ಬಜೆಟ್‌ನಲ್ಲಿ ರೈತರ ಬೇಡಿಕೆ ಈಡೇರಿಸಿ

| Published : Feb 07 2024, 01:48 AM IST / Updated: Feb 07 2024, 04:32 PM IST

ಸಾರಾಂಶ

ರಾಜ್ಯ ಬಜೆಟ್ನಲ್ಲಿ ಸರ್ಕಾರ ರೈತರ ಬೇಡಿಕೆ ಹಾಗೂ ಹಕ್ಕುಗಳ ಮೇಲೆ ಮಂಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯ ಬಜೆಟ್‌ನಲ್ಲಿ ಸರ್ಕಾರ ರೈತರ ಬೇಡಿಕೆ ಹಾಗೂ ಹಕ್ಕುಗಳ ಮೇಲೆ ಮಂಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ‌ನಡೆಸಿ‌ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ರೈತರ ಬದುಕು ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತತ್ತರಿಸಿ ಹೋಗಿದೆ. ಕಳೆದೊಂದು ವರ್ಷದಿಂದ ಭೀಕರ ಬರಗಾಲ ಎದುರಾಗಿದೆ‌. ರೈತರು ಬೆಳೆದ ಕಬ್ಬಿನ ಉತ್ಪನ್ನಗಳಿಂದ ಸರ್ಕಾರದ ಬೊಕ್ಕಸಕ್ಕೆ ಜಮೆ ಆಗುತ್ತಿರುವ ಅಬಕಾರಿ ಶುಂಕದಲ್ಲಿ ರೈತರ ಪಾಲು ಪ್ರತಿ ಟನ್‌ ಕಬ್ಬಿಗೆ ಕನಿಷ್ಠ ₹3 ಸಾವಿರಗಳನ್ನು ರೈತರ ಖಾತೆಗೆ ಜಮಾ ಮಾಡಿಸುವ ಜವಾಬ್ದಾರಿಯನ್ನು ಶಾಸಕರೇ ವಹಿಸಿಕೊಳ್ಳಬೇಕು. ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರ ಸಾಲಮನ್ನಾ ಮಾಡುವ ಜವಾಬ್ದಾರಿಯನ್ನು ಎಲ್ಲ ಶಾಸಕರು ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ಶಾಸಕರೇ ಹೊಣೆಗಾರರಾಗುತ್ತಾರೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ‌.

ಕೃಷಿ ಇಲಾಖೆ, ಪಶು ಸಂಗೋಪನೆ ಇಲಾಖೆ, ಶುಗರ್ ಕಮಿಷನರ್ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯನ್ನು ಸದೃಢಗೊಳಿಸಬೇಕು. ಇದರಲ್ಲಿ ವಿಫಲವಾದರೆ ಶಾಸಕರ ಗೌರವ ಧನವನ್ನು ರೈತ ಪರಿಹಾರಕ್ಕೆ ವಿನಿಯೋಗಿಸಬೇಕು. ಗ್ರಾಮೀಣ ಪ್ರದೇಶಕ್ಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ನಿರಂತರ 12 ಗಂಟೆಗಳ ಕಾಲ 3 ಫೇಸ್‌ ಮತ್ತು ರಾತ್ರಿ ಸಮಯದಲ್ಲಿ ನಿರಂತರ ವಿದ್ಯುತ್‌ ಪೂರೈಯಿಸುವ ಹೊಣೆಯನ್ನು ಶಾಸಕರು ವಹಿಸಿಕೊಳ್ಳಬೇಕು. ಕೃಷಿ ಪಂಪಸೆಟ್‌ಗಳಿಗೆ ಸಂಪರ್ಕ ಕಲ್ಪಿಸುವ ಟಿಸಿ, ಕಂಬಗಳು ಸೇರಿದಂತೆ ಇನ್ನೀತರ ಜೋಡಣಾ ಸಾಮಗ್ರಿಗಳ ಸಂಪೂರ್ಣ ಖರ್ಚುಗಳನ್ನು ಸರ್ಕಾರವೇ ಭರಿಸಬೇಕು. ರೈತರ ಉತ್ಪನ್ನಗಳಿಗೆ ದಲ್ಲಾಳಿಗಳಿಂದ ವಿವಿಧ ರೀತಿಯಲ್ಲಿ ಮೋಸವನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಚುನ್ನಪ್ಪಾ ಪೂಜಾರಿ, ಪ್ರಕಾಶ ನಾಯಕ, ರಾಘವೇಂದ್ರ ನಾಯಕ, ಸುರೇಶ ಪರಗನ್ನವರ, ಕಿಶನ್ ನಂದಿ, ರಮೇಶ ವಾಲಿ, ಬಬನ ಮಲೈ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.