ಸೋಮರಡ್ಡಿ ಅಳವಂಡಿ ಕೊಪ್ಪಳ
ತಗಡಿನ ಶೆಡ್ಡಿನಲ್ಲಿ ಮಲಗಲು ಮಾತ್ರ ಜಾಗ, ಬೆಳಗಾಗುವುದರೊಳಗಾಗಿ ಶೌಚಕ್ಕಾಗಿ ಸಾರ್ವಜನಿಕ ಶೌಚಾಲಯಕ್ಕೆ ಹೋಗಿ ಬರಬೇಕು. ಅಪ್ಪ, ನಿತ್ಯವೂ ತಳ್ಳುಗಾಡಿಯಲ್ಲಿ ಹಣ್ಣು ಮಾರಲು ಹೋಗುತ್ತಾನೆ. ತಾಯಿ ಖಾನಾವಳಿಯಲ್ಲಿ ರೊಟ್ಟಿ ಮಾಡಲು ಹೋಗುತ್ತಾಳೆ.ಇಂತಹ ಬಡತನದ ಬೇಗೆಯಲ್ಲಿ ಬೇಯುತ್ತಲೇ ಸೌಜನ್ಯಾ ಹನುಮಂತಪ್ಪ ಹೂವಿನಗೋಳ ನಗರದ ಕಾಳಿದಾಸ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. 625 ಅಂಕಗಳಿಗೆ 595 ಅಂಕ ಪಡೆದು ಶೇ. 95ರಷ್ಟು ಸಾಧನೆ ಮಾಡಿದ್ದಾಳೆ.
ನೂರಡಿ ಅಗಲವಿಲ್ಲದ ತಗಡಿನ ಶೆಡ್ಡು. ಅದು ಸಹ ಬಾಡಿಗೆ ಮನೆ. ಕಳೆದ ಹದಿನೆಂಟು ವರ್ಷಗಳಿಂದ ಅದೇ ಶೆಡ್ಡಿನಲ್ಲಿಯೇ ಇದ್ದಾರೆ. ಅದರಲ್ಲಿಯೇ ಮಲಗಬೇಕು. ಅದರಲ್ಲಿಯೇ ಅಡುಗೆ ಮಾಡಿಕೊಳ್ಳಬೇಕು. ಇವರಿಗೆಲ್ಲ ಸಾರ್ವಜನಿಕ ಶೌಚಾಲಯಗಳೇ ಆಸರೆ. ಹೀಗಾಗಿ, ಅವರು ಶೌಚಕ್ಕೂ ಹೋಗುವುದು ಅಪರೂಪ. ಅದೊಂದೆ ತಗಡಿನ ಕೊಠಡಿಯಲ್ಲಿಯೇ ಎಲ್ಲರೂ ಮಲಗಬೇಕು.ಹನುಮಂತಪ್ಪ ಹೂವಿನಗೋಳ ಅವರಿಗೆ ನಾಲ್ವರು ಹೆಣ್ಣುಮಕ್ಕಳು. ಸ್ವಂತಕ್ಕೆ ಮನೆಯೂ ಇಲ್ಲ. ಗುಂಟೆ ಭೂಮಿಯೂ ಇಲ್ಲ. ನಿತ್ಯವೂ ದುಡಿದು ತಂದರೆ ಊಟ, ಇಲ್ಲದಿದ್ದರೆ ಉಪವಾಸ. ಆದರೂ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂದು ತಂದೆ, ತಾಯಿ ಇಬ್ಬರು ಹಗಲಿರಳು ದುಡಿಯುತ್ತಿದ್ದಾರೆ.
ಬಡತನ ಅಡ್ಡಿ: ಮಗಳು ಸೌಜನ್ಯಾ ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿ ಮುಂದೆ ಎಂಬಿಬಿಎಸ್ ಮಾಡುವ ಕನಸು ಹೊಂದಿದ್ದಾಳೆ. ಆದರೆ, ಈಗ ಇದಕ್ಕೆಲ್ಲ ಬಡತನ ಅಡ್ಡಿಯಾಗಿದೆ. ಆಕೆಗೆ ಉತ್ತಮ ಕಾಲೇಜಿಗೆ ಪ್ರವೇಶ ಕೊಡಿಸುವಷ್ಟು ಶಕ್ತವಾಗಿಲ್ಲ. ಹೀಗಾಗಿ, ಮಗಳು ಟಾಪರ್ ಬಂದಿದ್ದರೂ ತಂದೆ, ತಾಯಿಗಳಿಬ್ಬರಿಗೂ ಆ ಖುಷಿ ಅನುಭವಿಸಲು ಆಗದೆ ಸಂಕಟ ಪಡುತ್ತಿದ್ದಾರೆ.
ಸೌಜನ್ಯ ಕೂಡಾ ದೊಡ್ಡ ಕನಸು ಹೊಂದಿದ್ದರೂ ಅಪ್ಪ, ಅಮ್ಮನಿಗೆ ಹೊರೆಯಾಗುವ ಮನಸ್ಸು ಇಲ್ಲ. ಹೀಗಾಗಿ, ಈಗ ಈಕೆಯ ಮುಂದಿನ ಓದಿಗೆ ನೆರವು ಬೇಕಾಗಿದೆ. ನೆರವು ಸಿಕ್ಕರೆ ಮಾತ್ರ ಆಕೆಯ ಮುಂದಿನ ಓದು ಸುಸೂತ್ರವಾಗುತ್ತದೆ. ಇಲ್ಲದಿದ್ದರೆ ಇಲ್ಲ ಎನ್ನುವಂತಾಗಿದೆ.
ನೆರವು ನೀಡುವವರು ಪೋನ್ ಪೇ ಸಂಖ್ಯೆ 7204171558 ಸಂಖ್ಯೆಗೆ ಸಂಪರ್ಕಿಸಬಹುದು ಅಥವಾ ಸೌಜನ್ಯಾ, ಎಸ್.ಬಿ. ಬ್ಯಾಂಕ್ ಖಾತೆ ಸಂಖ್ಯೆ 58548100000396 ಐಎಫ್ಎಸ್‌ಸಿ BARBOKOPPAL ಬ್ಯಾಂಕ್ ಆಫ್ ಬರೋಡಾ ಕೊಪ್ಪಳ ಖಾತೆಗೆ ನೆರವು ನೀಡಬಹುದು.ನಿಜಕ್ಕೂ ಅವರ ಮನೆ ಬಡತನ ನೋಡಿದರೆ ಕಣ್ಣೀರು ಬರುತ್ತದೆ. ಮಲಗಲು ಜಾಗ ಬಿಟ್ಟರೆ ಶೌಚಕ್ಕೆ ಸಾರ್ವಜನಿಕ ಶೌಚಾಲಯಕ್ಕೆ ಹೋಗಬೇಕು. ಅಂತಹ ಬಡತನದ ಬೇಗೆಯಲ್ಲಿ ನಮ್ಮ ಶಾಲೆಗೆ ಟಾಪರ್ ಬಂದಿದ್ದಾಳೆ. ಆಕೆಗೆ ಸೂಕ್ತ ನೆರವು ಬೇಕು ಎಂದು ಕೊಪ್ಪಳ ಕಾಳಿದಾಸ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾಮಣ್ಣ ಡಿ ತಿಳಿಸಿದ್ದಾರೆ.
ಮಗಳು ಟಾಪರ್ ಆಗಿದ್ದಾಳೆ. ಮುಂದೆ ಸೈನ್ಸ್ ಮಾಡ್ತೀನಿ ಅಂತಾಳೆ, ನೋಡಬೇಕು. ದೇವರು ದಾರಿ ತೋರಿಸಿದಂತೆ ಮಾಡುತ್ತೇವೆ. ನಮ್ಮ ಕೈಯಲ್ಲಿ ಶಕ್ತಿ ಇಲ್ಲ. ತಳ್ಳುಗಾಡಿಯಲ್ಲಿ ಹಣ್ಣು ಮಾರಿ ಬರುವ ಪುಡಿಗಾಸು ಜೀವನ ಸಾಗಿಸಲು ಆಗುವುದಿಲ್ಲ ಎಂದು ವಿದ್ಯಾರ್ಥಿನಿ ತಂದೆ ಹನುಮಂತಪ್ಪ ಹುವಿನಗೋಳ ತಿಳಿಸಿದ್ದಾರೆಫಲಿತಾಂಶ ಚೆನ್ನಾಗಿ ಬಂದಿರುವುದಕ್ಕೆ ಖುಷಿಯಾಗಿದೆ. ಆದರೆ, ಮುಂದೆ ಪಿಯುಸಿ ಸೈನ್ಸ್ ಮಾಡುವ ಬಯಕೆ ಇದೆಯಾದರೂ ಮನೆಯಲ್ಲಿ ಆರ್ಥಿಕ ಸಮಸ್ಯೆಯಿದೆ. ಆದರೂ ನಮ್ಮ ತಂದೆ ಓದಿಸಿಯೇ ಓದಿಸುತ್ತೇನೆ ಎನ್ನುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಸೌಜನ್ಯಾ ಹೇಳಿದ್ದಾರೆ.