ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸದ ಇಲಾಖೆಗೆ ಹಣವನ್ನು ನಿಲ್ಲಿಸಲಾಗುವುದು. ಸುಖಾ ಸುಮ್ಮನೇ ಸರ್ಕಾರದ ಹಣವನ್ನು ದುಂದು ವೆಚ್ಚ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸದ ಇಲಾಖೆಗೆ ಹಣವನ್ನು ನಿಲ್ಲಿಸಲಾಗುವುದು. ಸುಖಾ ಸುಮ್ಮನೇ ಸರ್ಕಾರದ ಹಣವನ್ನು ದುಂದು ವೆಚ್ಚ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ 2026-27 ನೇ ಸಾಲಿನಲ್ಲಿ ವಿವಿಧ ಅಭಿವೃದ್ಧಿ ಇಲಾಖೆಗಳಿಗೆ ಸಿಎಸ್ಪಿ-ಟಿಎಸ್ಪಿ ಅಡಿ ಒದಗಿಸಿದ ಅನುದಾನಕ್ಕೆ ತಯಾರಿಸಲಾದ ಕ್ರಿಯಾ ಯೋಜನೆಯನ್ನು ಪರಿಶೀಲಿಸಿ ರಾಜ್ಯ ಅಭಿವೃದ್ಧಿ ಪರಿಷತ್‌ಗೆ ಶಿಫಾರಸ್ಸು ಮಾಡುವ ಸಂಬಂಧ ನೋಡಲ್ ಏಜೆನ್ಸಿ ಸಭೆ ನಡೆಸಿದರು.

ಬ್ಯಾಂಕ್‌ಗಳ ಮೂಲಕ ಸಾಲ ಪಡೆದ ಫಲಾನುಭವಿಗಳು ಯಾವುದಕ್ಕೆ ಬಳಸಿದ್ದಾರೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ಇಲ್ಲವಾದಲ್ಲಿ ಹಣ ದುರುಪಯೋಗ ಆಗುತ್ತದೆ. ಕುಟುಂಬದ ಒಬ್ಬರಿಗೆ ಸಾಲ ಕೊಟ್ಟರೆ ಮತ್ತೊಮ್ಮೆ ಕೊಡಬಾರದು. ಸಿಎಸ್ಪಿ-ಟಿಎಸ್ಪಿ ಅನುದಾನವು ಸಮರ್ಪಕವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮುದಾಯಗಳ ಅಭಿವೃದ್ಧಿಗೆ ವಿನಿಯೋಗಿಸಬೇಕು. ಯಾವುದೇ ಕಾರಣಕ್ಕೂ ಇತರೆ ಅಭಿವೃದ್ಧಿಗೆ ಬಳಸಬಾರದು ಎಂದು ಸೂಚಿಸಿದರು.

ಎಲ್ಲಾ ಇಲಾಖೆಗಳಲ್ಲಿ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಿಸುವಾಗ ಮೀಸಲಾತಿ ಅನುಸಾರ ಪರಿಶಿಷ್ಟ ಜಾತಿಗೆ ಶೇ.17 ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ.7ರ ಅಡಿ ನೇಮಿಸಬೇಕು. ವಿದ್ಯಾರ್ಥಿಗಳಿಗೆ ಎಲ್ಲಾ ಹಾಸ್ಟೆಲ್‌ಗಳಲ್ಲಿ ಶೇ.25ರಷ್ಟು ಪ್ರವೇಶ ಕಲ್ಪಿಸಬೇಕು. ಕನ್ನಡ ಸಂಸ್ಕೃತಿಯ ಇಲಾಖೆಯಡಿ ಕಲಾವಿದರನ್ನು ಗುರುತಿಸಿ ಅವರ ಕಲೆಗೆ ಬೇಕಾದ ಸಲಕರಣೆಗಳಿಗೆ ಅನುದಾನ ಒದಗಿಸಬೇಕು. ಕನ್ನಡ ಪರಂಪರೆ, ಸಂಗೀತ ಕಲೆಯಲ್ಲಿ ಯಾರನ್ನು ಕಡೆಗಣಿಸಬಾರದು ಎಲ್ಲಾರಿಗೂ ಸಮಾನವಾದ ಅವಕಾಶಗಳನ್ನು ಕೊಡಬೇಕು ಎಂದು ಹೇಳಿದರು. ಸಚಿವರಾದ ಸತೀಶ್ ಜಾರಕಿಹೋಳಿ, ರಘುಮೂರ್ತಿ, ಸರ್ಕಾರದ ಕಾರ್ಯದರ್ಶಿ ಮೋಹನ್ ರಾಜ್ ,ಆಯುಕ್ತ ರಾಕೇಶ್ ಕುಮಾರ್, ಆರ್ಥಿಕ ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಇದ್ದರು.