ಒಕ್ಕಲಿಗ ಸಮುದಾಯ ಭವನಕ್ಕೆ ಅನುದಾನ: ಶಾಸಕ ಶ್ರೀನಿವಾಸ್‌

| Published : Jul 01 2025, 12:48 AM IST

ಸಾರಾಂಶ

ತಾಲೂಕಿನ ಒಕ್ಕಲಿಗರ ಮಹಿಳಾ ಸಮಾಜಕ್ಕೆ ಜಾಗ ಹಾಗೂ ತಾಲೂಕು ಒಕ್ಕಲಿಗರ ಸಂಘದ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ದಾಖಲೆ ನೀಡಿದರೆ ಅದಕ್ಕೂ ಸಹಕರಿಸಲಾಗುವುದು. ತಾಲೂಕಿನಲ್ಲಿ 1.5 ಎಕರೆಯಿಂದ 3 ಎಕರೆಯಷ್ಟು ಜಾಗ ಸಹ ನೀಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ನೆಲಮಂಗಲ

ಕ್ಷೇತ್ರದ ಶಾಸಕನಾಗಲು ಒಕ್ಕಲಿಗ ಸಮುದಾಯ ಬಲ ನೀಡಿದ್ದು, ನಗರಸಭೆ ವ್ಯಾಪ್ತಿಯಲ್ಲಿ 35,500 ಅಡಿ ಜಾಗ ಮುಂಜೂರಾತಿ ಆದೇಶ ನೀಡಿದ್ದು ಸರ್ಕಾರದಿಂದ 5 ಕೋಟಿ, ವೈಯಕ್ತಿಕವಾಗಿ 1 ಕೋಟಿ ಅನುದಾನ ನೀಡಲಾಗುತ್ತದೆ ಎಂದು ಶಾಸಕ ಎನ್.ಶ್ರೀನಿವಾಸ್ ಘೋಷಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡ ಜಯಂತಿಗೆ ಪಕ್ಷಾತೀತವಾಗಿ ಎಲ್ಲಾ ಸಮುದಾಯದ ಮುಖಂಡರು ಭಾಗವಹಿಸಿ ಅದ್ಧೂರಿಯಾಗಿ ಆಚರಿಸುತ್ತಿರುವುದು ಸಂತೋಷದ ವಿಷಯ. ಮಾತು ಕೊಟ್ಟಂತೆ ಜಾಗ ಮುಂಜೂರು ಮಾಡಿ ಖಾತೆ ಮಾಡಿಸಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ಗೆ ದಾಖಲೆ ಹಸ್ತಾಂತರ ಮಾಡಲಾಗಿದೆ. ರಾಜ್ಯದಲ್ಲಿಯೇ ವಿಶೇಷ ರೀತಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು. ಕೆಂಪೇಗೌಡರು ಕೆರೆಗಳಿಗೆ ಹೆಚ್ಚು ಆದ್ಯತೆ ನೀಡಿರುವುದು ಮರೆಯುವಂತಿಲ್ಲ, ಅವರ ಯೋಜನೆಯಂತೆ ತಾಲೂಕಿನ ಕೆರೆಗಳ ಅಭಿವೃದ್ಧಿಗೆ 400 ಕೋಟಿಗೂ ಹೆಚ್ಚು ಅನುದಾನ ಹಾಗು ಅಂತರ್ಜಲ ಹೆಚ್ಚಳಕ್ಕೆ ವೃಷಭಾವತಿ ಶುದ್ಧೀಕರಿಸಿದ ನೀರು ಹಾಗೂ ಎತ್ತಿನ ಹೊಳೆ ನೀರನ್ನೂ ಸಹ ತರಲಾಗುತ್ತದೆ ಎಂದು ಭರವಸೆ ನೀಡಿದರು.

ಮಹಿಳಾ ಸಮಾಜಕ್ಕೆ ಸಹಕಾರ:

ತಾಲೂಕಿನ ಒಕ್ಕಲಿಗರ ಮಹಿಳಾ ಸಮಾಜಕ್ಕೆ ಜಾಗ ಹಾಗೂ ತಾಲೂಕು ಒಕ್ಕಲಿಗರ ಸಂಘದ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ದಾಖಲೆ ನೀಡಿದರೆ ಅದಕ್ಕೂ ಸಹಕರಿಸಲಾಗುವುದು. ತಾಲೂಕಿನಲ್ಲಿ 1.5 ಎಕರೆಯಿಂದ 3 ಎಕರೆಯಷ್ಟು ಜಾಗ ಸಹ ನೀಡಲಾಗುತ್ತದೆ. ನೆಲಮಂಗಲ ನಗರದ ಅಮಾನಿಕೆರೆ ಅಭಿವೃದ್ಧಿ ಮಾಡಿ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಲಾಗುತ್ತದೆ ಎಂದರು ಘೋಷಿಸಿದರು.

ಅದ್ದೂರಿ ಮೆರವಣಿಗೆ:

ನಗರದ ಟಿ.ಬಿ ಬಸ್‌ನಿಲ್ದಾಣದಿಂದ ತಾಲೂಕು ಕಚೇರಿವರೆಗೂ ತಳಿರುತೋರಣದಿಂದ ಅಲಂಕರಿಸಿ ರಸ್ತೆಯಲ್ಲಿ 20ಕ್ಕೂ ಹೆಚ್ಚು ಕಲಾ ತಂಡಗಳು, 250ಕ್ಕೂ ಹೆಚ್ಚು ಪೂರ್ಣಕುಂಭದೊಂದಿಗೆ ಕೆಂಪೇಗೌಡರ ಪ್ರತಿಮೆಯನ್ನು ಬೆಳ್ಳಿ ರಥಯಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.

ಒಕ್ಕಲಿಗ ಸಮುದಾಯ ಮರೆಯುವಂತಿಲ್ಲ:

ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಎಂ.ಕೆ.ನಾಗರಾಜು ಮಾತನಾಡಿ, ನೆಲಮಂಗಲ ತಾಲೂಕಿನ ಇತಿಹಾಸದಲ್ಲಿ ಒಕ್ಕಲಿಗ ಸಮುದಾಯಕ್ಕೆ ಒಂದು ಅಡಿ ಜಾಗವಿರಲಿಲ್ಲ. ಸಮುದಾಯ ಭವನವಿರಲಿಲ್ಲ. ಆದರೆ ಶಾಸಕ ಎನ್.ಶ್ರೀನಿವಾಸ್‌ 15 ಕೋಟಿ ಬೆಲೆ ಬಾಳುವ 35,500 ಅಡಿ ಜಾಗವನ್ನು ಮಂಜೂರು ಮಾಡಿಸಿ ಸಮುದಾಯಕ್ಕೆ ನೀಡಿರುವುದು ಸಮುದಾಯ ಎಂದಿಗೂ ಮರೆಯುವುದಿಲ್ಲ. ಶಾಸಕರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಕೆಂಪೇಗೌಡ ರತ್ನ ಪ್ರಶಸ್ತಿ:

ತಾಲೂಕಿನ ವಿವಿಧ ಸಮುದಾಯಗಳು ಹಾಗೂ ಒಕ್ಕಲಿಗ ಸಮುದಾಯದಲ್ಲಿ ಸಾಧನೆ ಮಾಡಿದ ರೈತರು, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ 50ಸಾಧಕರಿಗೆ ಕೆಂಪೇಗೌಡರತ್ನ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು.

ತಮಟೆ ಬಾರಿಸಿದ ಶಾಸಕರು: ಮೆರವಣಿಗೆಯಲ್ಲಿ ಕೆಲ ಮುಖಂಡರು ತಮಟೆ ಸದ್ದಿಗೆ ಕುಣಿಯುವಾಗ ಸ್ವತಃ ಶಾಸಕ ಎನ್.ಶ್ರೀನಿವಾಸ್ ತಮಟೆ ಬಾರಿಸಿದರು. ಶಾಸಕರು ತಮಟೆ ಬಾರಿಸುತ್ತಿದಂತೆ ಮೆರವಣಿಗೆಯಲ್ಲಿದ್ದ ನೂರಾರು ಜನರು ಕುಣಿದು ಕುಪ್ಪಳಿಸಿದರು.

ಊಟದ ವ್ಯವಸ್ಥೆ: ಮೆರವಣಿಗೆಯಲ್ಲಿ ಸೇರಿದ್ದವರಿಗೆಲ್ಲಾ ಶಾಸಕ ಶ್ರೀನಿವಾಸ್ ಊಟದ ವ್ಯವಸ್ಥೆ ಮಾಡಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ರಮಣಾನಂದನಾಥ ಸ್ವಾಮೀಜಿ, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ಎನ್‌ಪಿಎ ಅಧ್ಯಕ್ಷ ನಾರಾಯಣಗೌಡ,ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್, ನಗರಸಭೆ ಅಧ್ಯಕ್ಷ ಎನ್.ಗಣೇಶ್, ತಹಸೀಲ್ದಾ‌ರ್ ಅಮೃತ್‌ಆದ್ರೇಶ್, ಇಒ ಲಕ್ಷ್ಮೀನಾರಾಯಣ್, ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ರಾಮಕೃಷ್ಣಯ್ಯ, ನಗರಸಭೆ ಉಪಾಧ್ಯಕ್ಷ ಆನಂದ್, ಮಹಿಳಾ ಸಮಾಜ ಚಂದ್ರಿಕಾ, ಒಕ್ಕಲಿಗಯುವ ವೇದಿಕೆ ಅಧ್ಯಕ್ಷ ಅಂಜನಮೂರ್ತಿ, ಕೆಡಿಪಿ ಸದಸ್ಯ ನಾರಾಯಣಗೌಡ, ಮುಖಂಡರಾದ ಸಿ.ಆರ್ ಗೌಡ್ರು, ಟಿ.ನಾಗರಾಜು, ನಟರಾಜು, ಹನುಮಂತೇಗೌಡ,ಮೋಹನ್‌ ಕುಮಾರ್, ಪ್ರಕಾಶ್‌ಮೂರ್ತಿ, ಮಧುಸೂದನ್, ಎಚ್.ಜಿ.ರಾಜು, ರಘುನಾಥ್, ಎಂಬಿಟಿ ರಾಮಕೃಷ್ಣಪ್ಪ ಮತ್ತಿತರರಿದ್ದರು.