ಮಂಡ್ಯ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣ ಮತ್ತು ಕಾವೇರಿ ಉದ್ಯಾನವನದಲ್ಲಿ ಶನಿವಾರ (ಜ.೨೩)ದಿಂದ ಐದು ದಿನಗಳ ಕಾಲ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಎರಡೂವರೆ ಲಕ್ಷಕ್ಕೂ ಹೆಚ್ಚು ಹೂವುಗಳನ್ನು ಬಳಸಿ ಆಕರ್ಷಕ ಹೂವಿನ ಆಕೃತಿಗಳನ್ನು ರಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ತೋಟಗಾರಿಕೆ ಕಚೇರಿ ಆವರಣ ಮತ್ತು ಕಾವೇರಿ ಉದ್ಯಾನವನದಲ್ಲಿ ಶನಿವಾರ (ಜ.೨೩)ದಿಂದ ಐದು ದಿನಗಳ ಕಾಲ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಹೇಳಿದರು.

ಎರಡೂವರೆ ಲಕ್ಷಕ್ಕೂ ಹೆಚ್ಚು ಹೂವುಗಳನ್ನು ಬಳಸಿ ಇಲಾಖೆಯಿಂದ ಜೇನಿನ ಪರಿಕಲ್ಪನೆ, ಕ್ಯಾಪ್ಸಿಕಂ ಮನೆ, ಡಾಲ್ಫಿನ್, ಅಣಬೆ ಬೇಸಾಯ, ಕಪ್ ಮತ್ತು ಸಾಸರ್, ವಿವಿಧ ಹಣ್ಣುಗಳ ಮಾದರಿ ಮತ್ತು ಜಿರಾಫೆಯ ಆಕರ್ಷಕ ಹೂವಿನ ಆಕೃತಿಗಳನ್ನು ರಚಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಂಬತ್ತು ಸಾವಿರಕ್ಕೂ ಹೆಚ್ಚು ಇಪ್ಪತ್ತೈದು ವಿವಿಧ ತಳಿಯ ಅಲಂಕಾರಿಕ ಗಿಡಗಳನ್ನು ಹೂವಿನ ಕುಂಡಗಳಲ್ಲಿ, ಟೊರೇನಿಯಂ, ಹೈಡ್ರಾಂಜಿಯಾ, ದಾಸವಾಳ, ಫ್ರೆಂಚ್ ಮಾರಿಗೋಲ್ಡ್, ಕಾಕ್ಸ್‌ಕೊಂಬ್, ವೆರ್ಬೆನಾ, ಪೆಟುನಿಯಾ, ಆಂಟಿರೈನಂ, ಸೂರ್ಯಕಾಂತಿ, ಫ್ಯಾನ್ಸಿ, ಕಾಸ್ಮೋಸ್, ಗಜೇನಿಯಾ ಸೇರಿದಂತೆ ಐವತ್ತು ಸಾವಿರ ಹೂವಿನ ಸಸಿಗಳನ್ನು ನಡೆದಾಡುವ ಇಕ್ಕಲಗಳಲ್ಲಿ ಪ್ರದರ್ಶಿಸಲಾಗಿದೆ ಎಂದರು.

ಭತ್ತ ನಾಟಿ ಮಾಡುವ ಯಂತ್ರ ಮತ್ತು ರೈತ ಮಹಿಳೆಯ ಹೂವಿನ ಕಲಾಕೃತಿ, ಕೋಳಿಗಳ ಕಲಾಕೃತಿ, ಮಗುವಿಗೆ ತಾಯಿ ಎದೆಹಾಲು ನೀಡುವ ಹಾಗೂ ಸಹಜ ಹೆರಿಗೆಗಳ ಬಗ್ಗೆ ಹೂವಿನ ಕಲಾಕೃತಿಗಳಲ್ಲಿ ಅರಳಿಸಲಾಗಿದೆ. ಸಾಲುಮರದ ತಿಮ್ಮಕ್ಕನವರ ಸಾಧನೆ ಜೊತೆಗೆ ಅರಣ್ಯದ ಪರಿಕಲ್ಪನೆ, ನಮ್ಮ ಮನೆ ಅಡುಗೆ ಮನೆ ಕಡೆಗೆ ಎಂಬ ಬಗ್ಗೆ ಕ್ಯಾಪ್ಸಿಕಂ ಮನೆಯ ಕಲಾಕೃತಿ ಪ್ರದರ್ಶನ, ವಿವಿಧ ತಳಿಯ ಮೀನುಗಳ ಜೋಡಣೆ, ಅಕ್ವೇರಿಯಂ, ಮತ್ಸ್ಯಸಂಜೀವಿನಿ, ಅಕ್ಕನ ಮನೆಯ ಮೀನೂಟದ ಬಗ್ಗೆ ಒಂದು ಪರಿಕಲ್ಪನೆಯನ್ನು ಕಲಾಕೃತಿಯಲ್ಲಿ ಪ್ರದರ್ಶಿಸಲಾಗುವುದು ಎಂದು ನುಡಿದರು.

ರೇಷ್ಮೇಹುಳು, ಪ್ರವಾಸಿ ತಾಣಗಳು, ದೇವಸ್ಥಾನಗಳ ಕಲಾಕೃತಿ, ಮಹಿಳಾ ಕ್ರಿಕೆಟ್‌ನಲ್ಲಿ ಮಹಿಳೆಯರು ಗೆದ್ದಿರುವ ವಿಶ್ವಕಪ್, ಅಂಧರ ವಿಶ್ಕಪ್ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಮತದಾನದ ಬಗ್ಗೆ ಸೆಲ್ಫಿಪಾಯಿಂಟ್‌ಗಳನ್ನು ಕಲಾಕೃತಿಯಲ್ಲಿ ಪ್ರದರ್ಶಿಸಿದ್ದು, ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವುದು ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹೂವಿನ ಜೋಡಣೆಯಲ್ಲಿ ಪ್ರದರ್ಶಿಸಿರುವುದು ವಿಶೇಷವಾಗಿದೆ.

ಕಬ್ಬಿನ ಮನೆ, ಟೈರ್ ಫ್ಲವರ್ ಆರ್ಟ್, ಸ್ಯಾಂಡ್ ಆರ್ಟ್ ಹಾಗೂ ಜಾನೋರ್ ಆರ್ಟ್ ಇನ್ನೂ ಹಲವು ಮಾದರಿಗಳನ್ನು ಪ್ರದರ್ಶಿಸಲಾಗುತ್ತಿದೆ. ಐದಾರು ಸೆಲ್ಫಿ ಪಾಯಿಂಟ್‌ಗಳನ್ನು ಹಾಗೂ ತರಕಾರಿಗಳನ್ನು ಬಳಸಿ ವಿವಿಧ ಕಲಾಕೃತಿಗಳ ಕೆತ್ತನೆಗಳನ್ನು ರಚಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಕೆ.ಎನ್.ರೂಪಶ್ರೀ, ಉಮೇಶ್‌ಚಂದ್ರ, ಬಿ.ಎನ್.ಸುವೇದ ಕೃಷ್ಣಕುಮಾರ್, ಎಸ್.ಪಿ.ಶ್ರೀಧರ್, ಸಿ.ಎಸ್.ಅರುಣ್‌ಕುಮಾರ್ ಇದ್ದರು.೩೫ ಲಕ್ಷ ರು. ವೆಚ್ಚ:

ಫಲಪುಷ್ಪ ಪ್ರದರ್ಶನವನ್ನು ೩೫ ಲಕ್ಷ ರು. ವೆಚ್ಚದಲ್ಲಿ ಆಯೋಜಿಸಲಾಗಿದೆ. ೬೦ ಮಳಿಗೆಗಳನ್ನು ತೆರೆಯಲಾಗಿದ್ದು, ಒಂದೊಂದು ಮಳಿಗೆಗೆ ೧೦ ಸಾವಿರ ರು. ತೋಟಗಾರಿಕೆ ಇಲಾಖೆ ಹೊರಭಾಗದ ಮಳಿಗೆಗಳಿಗೆ ೨೦ ಸಾವಿರ ರು. ಶುಲ್ಕ ವಿಧಿಸಲಾಗಿದೆ. ಪ್ರವೇಶದರವನ್ನು ಹಿರಿಯರಿಗೆ ೩೦ ರು., ಮಕ್ಕಳಿಗೆ ೨೦ ರು. ನಿಗದಿಪಡಿಸಲಾಗಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸುಗಮವಾಗಿ ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿ ಸರಾಗವಾಗಿ ಹೊರಹೋಗುವಂತೆ ವ್ಯವಸ್ಥೆ ಮಾಡಲಾಗುವುದು. ಪೊಲೀಸ್ ಇಲಾಖೆಯಿಂದ ಹೆಚ್ಚಿನ ನೆರವು ಪಡೆಯಲಾಗುವುದು ಎಂದು ಕೆ.ಆರ್.ನಂದಿನಿ ಮಾಹಿತಿ ನೀಡಿದರು.ತೋಟಗಾರಿಕೆ ಸಂಘಕ್ಕೆ ಚುನಾವಣೆ:

ಹಲವು ದಶಕಗಳಿಂದ ಜಿಲ್ಲಾ ತೋಟಗಾರಿಕೆ ಸಂಘಕ್ಕೆ ಚುನಾವಣೆಯೇ ನಡೆದಿಲ್ಲವೆಂಬ ಮಾಹಿತಿ ಇದೆ. ರಾಜ್ಯದ ಯಾವ ಜಿಲ್ಲೆಯಲ್ಲೂ ಚುನಾವಣೆ ನಡೆದಿಲ್ಲವೆಂಬ ಕಾರಣಕ್ಕೆ ಮಂಡ್ಯ ಜಿಲ್ಲೆಯಲ್ಲೂ ಸಂಘ ಪುನಾರಚನೆಯಾಗಬೇಕೆಂದೇನಿಲ್ಲ. ಸಂಘಕ್ಕೆ ಚುನಾವಣೆ ನಡೆಸುವಂತೆ ಸೂಚಿಸಲಾಗುವುದು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಘಕ್ಕೆ ಚುನಾವಣೆ ನಡೆಸಲು ೪ ಲಕ್ಷ ರು. ಅವಶ್ಯಕತೆ ಇದೆ ಎಂಬ ಮಾಹಿತಿ ಇದೆ. ಆದರೂ ಖರ್ಚನ್ನು ಹಿಡಿತದಲ್ಲಿಟ್ಟುಕೊಂಡು ಪುನಾರಚನೆ ಮಾಡುವುದು ಉತ್ತಮ. ಸಂಘದ ಮೇಲುಸ್ತುವಾರಿಯಲ್ಲೇ ಫಲಪುಷ್ಪ ಪ್ರದರ್ಶನ ನಡೆಯುತ್ತಿರುವುದರಿಂದ ಅದರಿಂದ ಬಂದ ಆದಾಯ, ಖರ್ಚು-ವೆಚ್ಚಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ತೋಟಗಾರಿಕೆ ಜಂಟಿ ನಿರ್ದೇಶಕಿ ಕೆ.ಎನ್.ರೂಪಶ್ರೀ ಅವರಿಗೆ ಸೂಚಿಸಿದರು.