ಶಿವಾನಂದ ಗೊಂಬಿ
ಹುಬ್ಬಳ್ಳಿ:ಖರೀದಿಸಿ ತಿಂಗಳ ಬಳಿಕ ಗುಣಮಟ್ಟ ಸರಿ ಇಲ್ಲ ಎಂದು ತಿರಸ್ಕರಿಸಿದ ಹೆಸರು ಕಾಳುಗಳ ದುಡ್ಡು ಕೊಡುವ ವಿಚಾರ ಜಿಲ್ಲಾಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅತ್ತ ರೈತರು ಹೋರಾಟದಿಂದ ಹಿಂದೆ ಸರಿಯುತ್ತಿಲ್ಲ. ಇತ್ತ ಅವರಿಗೆ ಯಾರು ದುಡ್ಡು ಕೊಡಬೇಕು ಎಂಬುದು ತಿಳಿಯದಂತಾಗಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ. ನಿರ್ದೇಶನ ನೀಡುವಂತೆ ಕೋರಿ ಇದೀಗ ಮತ್ತೆ ಸರ್ಕಾರಕ್ಕೆ ಜಿಲ್ಲಾಡಳಿತ ಪತ್ರ ಬರೆದಿದೆ. ಇದರಿಂದ ರೈತರಿಗೆ ದುಡ್ಡು ಕೊಡುವ ವಿಚಾರ ಮತ್ತೆ ಸರ್ಕಾರದ ಅಂಗಳಕ್ಕೆ ತಲುಪಿದೆ.
ಏನಾಗಿದೆ?ರೈತರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿ ರೈತರಿಂದ ಹೆಸರನ್ನು ಖರೀದಿಸಲಾಗಿತ್ತು. ಅದರಂತೆ ಬ್ಯಾಹಟ್ಟಿ ಖರೀದಿ ಕೇಂದ್ರದಲ್ಲಿ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ) ಬ್ಯಾಹಟ್ಟಿ, ಕುಸುಗಲ್, ಸುಳ್ಳ, ಕಿರೇಸೂರ, ಅಮರಗೋಳ ಗ್ರಾಮಗಳ 95 ಜನ ರೈತರಿಂದ 992 ಕ್ವಿಂಟಲ್ ಹೆಸರು ಖರೀದಿಸಲಾಗಿತ್ತು. ಖರೀದಿಸಿ ಅದರ ರಸೀದಿಯನ್ನು ರೈತರಿಗೆ ನೀಡಲಾಗಿತ್ತು. ಅದಾದ ಬಳಿಕ ಮೂರ್ನಾಲ್ಕು ವಾರದ ಬಳಿಕ ಹೆಸರು ಗುಣಮಟ್ಟದಲ್ಲಿಲ್ಲ ಎಂದು ತಿರಸ್ಕರಿಸಿ ವಾಪಸ್ ತೆಗೆದುಕೊಂಡು ಹೋಗಿ ಎಂದು ತಿಳಿಸಲಾಗಿತ್ತು. ಖರೀದಿಸಿದ ತಿಂಗಳ ಬಳಿಕ ತಿರಸ್ಕರಿಸಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
ಜಿಲ್ಲಾಡಳಿತದ ಮೇಲೆ ಒತ್ತಡ ಹೆಚ್ಚಾಗಿ ತನಿಖೆಗೆ ಆದೇಶಿಸಿತ್ತು. ತನಿಖೆಯೂ ಸೊಸೈಟಿಯದ್ದೇ ತಪ್ಪು ರೈತರಿಗೆ ದುಡ್ಡು ಕೊಡಬೇಕು ಎಂದು ಹೇಳಿತ್ತು. ಅದರಂತೆ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಕಳುಹಿಸಿತ್ತು. ಆದರೆ, ದುಡ್ಡು ಕೊಡಲು ಬರಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು. ಹೀಗಾಗಿ ಜಿಲ್ಲಾಡಳಿತ ಏನು ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು. ಈ ನಡುವೆ ರೈತರು 20 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮಳೆ-ಗಾಳಿ ಎನ್ನದೇ ಕಚೇರಿ ಹೊರಗೆ ಕುಳಿತು ನಡೆಸುತ್ತಿರುವ ಧರಣಿಗೆ ಸಣ್ಣದಾಗಿ ಬೇರೆ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ರೈತರನ್ನು ಹೇಗೆ ಸಮಾಧಾನ ಪಡಿಸಬೇಕು ಎಂಬುದು ತಿಳಿಯದೇ ಜಿಲ್ಲಾಡಳತ ಕಂಗಾಲಾಗಿದೆ. ಈ ಸಮಸ್ಯೆ ಜಿಲ್ಲಾಡಳಿತಕ್ಕೆ ಅಕ್ಷರಶಃ ತಲೆನೋವಾದಂತಾಗಿದೆ.
ಹೀಗಾಗಿ ಜು. 30ರಂದು ಜಿಲ್ಲಾಡಳಿತ ಸರ್ಕಾರಕ್ಕೆ ಮತ್ತೊಂದು ಪತ್ರ ಬರೆದಿದ್ದು, ಹೆಸರು ಖರೀದಿ ಪ್ರಕರಣದ ವಿವರ ತಿಳಿಸಿ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಬ್ಯಾಹಟ್ಟಿ ಗೋದಾಮಿನಲ್ಲಿರುವ ಹೆಸರು ಖರೀದಿಸಿ ರೈತರಿಗೆ ದುಡ್ಡು ಕೊಡವಂತೆ ಸಂಬಂಧಪಟ್ಟ ಸಂಸ್ಥೆಗೆ ಸೂಚಿಸಬೇಕು ಎಂದು ಮನವಿ ಮಾಡಿಕೊಂಡಿದೆ. ಹೀಗಾಗಿ ಹೆಸರಿನ ದುಡ್ಡು ಕೊಡುವ ವಿಚಾರದ ಚೆಂಡು ಇದೀಗ ಸರ್ಕಾರದ ಅಂಗಳಕ್ಕೆ ಹೋದಂತಾಗಿದೆ.
ಹೋರಾಟ ನಿಲ್ಲದು:ಈ ನಡುವೆ ಸಂಸ್ಥೆಯಿಂದ ಕೊಡಿಸುತ್ತಾರೋ, ಸರ್ಕಾರ ಕೊಡುತ್ತದೆಯೋ ಗೊತ್ತಿಲ್ಲ. ನಮ್ಮ ಹೆಸರನ್ನು ಖರೀದಿಸಿ, ತಿಂಗಳಾದ ಬಳಿಕ ತಿರಸ್ಕರಿಸಲಾಗಿದೆ. ಇದು ಖಂಡನೀಯ. ನಮಗೆ ನಮ್ಮ ಹೆಸರಿನ ದುಡ್ಡು ಬರುವ ವರೆಗೂ ಹೋರಾಟವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಅಲ್ಲಿಯ ವರೆಗೂ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂಬುದು ರೈತರ ಎಚ್ಚರಿಕೆ.
ಒಟ್ಟಿನಲ್ಲಿ ಬ್ಯಾಹಟ್ಟಿ ಹೆಸರು ಖರೀದಿಸಿ ದುಡ್ಡು ನಿರಾಕರಿಸಿದ ಪ್ರಕರಣ ಇದೀಗ ಸರ್ಕಾರದ ಅಂಗಳಕ್ಕಂತೂ ತಲುಪಿದ್ದು ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ವಿದ್ಯಾರ್ಥಿಗಳ ಸಮಸ್ಯೆಯೆಂದು ದೆಹಲಿಗೆ ಹೋಗಿ ಜಿರಳೆ ಪಾರ್ಟಿಯೊಂದಿಗೆ ಸೇರಿ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ಸಿಗರು ಧರಣಿ ನಡೆಸುತ್ತಾರೆ. ನಮ್ಮಂಥ ರೈತರ ಗೋಳನ್ನು ಸರ್ಕಾರ ಕೇಳಬೇಕು. ಹೆಸರು ಖರೀದಿಸಿ ಎಂಟ್ಹತ್ತು ತಿಂಗಳಾದರೂ ದುಡ್ಡು ಮಾತ್ರ ಕೊಡುತ್ತಿಲ್ಲ. ದುಡ್ಡು ಕೊಡುವವರೆಗೂ ಹೋರಾಟ ನಿಲ್ಲದು.ಗುರು ರಾಯನಗೌಡರ, ಹೋರಾಟಗಾರ