ವಿಜಯಪುರ ವಿಮಾನ ನಿಲ್ದಾಣದ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಭಗೀರಥ ಪ್ರಯತ್ನ ಅಡಗಿದೆ ಹೊರತು ಸಚಿವ ಡಾ.ಎಂ.ಬಿ. ಪಾಟೀಲರ ಪ್ರಯತ್ನ ಅಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ವಿಮಾನ ನಿಲ್ದಾಣದ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಭಗೀರಥ ಪ್ರಯತ್ನ ಅಡಗಿದೆ ಹೊರತು ಸಚಿವ ಡಾ.ಎಂ.ಬಿ. ಪಾಟೀಲರ ಪ್ರಯತ್ನ ಅಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2009ರಲ್ಲಿ ಬಿಜೆಪಿ ಸರ್ಕಾರ ಅವಧಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಲಾಗಿತ್ತು, 723 ಎಕರೆ ಭೂಸ್ವಾಧೀನ ಸೇರಿದಂತೆ ಅನೇಕ ಮಹತ್ವದ ಹೆಜ್ಜೆ ಇರಿಸಿದ್ದು ಬಿಜೆಪಿ. ಇದರಲ್ಲಿ ಬಿ.ಎಸ್.ಯಡಿಯೂರಪ್ಪ ನವರ ಭಗೀರಥ ಪ್ರಯತ್ನವಿದೆ ಹೊರತು ಸಚಿವ ಡಾ.ಎಂ.ಬಿ. ಪಾಟೀಲರ ಪ್ರಯತ್ನ ಎಳ್ಳಷ್ಟೂ ಇಲ್ಲ ಎಂದು ಸಮರ್ಥಿಸಿಕೊಂಡರು.
ಪೂರ್ಣ ಬಹುಮತದೊಂದಿಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೊಂಡು, ನಂತರ ಜೆಡಿಎಸ್ ಮೈತ್ರಿಯೊಂದಿಗೆ ಎರಡನೇ ಬಾರಿಯೂ ಅಧಿಕಾರ ಗದ್ದುಗೆ ಹಿಡಿದ ಕಾಂಗ್ರೆಸ್ ಆಗ ಏಕೆ ವಿಮಾನ ನಿಲ್ದಾಣ ಪೂರ್ಣಗೊಳಿಸಲಿಲ್ಲ?. ಅದನ್ನು ಪೂರ್ಣಗೊಳಿಸಲು ಬಸವರಾಜ ಬೊಮ್ಮಾಯಿ ವಿಶೇಷ ಮುತುವರ್ಜಿ ವಹಿಸಿ ಅನುದಾನ ನೀಡಿದ ಪರಿಣಾಮ ವಿಮಾನ ನಿಲ್ದಾಣ ಪೂರ್ಣಗೊಳ್ಳಲು ಸಾಧ್ಯವಾಯಿತು. ಒಂದರ್ಥದಲ್ಲಿ ಮನೆ ಸಿದ್ಧ ಮಾಡಿ, ಕೀಲಿಕೈ ಸಹ ಅವರ ಕೈಗೆ ಕೊಟ್ಟಾಗಿತ್ತು. ಕಾಂಗ್ರೆಸ್ ಸಣ್ಣ ಕೆಲಸ ಮಾಡಿದ್ದು, ಅಗ್ನಿಶಾಮಕ ವಾಹನ, ಪೂರಕ ಉಪಕರಣ ಖರೀದಿಮಾತ್ರ ಕಾಂಗ್ರೆಸ್ ಅವಧಿಯಲ್ಲಿ ಆಗಿದೆ. ಪರಿಸರ ನಿರಪೇಕ್ಷಣಾ ಪತ್ರ ದೊರಕದ ಕಾರಣ ವಿಮಾನ ನಿಲ್ದಾಣ ಆರಂಭವಾಗಿರಲಿಲ್ಲ. ಈಗ ಎಲ್ಲ ಕಾಮಗಾರಿ ತಮ್ಮ ಲೇಬಲ್ ಅಂಟಿಸಿಕೊಳ್ಳಲು ಮುಂದಾಗಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಬಿ.ಎಸ್. ಯಡಿಯೂರಪ್ಪ ಅವರಿಗೆ ಇದರ ಕ್ರೆಡಿಟ್ ಸಿಗಬೇಕು. ಜೊತೆಗೆ ಸಂಸದರಾದ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕ್ರೆಡಿಟ್ ಸಲ್ಲಬೇಕು. ಒಟ್ಟಾರೆ ನಿಲ್ದಾಣದ ಕ್ರೆಡಿಟ್ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು, ಆದರೆ ಈಗ ಶಾಸಕ ಯತ್ನಾಳ ಅವರು ಬಿಜೆಪಿಯಲ್ಲಿಲ್ಲ, ಹೀಗಾಗಿ ಪಕ್ಷದ ಕ್ರೆಡಿಟ್ ಅವರಿಗೆ ಸೇರಿಲ್ಲ ಎಂದು ಹೇಳಿದರು.ನೀರಾವರಿ ವಿಷಯವಾಗಿಯೂ ಸಹ ಎಂ.ಬಿ. ಪಾಟೀಲರು ಕ್ರೆಡಿಟ್ ಪಡೆದುಕೊಂಡಿದ್ದಾರೆ. ಕೆರೆ ತುಂಬುವ ಯೋಜನೆ ಅವೈಜ್ಞಾನಿಕ ಎಂದು ಕಾಂಗ್ರೆಸ್ ಸರ್ಕಾರ ಹೇಳಿತ್ತು, ಆದರೆ ಇದನ್ನು ಸಾಧ್ಯವಾಗಿಸಿದ್ದು ಬಿಜೆಪಿ ಸರ್ಕಾರ. ಆದರೂ ಎಲ್ಲ ಶ್ರೇಯಸ್ಸು ತಾವೇ ಪಡೆದುಕೊಂಡರು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಂಜಯ ಪಾಟೀಲ ಕನಮಡಿ, ಈರಣ್ಣ ರಾವೂರ, ಭೀಮಾಶಂಕರ ಹದನೂರ, ಡಿ.ಜಿ.ಬಿರಾದಾರ, ವಿಜಯ ಜೋಶಿ ಉಪಸ್ಥಿತರಿದ್ದರು.