾ, ಲಿಲ್ಲಿಸ್, ಇಂಪೇಷನ್ಸ್ (ಮಿಕ್ಸ್‍ಡ್), ಡೇಲಿಯಾ (ಡ್ವಾರ್ಫ್), ಸಾಲ್ವಿಯಾ (ಕೆಂಪು, ನೀಲಿ ಕೇಸರಿ, ಬಿಳಿ) ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಜಿನಿಯಾ, ಪೆಟೂನಿಯಾ, ಕಾಸ್‍ಮಾಸ್, ಬಾಲ್ಸಂ, ಜಿರೇನಿಯಂ, ಹಾಲಿಹಾಕ್, ಆಂಟಿರಿನಮ್, ಡಯಾಂತಸ್, ಕ್ಯಾಲೊಂಡೋಲಾ, ಸೇವಂತಿಗೆ, ಪೆಂಟಾಸ್, ಫ್ಯಾನ್ಸಿ, ಇಪೋರ್ಬಿಯ ಮಿಲ್ಲಿ, ಫಾಯಿನ್‍ಸಿಟಿಯಾ, ಬಿಗೋನಿಯಾ, ವಿಂಕಾ, ಆಂತೋರಿಯಂ ಇತ್ಯಾದಿ ವಿವಿಧ ಪುಷ್ಪ ಸಸಿಗಳು, ನೂರಕ್ಕೂ ಹೆಚ್ಚು ಬಗೆಯ ತಳಿಗಳು, ಪ್ರದರ್ಶಿಸುವುದರೊಂದಿಗೆ ಪುಷ್ಪ ರಸಿಕರಿಗೆ ಪ್ರದರ್ಶನ ಮುದ ನೀಡಲಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಪದನಿಮಿತ್ತ ಕಾರ್ಯದರ್ಶಿ ಬಿ.ದೇವರಾಜು, ಜಿಲ್ಲಾ ತೋಟಗಾರಿಕೆ ಸಂಘದ ಖಜಾಂಚಿ ನಾಗರಾಜ ಬೇದ್ರೆ ಇದ್ದರು.