ಸಾರಾಂಶ
ಗುಜರಾತಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಚ್.ಎಸ್. ಲಿಂಗೇಗೌಡರ ಅಂತ್ಯಕ್ರಿಯೆ ತಾಲೂಕಿನ ಸೋಂಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಜರುಗಿತು. ಗುಜರಾತಿನ ಭರೂಚ್ ನಗರದ ಆಸ್ಪತ್ರೆಯಲ್ಲಿ ಎಚ್.ಎಸ್.ಲಿಂಗೇಗೌಡರ ಮೃತ ದೇಹದ ಮರಣೋತ್ತರ ಪರೀಕ್ಷೆ ನಂತರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಮಧ್ಯಾಹ್ನ ತರಲಾಯಿತು.
ಕನ್ನಡಪ್ರಭ ವಾರ್ತೆ ಮದ್ದೂರು
ಗುಜರಾತಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಚ್.ಎಸ್. ಲಿಂಗೇಗೌಡರ ಅಂತ್ಯಕ್ರಿಯೆ ತಾಲೂಕಿನ ಸೋಂಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಜರುಗಿತು.ಗುಜರಾತಿನ ಭರೂಚ್ ನಗರದ ಆಸ್ಪತ್ರೆಯಲ್ಲಿ ಎಚ್.ಎಸ್.ಲಿಂಗೇಗೌಡರ ಮೃತ ದೇಹದ ಮರಣೋತ್ತರ ಪರೀಕ್ಷೆ ನಂತರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಮಧ್ಯಾಹ್ನ ತರಲಾಯಿತು.
ಬೆಂಗಳೂರು- ಮೈಸೂರು ಹೆದ್ದಾರಿ ಮೂಲಕ ಮಂಡ್ಯ ತಲುಪಿದ ಲಿಂಗೇಗೌಡರ ಪಾರ್ಥಿವ ಶರೀರವನ್ನು ಕೆಲ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಹುಟ್ಟೂರು ಸೋಂಪುರ ಗ್ರಾಮಕ್ಕೆ ತೆರಳುತ್ತಿದ್ದ ಪಾರ್ಥಿವ ಶರೀರಕ್ಕೆ ಪಟ್ಟಣದ ಸಂಜಯ ಚಿತ್ರಮಂದಿರದ ಬಳಿ ತಾಲೂಕು ಆಡಳಿತದ ಪರವಾಗಿ ತಹಸೀಲ್ದಾರ್ ಡಾ.ಸ್ಮಿತಾರಾಮು ಪುಷ್ಪಗುಚ್ಛ ಸಮರ್ಪಣೆ ಮಾಡಿ ಗೌರವ ಸಲ್ಲಿಸಿದರು.ಕರ್ನಾಟಕ ರೈತ ಸಂಘ, ಕಸ್ತೂರಿ ಕರ್ನಾಟಕ ಜನ ಪರ ವೇದಿಕೆ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಎಚ್.ಎಸ್. ಲಿಂಗೇಗೌಡರ ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿ ಸಂತಾಪ ಸೂಚಿಸಿದರು.
ತರುವಾಯ ಪೇಟೆ ಬೀದಿ, ಕೆಮ್ಮಣ್ಣುನಾಲೆ ವೃತ್ತದ ಮೂಲಕ ಹುಟ್ಟೂರು ಸೋಂಪುರ ಗ್ರಾಮಕ್ಕೆ ಲಿಂಗೇಗೌಡರ ಪಾರ್ಥಿವ ಶರೀರವನ್ನು ಕೊಂಡೊಯ್ದು ಸಂಜೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.ಈ ವೇಳೆ ಸಂಘಟನೆಗಳ ಮುಖಂಡರಾದ ನ.ಲಿ.ಕೃಷ್ಣ, ಸೋ.ಶಿ.ಪ್ರಕಾಶ್, ಉಮೇಶ್. ಚನ್ನಸಂದ್ರ ಲಕ್ಷ್ಮಣ್, ವಿವೇಕ್, ಅರತಿಪ್ಪೂರು ಕೆಂಪಣ್ಣ, ಸಿ.ಪಿ.ಯೋಗೇಶ್, ಮಹೇಶ್, ಜನಾರ್ದನ್, ಅಜ್ಜಹಳ್ಳಿ ಬಸವರಾಜು ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಇದ್ದರು.