ಸಾರಾಂಶ
ಡಿ. 20ರಂದು ಮಡಿಕೇರಿಯಲ್ಲಿ ನಡೆಯುವ ರೈತರ ಸಮಾವೇಶಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹರಪಳ್ಳಿ ರವೀಂದ್ರ ಹೇಳಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಿ ಆ್ಯಂಡ್ ಡಿ ಕೃಷಿ ಭೂಮಿಗೆ ಹಕ್ಕುಪತ್ರಕ್ಕೆ ಆಗ್ರಹಿಸಿ ಡಿ. 20ರಂದು ಮಡಿಕೇರಿಯಲ್ಲಿ ನಡೆಯುವ ರೈತರ ಸಮಾವೇಶಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹಾಗು ಕೊಡಗು ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಹೇಳಿದರು.ಸಿ ಆ್ಯಂಡ್ ಡಿ ಕೃಷಿ ಭೂಮಿ ವಿಚಾರದ ಕುರಿತು ಬೆಂಗಳೂರಿನಲ್ಲಿ ಅರಣ್ಯ, ಕಂದಾಯ ಮಂತ್ರಿಗಳನ್ನು ಭೇಟಿಯಾಗಿ ರೈತರ ಸಂಕಷ್ಟಗಳನ್ನು ಹೇಳಿದ್ದೇವೆ. ರೈತರ ಪರವಾಗಿ ರಾಜ್ಯ ಸರ್ಕಾರ ನಿಲ್ಲಬೇಕೆಂದು ಕೇಳಿಕೊಂಡಿದ್ದೇವೆ. ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೃಷಿ ಭೂಮಿಯನ್ನೇ ಸಿ ಆ್ಯಂಡ್ ಡಿ (ಕೃಷಿ ಯೋಗ್ಯವಲ್ಲದ ಭೂಮಿ) ಎಂದು ಗುರುತಿಸಲಾಗಿದೆ. ಬಹುತೇಕ ಮಂದಿ ನಾಲ್ಕೈದು ದಶಕಗಳಿಂದ ಮೂರ‍್ನಾಲ್ಕು ಎಕರೆ ಜಾಗದಲ್ಲಿ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈಗ ಆ ಭೂಮಿಯನ್ನು ತೆರವುಗೊಳಿಸಿ ಅರಣ್ಯ ಮಾಡಿದರೆ, ರೈತರು ಬೀದಿಪಾಲಾಗಬೇಕಾಗುತ್ತದೆ ಎಂದು ಹೇಳಿದರು.ಸಿ ಆ್ಯಂಡ್ ಡಿ ಜಾಗದ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದ್ದು, ರಾಜ್ಯ ಸರ್ಕಾರ ರೈತರ ಪರವಾಗಿ ಅಫಿಡೆವಿಟ್ ಸಲ್ಲಿಸುವುದಕ್ಕೆ ಅವಕಾಶವಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ರೈತರಾದ ಪ್ರಣಿತ್, ಬಸಪ್ಪ ಇದ್ದರು.