ಜಿಲ್ಲೆಯ ಇನ್ನುಳಿದ ನಾಲ್ಕು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಆಗ್ರಹಿಸಿ ರೈತ ಸಂಘ ಸೇರಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ನಡೆಸುತ್ತಿರುವ ಧರಣಿ ಸತ್ಯಾಗ್ರಹ 6ನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿ ಸತ್ಯಾಗ್ರಹಕ್ಕೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.
ಕನ್ನಡಪ್ರಭ ವಾರ್ತೆ ಭಾಲ್ಕಿ
ಜಿಲ್ಲೆಯ ಇನ್ನುಳಿದ ನಾಲ್ಕು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಆಗ್ರಹಿಸಿ ರೈತ ಸಂಘ ಸೇರಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ನಡೆಸುತ್ತಿರುವ ಧರಣಿ ಸತ್ಯಾಗ್ರಹ 6ನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿ ಸತ್ಯಾಗ್ರಹಕ್ಕೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಬಸವಲಿಂಗ ಪಟ್ಟದ್ದೇವರು ರೈತರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ಸಾಲಸೂಲ ಮಾಡಿ ಬಿತ್ತನೆ ಮಾಡಿದ ರೈತರು ಸಮರ್ಪಕ ಬೆಳೆ ಬೆಳೆಯಲಾಗದೆ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ರೈತರ ಗಂಭೀರ ಸಮಸ್ಯೆ ಅರಿತು ರೈತರಿಗೆ ನ್ಯಾಯ ಕೊಡಿಸುವ ಆಶಯದೊಂದಿಗೆ ರೈತ ಸಂಘ ಸೇರಿ ವಿವಿಧ ಸಂಘ ಸಂಸ್ಥೆಗಳು ನಡೆಸುತ್ತಿರುವ ಧರಣಿ ಸತ್ಯಾಗ್ರಹ ನ್ಯಾಯಯುತವಾಗಿದೆ.ಕಳೆದ ಆರು ದಿನಗಳಿಂದ ನಗರದಲ್ಲಿ ರೈತರು ತಮ್ಮ ದಿನನಿತ್ಯದ ಕೆಲಸ ಬಿಟ್ಟು ಮನೆ ತೊರೆದು ಹಗಲು ರಾತ್ರಿ ಎನ್ನದೇ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ, ರಾಜ್ಯ ಸರ್ಕಾರ ಕೂಡಲೇ ಜಿಲ್ಲೆಯ ಉಳಿದ ತಾಲೂಕು ಬರಪೀಡಿತ ಪಟ್ಟಿಗೆ ಸೇರಿಸುವುದು ಸೇರಿ ರೈತರ ವಿವಿಧ ನ್ಯಾಯಯುತ ಬೇಡಿಕೆ ಈಡೇರಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಈ ಸಂರ್ದಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪ್ರಮುಖರಾದ ಖಾಸೀಂ ಅಲಿ, ಚನ್ನಬಸವ ಬಳತೆ, ಕಿರಣ ಖಂಡ್ರೆ, ಜೈರಾಜ ಕೊಳ್ಳಾ, ನಾಗಶೆಟೆಪ್ಪ ಲಂಜವಾಡೆ, ಅಶೋಕ ಕಾರಬಾರಿ, ಸಂಗಮೇಶ ಕಾರಮುಂಗೆ, ಮಲ್ಲಿಕಾರ್ಜುನ ಬಿರಾದಾರ, ವಿಠಲರಾವ ಮೇತ್ರೆ, ಭವರಾವ ನೆಲವಾಡೆ, ಡಿಗಂಬರರಾವ ಮಾನಕಾರಿ, ಪಂಡರಿ ಮೇತ್ರೆ, ವೀರಾರೆಡ್ಡಿ ಪಾಟೀಲ್, ಬಾಬುರಾವ ಧನಾಸುರೆ ಸೇರಿದಂತೆ ಹಲವರು ಇದ್ದರು.