ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನೇ ಬಂಡವಾಳ ಮಾಡಿಕೊಂಡು ವಿವಿಧ ಉದ್ಯೋಗ ಮಾಡುವ ಮೂಲಕ ನಿರಂತರ ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ.

ವಸಂತಕುಮಾರ ಕತಗಾಲ

ಕನ್ನಡಪ್ರಭ ವಾರ್ತೆ ಕಾರವಾರ

ರಾಜ್ಯದ ಕಾಂಗ್ರೆಸ್ ಸರ್ಕಾರ ಘೋಷಿಸಿದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಜಿಲ್ಲೆಯಲ್ಲಿ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಬದಲಾಯಿಸುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನೇ ಬಂಡವಾಳ ಮಾಡಿಕೊಂಡು ವಿವಿಧ ಉದ್ಯೋಗ ಮಾಡುವ ಮೂಲಕ ನಿರಂತರ ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ.

ಹೊನ್ನಾವರ ತಾಲೂಕು ಮಂಕಿ ಗ್ರಾಮದ ಮಾಲತಿ ಮೋಹನ ನಾಯ್ಕ ಗೃಹಲಕ್ಷ್ಮಿ ಯೋಜನೆಯ ಮೊತ್ತದಿಂದ ಹಣ್ಣಿನ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದು, ಅವರಿಗೆ ಯೋಜನೆಯು ಪತಿಯ ನಿಧನದ ನಂತರವೂ ಮಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಸಹಕಾರಿಯಾಗಿದೆ. ಕುದ್ರಿಗಿ ಗ್ರಾಮದ ಪಾರ್ವತಿ ಮಾದೇವ ನಾಯ್ಕ ಹಾಗೂ ಹಳದೀಪುರ ಗ್ರಾಮದ ವೀಣಾ ವೆಂಕಟೇಶ ಆಚಾರಿ ಮತ್ತು ಖರ್ವಾ ಗ್ರಾಮದ ಲಕ್ಷ್ಮೀ ನರಸಿಂಹ ಶೆಟ್ಟಿ ಚಿಕ್ಕದಾದ ಅಂಗಡಿ ಮಾಡಿ ಸ್ವಂತ ಆದಾಯ ಗಳಿಸುತ್ತಿದ್ದಾರೆ. ಕಡ್ಲೆ ಪಂಚಾಯಿತಿ ವಂದೂರ ಗ್ರಾಮದ ಮಹಾದೇವಿ ಲಕ್ಷ್ಮಣ ಪಟಗಾರ 2 ಹಸುಗಳನ್ನು ಖರೀದಿಸಿ ಹಾಲು ವ್ಯಾಪಾರದ ಮೂಲಕ ಆದಾಯ ಗಳಿಸುತ್ತಿದ್ದರೆ, ಕಾಸರಕೋಡ ಗ್ರಾಮದ ಸುಧಾ ನಾಯ್ಕ ಅವರು ಗೃಹಲಕ್ಷ್ಮೀ ಹಣದಿಂದ ಹಿಟ್ಟಿನ ಗಿರಣಿ ಖರೀದಿಸಿದ್ದು, ಬಳಕೂರು ಗ್ರಾಮದ ಕಲಾವತಿ ವೆಂಕಟ್ರಮಣ ನಾಯ್ಕ ಅವರು ಹೊಲಿಗೆ ಯಂತ್ರವನ್ನು ತೆಗೆದುಕೊಂಡು ಬಟ್ಟೆ ಹೊಲಿದು ಅದರಿಂದ ಬರುವ ಆದಾಯದಲ್ಲಿ ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ.

ಅಂಕೋಲಾ ತಾಲೂಕಿನ ತೆನಬೋಳೆ ಗ್ರಾಮದ ವಿದ್ಯಾ ಸಂತೋಷ ಗುನಗಾ ಗೃಹಲಕ್ಷ್ಮೀ ಯೋಜನೆಯ 13 ಕಂತುಗಳ ಹಣದಲ್ಲಿ ಹೊಲಿಗೆ ಯಂತ್ರವನ್ನು ಖರೀದಿಸಿ ಬಟ್ಟೆ ಹೊಲಿಯುತ್ತಿದ್ದು, ಬಟ್ಟೆ ಹೊಲಿದ ಹಣದಿಂದ ಮನೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸುತ್ತಿದ್ದು, ಈಚೆಗೆ ತಮ್ಮ ಕುಟುಂಬದ ಬಹುದಿನಗಳ ಆಸೆಯಾದ ಪ್ರೀಡ್ಜ್ ಖರೀದಿಸಿದ್ದು, ಅದರ ಹಣದ ಕಂತನ್ನು ಬಟ್ಟೆ ಹೊಲೆಯುವುದರಿಂದ ಬರುವ ಆದಾಯದಲ್ಲಿ ಪಾವತಿಸುತ್ತಿದ್ದಾರೆ.

ಮುಂಡಗೋಡು ತಾಲೂಕಿನ ಹರಗನಳ್ಳಿ ಗ್ರಾಮದ ಹಸೀನಾಬಿ ಗೌಸ್ ಮುದ್ದೇನಿಲಿಗಾರ ಗೃಹಲಕ್ಷ್ಮಿ ಹಣದಿಂದ ಬಳೆ ವ್ಯಾಪಾರ, ಸ್ಟೇಷನರಿ ಮತ್ತು ಮಕ್ಕಳ ಅಟಿಕೆ ಸಾಮಗ್ರಿಗಳನ್ನು ಖರೀದಿಸಿ ಅವುಗಳನ್ನು ಸಂತೆಯಲ್ಲಿ ಮಾರಿ ಆದಾಯ ಗಳಿಸುತ್ತಿದ್ದು, ಇದೇ ಆದಾಯದಲ್ಲಿ ಸೊಸೆಗೆ ಹೊಲಿಗೆಯಂತ್ರವನ್ನೂ ಸಹ ಕೊಡಿಸಿದ್ದು, ಪತಿಯ ನಿಧನದ ನಂತರ ತಲೆದೋರಿದ್ದ ಆರ್ಥಿಕ ಸಂಕಷ್ಠದಿಂದ ಹೊರಬಂದು ನೆಮ್ಮದಿಯ ಸಂತೋಷದ ಜೀವನ ಸಾಗಿಸುತ್ತಿದ್ದಾರೆ. ಮುಂಡಗೋಡ ಪಟ್ಟಣದ ಸಾಹೇರಾಬಾನು ವಾಷಿಂಗ್ ಮೆಷಿನ್ ಖರೀದಿಸಿದ್ದರೆ ಹುನಗುಂದಾ ಯಲ್ಲವ್ವ ಹುಗ್ಗಿ ತಮ್ಮ ಪ್ಯಾರಾಲೀಸಿಸ್ ಚಿಕಿತ್ಸೆಗೆ ಈ ಮೊತ್ತ ನೆರವಾಗುತಿದ್ದು ಚಿಕಿತ್ಸೆಯ ಹಣಕ್ಕಾಗಿ ಯಾರ ಬಳಿಯೂ ಕೈ ಚಾಚದೇ ಇರುವುದು ನೋವಿನ ನಡುವೆಯೂ ನೆಮ್ಮದಿ ನೀಡಿದೆ ಎನ್ನುತ್ತಾರೆ.

ಸಿದ್ದಾಪುರ ತಾಲೂಕಿನ ಸುಮನಾ ಸುರೇಶ್ ಗೌಡ ಕೊಡ್ತಗಣಿ ಜೆರ್ಸಿ ಆಕಳು ಮತ್ತು ಎಮ್ಮೆ ಖರೀದಿಸಿ ಪ್ರತೀ ತಿಂಗಳು 250 ಲೀಟರ್ ಹಾಲು ಮಾರಿ ಆರ್ಥಿಕ ಲಾಭ ಪಡೆಯುತ್ತಿದ್ದಾರೆ. ಹನುಮವ್ವ ಗೃಹಲಕ್ಷ್ಮಿ ಹಣದಿಂದ ಒಳಕಲ್ಲು, ಬನೆಕಲ್ಲು, ಕುಠಾಣಿಯ ವ್ಯಾಪಾರ ಮಾಡುತ್ತಾ ಆರ್ಥಿಕ ಸುಧಾರಣೆ ಕಂಡುಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 3,20,780 ಮಹಿಳೆಯರನ್ನು ನೋಂದಣಿ ಮಾಡಿದ್ದು, ಅವರಿಗೆ ಇದುವರೆಗೆ ಒಟ್ಟು ₹845.39 ಕೋಟಿ ನೆರವು ನೀಡಲಾಗಿದೆ ಎಂದು

ವಿರೂಪಾಕ್ಷ ಗೌಡ ಪಾಟೀಲ್, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ