ಮುಂಗಾರು ಮಳೆ ಉತ್ತಮವಾಗುವ ನಿರೀಕ್ಷೆ : ಅರಿಷಿಣ ಬೀಜಕ್ಕೆ ಫುಲ್‌ ಡಿಮ್ಯಾಂಡ್‌!

| Published : Apr 26 2024, 12:51 AM IST / Updated: Apr 26 2024, 01:11 PM IST

ಮುಂಗಾರು ಮಳೆ ಉತ್ತಮವಾಗುವ ನಿರೀಕ್ಷೆ : ಅರಿಷಿಣ ಬೀಜಕ್ಕೆ ಫುಲ್‌ ಡಿಮ್ಯಾಂಡ್‌!
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಉತ್ತಮವಾಗುವ ನಿರೀಕ್ಷೆಯಲ್ಲಿ ರೈತರು ಅರಿಷಿನ ಬೀಜ ಖರೀದಿಗೆ ಮುಗಿಬೀಳುತ್ತಿದ್ದು, ಬೀಜದ ಬೇಡಿಕೆ ದುಪ್ಪಟ್ಟಾಗಿದೆ.

ಶಿವಾನಂದ ಮಹಾಬಲಶೆಟ್ಟಿ

  ರಬಕವಿ-ಬನಹಟ್ಟಿ : ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಉತ್ತಮವಾಗುವ ನಿರೀಕ್ಷೆಯಲ್ಲಿ ರೈತರು ಅರಿಷಿನ ಬೀಜ ಖರೀದಿಗೆ ಮುಗಿಬೀಳುತ್ತಿದ್ದು, ಬೀಜದ ಬೇಡಿಕೆ ದುಪ್ಪಟ್ಟಾಗಿದೆ. ಅರಿಷಿಣಕ್ಕೆ ಉತ್ತಮ ಬೆಲೆ ಇರುವುದರಿಂದ ಈ ಭಾಗದ ರೈತರು ಅರಿಷಿಣ ಬೆಳೆಯತ್ತ ಆಕರ್ಷಿತರಾಗಿದ್ದು, ಮುಂಚಿತವಾಗಿಯೇ ಬೀಜ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಈ ಭಾಗಕ್ಕೆ ತಮಿಳುನಾಡಿನ ಸೇಲಂ ಹಾಗೂ ಆಂಧ್ರದ ಕಡಪಾ ಪಟ್ಟಣಗಳಿಂದ ಅರಿಷಿಣ ಬೀಜ ತರಿಸಿಕೊಳ್ಳಲಾಗುತ್ತಿದೆ. ಈ ಬಾರಿ ತಮಿಳುನಾಡಿನಲ್ಲಿ ಮಳೆ ಪ್ರಮಾಣ ತೀರ ಕಡಿಮೆಯಾದ ಕಾರಣ ಸೇಲಂ ಪಟ್ಟಣದಲ್ಲಿ ಅರಿಷಿಣ ಬೀಜದ ಇಳುವರಿ ಕಡಿಮೆಯಾಗಿದ್ದು, ಸೇಲಂನಿಂದ ಬರುವ ಅರಿಷಿಣ ಬೀಜಗಳ ಪೂರೈಕೆಯೂ ಕಡಿಮೆಯಾಗಿದೆ. ಹೀಗಾಗಿ ಬೇಡಿಕೆ ಹೆಚ್ಚಾಗಿ ಬೆಲೆ ಕೂಡ ಗಗನಕ್ಕೇರಲು ಕಾರಣವಾಗಿದೆ ಎನ್ನುತ್ತಾರೆ ಇಲ್ಲಿನ ಬೀಜಗಳ ವ್ಯಾಪಾರಸ್ಥರು.

ಸೇಲಂನಲ್ಲಿ ಮಳೆ ಕಳೆದ ಸಾಲಿನಲ್ಲಿ ಮಳೆ ಕೊರತೆಯಿಂದ ಕೆಲವೇ ಕೆಲವು ರೈತರಲ್ಲಿ ಮಾತ್ರ ಅರಿಷಿಣ ಬೀಜಗಳ ಸಂಗ್ರಹವಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಲ್ಲಿ ಬೀಜಗಳ ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ. ಇದರಿಂದ ಕರ್ನಾಟಕದಲ್ಲಿಯೂ ಬೀಜಗಳ ಕೊರತೆಯಾಗಿದೆ ಮತ್ತು ಬೆಲೆಗಳಲ್ಲಿ ಕೂಡ ಗಣನೀಯ ಹೆಚ್ಚಳವಾಗಿದೆ. ಕಳೆದ ಸಲ ಒಂದು ಕ್ವಿಂಟಲ್ ಸೇಲಂ ಚೆನ್ ಎಂಬ ಹೆಸರಿನ ಅರಿಷಿನ ಬೀಜಕ್ಕೆ ₹ 4000 ಇತ್ತು. ಆದರೆ, ಈ ಬಾರಿ ₹ ೭೬೦೦ಕ್ಕೆ ಮಾರಾಟವಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಂಭವವಿದೆ ಎನ್ನುತ್ತಾರೆ ರೈತರಾದ ಮಲ್ಲಪ್ಪ ಕೊಟಬಾಗಿ.

ಉತ್ತಮ ಮಳೆಯಾಗುತ್ತದೆ ಎಂಬ ಅಪಾರ ನಂಬಿಕೆಯ ಮೇಲೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಅರಿಷಿಣ ನಾಟಿಗೆ ಸಜ್ಜಾಗುತ್ತಿದ್ದಾರೆ. ಜಗದಾಳ, ನಾವಲಗಿ ಗ್ರಾಮಗಳ ಸುತ್ತಮುತ್ತಲಿನ ಭಾಗದಲ್ಲಿ ಅಂದಾಜು 100  ಟನ್‌ಗೂ ಹೆಚ್ಚು ಅರಿಷಿಣ ಬೀಜ ಮಾರಾಟವಾಗುತ್ತವೆ. ಒಂದು ಲಾರಿಯಲ್ಲಿ ೧೦ ರಿಂದ ೧೬ ಟನ್‌ ನಷ್ಟು ಬೀಜಗಳು ಬರುತ್ತವೆ. ಜಗದಾಳ ಗ್ರಾಮಕ್ಕೆ ಅರಿಷಿಣ ಬೀಜ ಖರೀದಿಸಲು ರಬಕವಿ-ಬನಹಟ್ಟಿ, ಜಮಖಂಡಿ, ಗೋಕಾಕ, ರಾಯಬಾಗ ಮತ್ತು ಅಥಣಿ ತಾಲೂಕಿನ ವಿವಿಧ ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ರೈತರು ಆಗಮಿಸುತ್ತಿದ್ದಾರೆ.

ಒಟ್ಟಿನಲ್ಲಿ ಅರಿಷಿಣ ಕೃಷಿ ರೈತರಿಗೆ ಪರಿಶ್ರಮದ ಬೆಳೆಯಾಗಿದ್ದರೂ, ಅರಿಷಿಣಕ್ಕೆ ಸಾಂಗ್ಲಿ ಮಾರುಕಟ್ಟೆಯಲ್ಲಿ ಈ ಬಾರಿ ₹ ೧೫೦೦೦ ಪ್ರತಿ ಕ್ವಿಂಟಲ್‌ಗೆ ಮಾರಾಟವಾಗುತ್ತಿದೆ. ಆದ್ದರಿಂದ ರೈತರು ಬೀಜ ಖರೀದಿಗೆ ಮುಗಿಬೀಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಲಾಭವಾಗಬಹುದು ಎಂಬ ಭರವಸೆಯೊಂದಿಗೆ ರೈತರು ಅರಿಷಿಣ ಬೆಳೆಯಲು ಸಜ್ಜಾಗಿದ್ದಾರೆ.ಸಾಕಷ್ಟು ಕಲಬೆರೆಕೆ ಅರಿಷಿನ ಬೀಜಗಳು ಬರುತ್ತಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಆದರೂ ಜಗದಾಳ ಭಾಗದಲ್ಲಿ ಮಾರಾಟವಾಗುವ ಬೀಜ ಗುಣಮಟ್ಟದ್ದಾಗಿರುತ್ತದೆ. ಕಳೆದ ೧೦ ವರ್ಷದಿಂದ ಇಲ್ಲಿಯೇ ನಾವು ಬೀಜ ಖರೀದಿ ಮಾಡುತ್ತಿದ್ದೇವೆ. ಬರಗಾಲ ಪರಿಸ್ಥಿತಿ ಇದ್ದರೂ ಈ ಬಾರಿಯ ಮುಂಗಾರು ಮಳೆ ಉತ್ತಮವಾಗುತ್ತದೆ ಎಂಬ ಭರವಸೆಯಿಂದ ಬೀಜ ಸಂಗ್ರಹಿಸುತ್ತಿದ್ದೇವೆ.

-ಕೇಶವ ಬಾಬು ಹಾರೂಗೇರಿ ಚಿಂಚಲಿ ಗ್ರಾಮದ ರೈತ