ಸಾರಾಂಶ
ಕ್ರೀಡಾಂಗಣ ನಿರ್ಮಾಣಕ್ಕೆ ಜಮೀನನ್ನು ಸಂಘ ಗುರುತಿಸಿದರೆ ಸರ್ಕಾರದ ಮಟ್ಟದಲ್ಲಿ ಮಂಜೂರು ಮಾಡಿಸಲಾಗುವುದು. ಒಂದು ವೇಳೆ ಸರ್ಕಾರದ ಮಟ್ಟದಲ್ಲಿ ಸಾಧ್ಯವಾಗದಿದ್ದಲ್ಲಿ ಶಾಸಕರ ಅನುದಾನದಲ್ಲಿ 25 ರಿಂದ 30 ಲಕ್ಷ ರು.ಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ಮದ್ದೂರು
ಅರ್ಜುನ ಪುರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ನಿರ್ಮಿಸಲು ಉದ್ದೇಶಿಸಿರುವ ಒಳಾಂಗಣ ಕ್ರೀಡಾಂಗಣಕ್ಕೆ ಅಗತ್ಯ ಹಣವನ್ನು ತಮ್ಮ ಶಾಸಕರ ಅನುದಾನದಲ್ಲಿ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಶನಿವಾರ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಅರ್ಜುನ ಪುರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಆಸಕ್ತಿ ಹೊಂದಿರುವುದು ಶ್ಲಾಘನೀಯ ಎಂದರು.ಕ್ರೀಡಾಂಗಣ ನಿರ್ಮಾಣಕ್ಕೆ ಜಮೀನನ್ನು ಸಂಘ ಗುರುತಿಸಿದರೆ ಸರ್ಕಾರದ ಮಟ್ಟದಲ್ಲಿ ಮಂಜೂರು ಮಾಡಿಸಲಾಗುವುದು. ಒಂದು ವೇಳೆ ಸರ್ಕಾರದ ಮಟ್ಟದಲ್ಲಿ ಸಾಧ್ಯವಾಗದಿದ್ದಲ್ಲಿ ಶಾಸಕರ ಅನುದಾನದಲ್ಲಿ 25 ರಿಂದ 30 ಲಕ್ಷ ರು.ಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ದಿ.ಜಿ.ಮಾದೇಗೌಡರಿಂದ ಸ್ಥಾಪಿತವಾದ ಭಾರತಿ ವಿದ್ಯಾ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿದೆ. ಪ್ರತಿ ವರ್ಷ ಪಿಯುಸಿ ಮತ್ತು ಪದವಿ ಶಿಕ್ಷಣ ಪಡೆಯುತ್ತಿರುವ 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಕ್ರೀಡಾ ಸಂಘ ಉನ್ನತ ಶಿಕ್ಷಣ ಪಡೆಯ ಬಯಸುವ ವಿದ್ಯಾರ್ಥಿಗಳನ್ನು ಗುರುತಿಸಿ ಶಿಫಾರಸ್ಸು ಮಾಡಿದರೆ ಅಂತಹ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಸೌಲಭ್ಯದ ಜೊತೆಗೆ ಉಚಿತ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದರು.ಅರ್ಜುನ ಪುರಿ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಘ ಉದ್ಘಾಟನೆ ಅಂಗವಾಗಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಮದ್ದೂರಿನ ಹೃದಯ ಭಾಗದಲ್ಲಿ ಹಾಲಿ ಇರುವ ತಾಲೂಕು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ಜೊತೆಗೆ ಹೊಸದಾಗಿ ಬೃಹತ್ ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯವಾದ ಜಮೀನನ್ನು ಸರ್ಕಾರದೊಂದಿಗೆ ಚರ್ಚೆ ನಡೆಸುವುದಾಗಿ ಆಶ್ವಾಸನೆ ನೀಡಿದರು.
ರಾಷ್ಟ್ರೀಯ ಕಬಡ್ಡಿ ಆಟಗಾರರ ತಂಡದ ವಿ.ಕೆ.ಹರೀಶ್ ಕ್ರೀಡಾ ಸಂಘದ ಉದ್ಘಾಟನೆ ನೆರವೇರಿಸಿದರು. ಭಾರತಿ ವಿದ್ಯಾ ಸಂಸ್ಥೆ ಸಿಇಒ ಅಶಯ್ ಮಧು, ಕೆ.ಹೊನ್ನಲಗೆರೆ ಆರ್.ಕೆ.ವಿದ್ಯಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಆರ್.ವಿನಯ್ ರಾಮಕೃಷ್ಣ, ಕ್ರೀಡಾ ಸಂಘದ ಅಧ್ಯಕ್ಷ ಎನ್.ಆರ್.ಪ್ರಸನ್ನ, ಕಾರ್ಯದರ್ಶಿ ಅ.ವಿ.ನಂದನ್, ಕಾರ್ಯದರ್ಶಿ ಶಿವಶಂಕರ್, ಶ್ರೀನಿವಾಸ, ಜಂಟಿ ಕಾರ್ಯದರ್ಶಿ ಸುಧೀರ್, ಕ್ರೀಡಾ ಕಾರ್ಯದರ್ಶಿ ದೀಪಕ್ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.