ಸಾರಾಂಶ
ಫಲಪುಷ್ಪ ಪ್ರದರ್ಶನ ಮುಕ್ತಾಯ: ₹2.59 ಕೋಟಿ ಸಂಗ್ರಹ ದಾಖಲೆ. 5.61 ಲಕ್ಷಕ್ಕೂ ಅಧಿಕ ಮಂದಿ ಭೇಟಿ । ಕೊನೆಯ ದಿನವೂ ಹೆಚ್ಚು ಜನ
ಕನ್ನಡಪ್ರಭ ವಾರ್ತೆ ಬೆಂಗಳೂರು
ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ 215ನೇ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ವಿದ್ಯುಕ್ತ ತೆರೆಬಿತ್ತು. 11 ದಿನದಲ್ಲಿ ಒಟ್ಟಾರೆ 5.61 ಲಕ್ಷಕ್ಕೂ ಅಧಿಕ ಮಂದಿ ಸಸ್ಯಕಾಶಿಗೆ ಭೇಟಿ ನೀಡಿದ್ದು, ದಾಖಲೆಯ ₹2.59 ಕೋಟಿ ಪ್ರವೇಶ ಶುಲ್ಕ ಸಂಗ್ರಹವಾಗಿದೆ.ಈ ಬಾರಿ ಜ.18ರಿಂದ 28ರವರೆಗೆ ನಡೆದ ‘ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಫಲಪುಷ್ಪ ಪ್ರದರ್ಶನ’ಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಐದೂವರೆ ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಇತಿಹಾಸದಲ್ಲೇ ದಾಖಲೆಯ ₹2.59 ಕೋಟಿ ಪ್ರವೇಶ ಶುಲ್ಕ ಸಂಗ್ರಹವಾಗಿದೆ. ಕೊನೆಯ ದಿನವಾದ ಭಾನುವಾರ ಸುಮಾರು 76,500 ಮಂದಿ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದು, ₹37.5 ಲಕ್ಷ ಪ್ರವೇಶ ಶುಲ್ಕ ಸಂಗ್ರಹವಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಜೆ ದಿನವಾದ ಕಾರಣ ಬೆಳಗ್ಗೆಯಿಂದಲೇ ಕುಟುಂಬ ಸಹಿತ ವಿವಿಧ ಭಾಗಗಳಿಂದ ಜನರು ಆಗಮಿಸಿ ಪ್ರದರ್ಶನ ವೀಕ್ಷಿಸಿದರು. ಸುಗಮವಾಗಿ ಪ್ರದರ್ಶನ ವೀಕ್ಷಿಸಲು ಅನುಕೂಲವಾಗುವಂತೆ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹೆಚ್ಚಿನ ಟಿಕೆಟ್ ಕೌಂಟರ್‌ಗಳು ಇದ್ದ ಕಾರಣ ಟಿಕೆಟ್‌ಗೆ ನೂಕು ನುಗ್ಗಲು ಇರಲಿಲ್ಲ. ಗಾಜಿನ ಮಂಟಪ ಒಳಗೆ ಎಲ್ಲರನ್ನೂ ಏಕಾಏಕಿ ಒಳಗೆ ಬಿಡದೆ, ಸ್ವಲ್ಪ ಸ್ವಲ್ಪ ಜನರನ್ನು ಬಿಡುತ್ತಿದ್ದರಿಂದ ಜನರು ಆರಾಮವಾಗಿ ಪ್ರದರ್ಶನ ವೀಕ್ಷಿಸಿದರು. ಬಂದಂತಹ ಜನರು ಎಂದಿನಂತೆ ಸೆಲ್ಫಿ ಫೋಟೊಗಳಿಗೆ ಮುಗಿ ಬಿದ್ದಿದ್ದರು.ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ:
ಅನೇಕರು ಪ್ರದರ್ಶನ ವೀಕ್ಷಿಸಲು ಬಿಎಂಟಿಸಿ ಬಸ್‌ಗಳ ಬದಲು ಮೆಟ್ರೋ ರೈಲು ಮೂಲಕ ಆಗಮಿಸಿದ್ದರು. ಹೀಗಾಗಿ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು ಕಂಡು ಬಂದಿತ್ತು.ಬಾಕ್ಸ್...ಆಕರ್ಷಣೀಯ ಅನುಭವ ಮಂಟಪ
ಈ ಬಾರಿ ಸುಮಾರು 4.8 ಲಕ್ಷ ಹೂವುಗಳಿಂದ ಅನುಭವ ಮಂಟಪದ ಪ್ರತಿಕೃತಿ ನಿರ್ಮಿಸಲಾಗಿತ್ತು. ಬಸವಾದಿ ಶರಣರು, ಐಕ್ಯ ಮಂಟಪ, ಇಷ್ಟಲಿಂಗ ಮತ್ತಿತರ ಕಲಾಕೃತಿಗಳೂ ಗಮನ ಸೆಳೆದವು. ಫಲಪುಷ್ಪಪ್ರದರ್ಶನಕ್ಕೆ ಒಟ್ಟಾರೆ 68 ವಿವಿಧ ಜಾತಿಯ 30 ಲಕ್ಷಕ್ಕೂ ಅಧಿಕ ಹೂವುಗಳನ್ನು ಬಳಸಲಾಗಿತ್ತು.ಲಾಲ್‌ಬಾಗ್‌ನ ಆಯ್ದ ಸ್ಥಳಗಳಲ್ಲಿ ಎಲ್‌ಇಡಿ ಪರದೆಗಳ ಮೂಲಕ ಬಸವಾದಿ ಶರಣರ ತತ್ವಗಳನ್ನು ಪ್ರಸಾರ ಮಾಡಲಾಗಿತ್ತು. ಗಾಜಿನ ಮನೆ ಹಿಂಭಾಗದಲ್ಲಿ ಅಕ್ಕಮಹಾದೇವಿ, ಅಕ್ಕ ನಾಗಲಾಂಬಿಕೆ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಕುಂಬಾರ ಗುಂಡಣ್ಣ ಸೇರಿದಂತೆ 10 ಶರಣರ ಪ್ರತಿಮೆಗಳನ್ನು ನಿರ್ಮಿಸಲಾಗಿತ್ತು.