ಸಾರಾಂಶ
ರಾಮನಗರ: ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಜಿಲ್ಲಾಡಳಿತ ಸಂಪೂರ್ಣ ನೆರವು ನೀಡಲಿದ್ದು, ಭೂಮಿ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ಬದ್ದವಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿಟಿಪಿಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಎಂಎಸ್‌ಎಇ ಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವ (ಆರ್‌ಎಎಂಪಿ) ಯೋಜನೆಯಡಿ ಲೀನ್, ಝಡ್‌ಇಡಿ ಹಾಗೂ ರಫ್ತು ಕುರಿತು ಆಯೋಜಿಸಿದ್ದ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕ ಅತ್ಯಂತ ಸಮೃದ್ಧ ರಾಜ್ಯವಾಗಿದೆ. ಇಲ್ಲಿ ಕೈಗಾರಿಕೆಗಳಿಗೆ ವಿಫುಲ ಅವಕಾಶಗಳಿವೆ. ಯಾವುದೇ ರೀತಿಯ ಅಡ್ಡಿ ಆತಂಕಗಳಿಲ್ಲ, ಕೈಗಾರಿಕೆಗಳನ್ನು ಸ್ಥಾಪಿಸುವ ಸಣ್ಣ ಸಣ್ಣ ಉದ್ದಿಮೆದಾರರು ತಮ್ಮ ಉದ್ಯಮಗಳನ್ನು ದೊಡ್ಡದಾಗಿ ಬೆಳೆಸುವ ಕನಸು ಕಾಣಬೇಕು. ಅದನ್ನು ಸಕಾರಗೊಳಿಸಲು ಅಗತ್ಯ ಕ್ರಮವಹಿಸಬೇಕು. ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುವಾಗ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಸೋಲಾರ್ ಪ್ಯಾನಲ್ ತಯಾರಿಕೆ ಹಾಗೂ ಡೆಟಾ ಸೆಂಟರ್ ಉದ್ಯಮಗಳಿಗೆ ಭವಿಷ್ಯದಲ್ಲಿ ಭರವಸೆ ಇದೆ. ಕೈಗಾರಿಕೋದ್ಯಮಿಗಳು ಆದಷ್ಟು ಸಣ್ಣ ಕೈಗಾರಿಕೆಗಳಿಗೆ ಮಹತ್ವ ನೀಡುವ ಮೂಲಕ ರಾಜ್ಯದ ಕೈಗಾರಿಕಾ ಪ್ರಗತಿಯನ್ನು ಮತ್ತಷ್ಟು ವೃದ್ದಿಸುವಂತೆ ಯಶವಂತ್ ಹೇಳಿದರು.
ವಿಟಿಪಿಸಿ ಜಂಟಿ ನಿರ್ದೇಶಕ ಸಿ.ಎಸ್. ಬಾಬು ನಾಗೇಶ್ ಮಾತನಾಡಿ, ಕೈಗಾರಿಕೋದ್ಯಮಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು, ನಮ್ಮ ರಾಜ್ಯವು ಮಾಹಿತಿ ತಂತ್ರಜ್ಞಾನದಲ್ಲಿ ಅಗ್ರಸ್ಥಾನದಲ್ಲಿದೆ ಎಂದರು.ಜಿಪಂ ಉಪ ಕಾರ್ಯದರ್ಶಿ ಚಿಕ್ಕಸುಬ್ಬಯ್ಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವಿ.ಎನ್.ವೀರಭದ್ರಸ್ವಾಮಿ, ಬಿಡದಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಷನ್ ಆರ್, ಹಾರೋಹಳ್ಳಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಉಮಾಪತಿ, ಕಾಸಿಯಾ ಉಪಾಧ್ಯಕ್ಷ ಗಣೇಶ್ ರಾವ್, ಜಂಟಿ ಕಾರ್ಯದರ್ಶಿ ಸತೀಶ್, ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್, ಜಿಲ್ಲಾ ಅಭಿವೃದ್ಧಿ ಉಪಸಮಿತಿ ಅಧ್ಯಕ್ಷ ಬೋರೆಗೌಡ, ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜನರ್ ವೀರಾಂಜನೇಯಲು, ಬಿಡದಿ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಮುರಳಿ ಉಪಸ್ಥಿತರಿದ್ದರು.
ಕೈಗಾರಿಕಾ ಉದ್ಯಮಿಗಳು, ಆಸಕ್ತರು ಭಾಗವಹಿಸಿದ್ದರು. ಜಿಲ್ಲಾ ಪಂಚಾಯತ್ ಸಭಾಂಗಣದ ಆವರಣದಲ್ಲಿ ಗೃಹ, ಆಟಿಕೆ ಹಾಗೂ ಇತರೆ ಕೈಗಾರಿಕೆಗಳಿಗೆ ಸಂಬಂಧಿಸಿದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.(ಫೋಟೊ ಕ್ಯಾಫ್ಷನ್)
ರಾಮನಗರ ಜಿಪಂ ಸಭಾಂಗಣದ ಆವರಣದಲ್ಲಿ ಗೃಹ, ಆಟಿಕೆ ಹಾಗೂ ಇತರೆ ಕೈಗಾರಿಕೆಗಳಿಗೆ ಸಂಬಂಧಿಸಿದ ವಸ್ತು ಪ್ರದರ್ಶನವನ್ನು ಜಿಲ್ಲಾಧಿಕಾರಿ ಯಶವಂತ್ ಹಾಗೂ ಅತಿಥಿಗಳು ವೀಕ್ಷಿಸಿದರು.