ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

| Published : Nov 05 2025, 03:15 AM IST

ಸಾರಾಂಶ

ಶಾಸಕ ಎಚ್.ವೈ.ಮೇಟಿಯವರು ಅನಾರೋಗ್ಯದಿಂದ ವಿಧಿವಶರಾಗಿದ್ದು, ಅವರ ಸ್ವಗ್ರಾಮ ತಿಮ್ಮಾಪೂರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಾಜಿ ಸಚಿವರು ಹಾಗೂ ಬಾಗಲಕೋಟೆ ಮತಕ್ಷೇತ್ರದ ಹಾಲಿ ಶಾಸಕ ಎಚ್.ವೈ.ಮೇಟಿಯವರು ಅನಾರೋಗ್ಯದಿಂದ ಮಂಗಳವಾರ ವಿಧಿವಶರಾಗಿದ್ದು, ಅವರ ಸ್ವಗ್ರಾಮ ತಿಮ್ಮಾಪೂರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ದಿ.ಎಚ್.ವೈ.ಮೇಟಿಯವರ ಪಾರ್ಥಿರ ಶರೀರದ ಅಂತಿಮ ದರ್ಶನದ ಸಿದ್ಧತೆ ವೀಕ್ಷಿಸಿ ಮಾತನಾಡಿದ ಅವರು, ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ವಿಧಿವಶರಾಗಿದ್ದಾರೆ. ಬುಧವಾರ ಬೆಳಗಿನ ಜಾವ ಮೇಟಿಯವರ ಪಾರ್ಥಿವ ಶರೀರ ಬಾಗಲಕೋಟೆಗೆ ಆಗಮಿಸಲಿದ್ದು, ಅಂದು ಬೆಳಗ್ಗೆ 6 ರಿಂದ 9.30 ಗಂಟೆವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ನಂತರ ತೆರೆದ ವಾಹನದಲ್ಲಿ ಅವರ ಸ್ವಗ್ರಾಮ ತಿಮ್ಮಾಪೂರಕ್ಕೆ ತೆರಳಿ ಮಧ್ಯಾಹ್ನ 1.30 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ ಎಂದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಜಿಲ್ಲಾ ಕ್ರೀಡಾಂಗಣದ ಪೂರ್ವ ದಿಕ್ಕಿನ ನೈಋತ್ಯ ಭಾಗದಲ್ಲಿ ಸಾರ್ವಜನಿಕರಿಗೆ ಪ್ರವೇಶ ದ್ವಾರವಿದ್ದು, ದರ್ಶನ ಪಡೆದ ನಂತರ ಅದೇ ದಿಕ್ಕಿನಲ್ಲಿ ಆಗ್ನೇಯ ಕಡೆ ನಿರ್ಗಮಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಕ್ರೀಡಾಂಗಣದ ಮುಖ್ಯ ದ್ವಾರದಲ್ಲಿ ಜನಪ್ರತಿನಿಧಿಗಳು, ಮೇಟಿಯವರ ಕುಟುಂಬಸ್ಥರು ಹಾಗೂ ಇತರೆ ಗಣ್ಯವ್ಯಕ್ತಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದಲ್ಲಿ ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಮಂಗಳವಾರ ಮೇಟಿಯವರ ಪಾರ್ಥಿವ ಶರೀರದ ದರ್ಶನ ಪಡೆದಿದ್ದು, ತಿಮ್ಮಾಪೂರ ಗ್ರಾಮದಲ್ಲಿ ಬುಧವಾರ ನೆರವೇರಲಿರುವ ಅಂತ್ಯಕ್ರಿಯೆಯಲ್ಲಿ ಸಹ ಪಾಲ್ಗೊಳ್ಳಲಿದ್ದಾರೆ. ಅವರ ಜೊತೆ ಸಚಿವರು ಸಹ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು, ಅಂತ್ಯಕ್ರಿಯೆಗೆ ಸಕಲ ಸರಕಾರಿ ಗೌರಗಳೊಂದಿಗೆ ನೆರವೇರಿಸಲು ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ತಿಮ್ಮಾಪೂರದಲ್ಲಿರುವ ಮನೆಯಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರಿಗೆ ಮೇಟಿಯವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಂತ್ಯಕ್ರಿಯೆ ಅವರ ತೋಟದಲ್ಲಿ ನೆರವೇರಲಿದೆ ಎಂದು ತಿಳಿಸಿದರು.

ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಮಾತನಾಡಿ, ಶಾಸಕ ಎಚ್.ವಾಯ್.ಮೇಟಿಯವರ ಅಗಲಿಕೆ ನೋವು ಉಂಟು ಮಾಡಿದೆ. ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಅಗಲಿಕೆಯಿಂದ ತುಂಬಲಾರದಷ್ಟು ನಷ್ಟ ಉಂಟಾಗಿದ್ದು, ಕುಟಂಬಸ್ಥರಿಗೆ ದುಃಖವನ್ನು ಭರಿಸುವಂತ ಶಕ್ತಿ ನೀಡಲೇಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು. ಈ ವೇಳೆ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.ಸಿಎಂ ಸೇರಿದಂತೆ ಗಣ್ಯರು ಭಾಗಿ

ಬಾಗಲಕೋಟೆ:

ಬೆಂಗಳೂರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವ ಬಾಗಲಕೋಟೆ ಶಾಸಕ ಎಚ್.ವೈ.ಮೇಟಿಯವರ ಅಂತ್ಯಕ್ರಿಯೆಯು ಬುಧವಾರ ಮಧ್ಯಾಹ್ನ 3 ಗಂಟೆಗೆ ಅವರ ಹುಟ್ಟೂರು ತಾಲೂಕಿನ ತಿಮ್ಮಾಪುರ ಗ್ರಾಮದ ಅವರ ಜಮೀನಿನಲ್ಲಿ ತಂದೆ-ತಾಯಿ ಸಮಾಧಿ ಬಳಿ ನಡೆಯಲಿದೆ.

ಮಂಗಳವಾರ ರಾತ್ರಿ ಬೆಂಗಳೂರನಿಂದ ರಸ್ತೆ ಮೂಲಕ ಹೊರಟ ಶಾಸಕ ಮೇಟಿಯವರ ಪ್ರಾರ್ಥಿವ ಶರೀರ ನಸುಕಿನ ಜಾವ ಬಾಗಲಕೋಟೆ ತಲುಪಲಿದೆ. ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 8ರಿಂದ 10.30ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಬಳಿಕ 11 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ರಸ್ತೆ ಮೂಲಕ ತಿಮ್ಮಾಪುರಕ್ಕೆ 12 ಗಂಟೆಗೆ ಪಾರ್ಥಿವ ಶರೀರ ತಲುಪಿದೆ. ಗ್ರಾಮದಲ್ಲಿ ಶಾಸಕರ ಮನೆಯಲ್ಲಿ ಮಧ್ಯಾಹ್ನ 2 ಗಂಟೆ ವರೆಗೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಬಳಿಕ ಅವರ ಜಮೀನಿನಲ್ಲಿ ಧಾರ್ಮಿಕ ವಿಧಾನಗಳ ಜೊತೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹೆಲಿಕ್ಯಾಪ್ಟರ್ ಮೂಲಕ ಆಲಮಟ್ಟಿಗೆ ಆಗಮಿಸಲಿದ್ದು, ಮಧ್ಯಾಹ್ನ 1.30ಕ್ಕೆ ಆಲಮಟ್ಟಿಯಿಂದ ತಿಮ್ಮಾಪುರ ಗ್ರಾಮಕ್ಕೆ ರಸ್ತೆ ಮೂಲಕ ಆಗಮಿಸಲಿದ್ದಾರೆ.