ಬೀದಿಬದಿ ವ್ಯಾಪಾರಕ್ಕೆ ಮತ್ತಷ್ಟು ವಲಯ: ಮೇಯರ್ ಮನೋಜ್ ಕುಮಾರ್

| Published : Jan 22 2025, 12:34 AM IST

ಬೀದಿಬದಿ ವ್ಯಾಪಾರಕ್ಕೆ ಮತ್ತಷ್ಟು ವಲಯ: ಮೇಯರ್ ಮನೋಜ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಬೀದಿ ಬದಿಯ ಹಿರಿಯ ವ್ಯಾಪಾರಿಗಳಾದ ಶ್ರೀಧರ ಭಂಡಾರಿ, ಆದಮ್ ಬಜಾಲ್ ಮತ್ತು ಮೇರಿ ಡಿ ಸೋಜಾ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಈಗಾಗಲೇ ಇರುವ ವಲಯಗಳ ಜತೆಗೆ ಮತ್ತಷ್ಟು ವಲಯಗಳನ್ನು ಗುರುತಿಸಲು ಮಹಾನಗರ ಪಾಲಿಕೆ ಸಿದ್ಧವಾಗಿದೆ ಎಂದು ಮೇಯರ್ ಮನೋಜ್ ಕುಮಾರ್ ಕೊಡಿಕಲ್ ಹೇಳಿದ್ದಾರೆ. ಬೀದಿಬದಿ ವ್ಯಾಪಾರಸ್ಥರ ದಿನಾಚರಣೆಯ ಅಂಗವಾಗಿ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಮಂಗಳೂರು ಇದರ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.ಪಾಲಿಕೆ ವ್ಯಾಪ್ತಿಯಲ್ಲಿ 667 ಮಂದಿ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 224 ಮಂದಿಗೆ ಗುರುತಿನ ಚೀಟಿ ನೀಡುವ ಕೆಲಸವಾಗಿದೆ. ಕೆಲವೇ ದಿನಗಳಲ್ಲಿ ಉಳಿದವರಿಗೂ ಗುರುತಿನ ಚೀಟಿ ನೀಡುವ ಕೆಲಸ ಮಾಡುತ್ತೇವೆ. ಮುಂದೆ 1 ಸಾವಿರ ಮಂದಿಯ ಸರ್ವೆ ನಡೆಸಿಕೊಂಡು ಅವರಿಗೂ ಗುರುತಿನ ಚೀಟಿ ನೀಡುವ ಕೆಲಸ ಮಾಡುತ್ತೇವೆ. 33 ಕಡೆಯಲ್ಲಿ ವ್ಯಾಪಾರಿ ವಲಯಗಳನ್ನು ಗುರುತಿಸಿ ಮತ್ತಷ್ಟು ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗುವ ಕೆಲಸ ಮಾಡುತ್ತೇವೆ ಎಂದರು.ನಿವೃತ್ತ ಪ್ರಾಧ್ಯಾಪಕಿ ಡಾ. ರೀಟಾ ನೊರೊನ್ಹಾ ಅವರು ಸಮಾವೇಶ ಉದ್ಘಾಟಿಸಿ, ಬೀದಿ ಬದಿ ವ್ಯಾಪಾರಿಗಳು ದೊಡ್ಡ ಉದ್ಯಮಿಗಳಂತೆ ವ್ಯವಹಾರದ ಕೌಶಲ್ಯ ಪಡೆದವರಲ್ಲ. ಆದರೆ ಅವರು ದೈನಂದಿನ ವ್ಯವಹಾರದ ಅನುಭವದ ಮೂಲಕ ವೃತ್ತಿ ಕೌಶಲ್ಯವನ್ನು ಪಡೆದು ತಮ್ಮ ವೃತ್ತಿಯಲ್ಲಿ ಯಶಸ್ಸು ಗಳಿಸಿದ್ದಾರೆ. ನಗರದ ಅಭಿವೃದ್ಧಿಗೆ ಅವರು ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಬೀದಿ ಬದಿಯ ಹಿರಿಯ ವ್ಯಾಪಾರಿಗಳಾದ ಶ್ರೀಧರ ಭಂಡಾರಿ, ಆದಮ್ ಬಜಾಲ್ ಮತ್ತು ಮೇರಿ ಡಿ ಸೋಜಾ ಅವರನ್ನು ಸನ್ಮಾನಿಸಲಾಯಿತು.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಕಾನೂನು ಸಲಹೆಗಾರ ಗದಗದ ವಕೀಲ ಎಂ.ಬಿ.ನದಾಫ್‌, ನಗರ ಅಭಿಯಾನ ವ್ಯವಸ್ಥಾಪಕ ಎನ್.ಚಿತ್ತರಂಜನ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಪಿ. ಆನಂದ್ ಶುಭ ಹಾರೈಸಿದರು.ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಕೋಶಾಧಿಕಾರಿ ಆಸಿಫ್ ಬಾವಾ ಇದ್ದರು. ಅಬ್ದುಲ್ ರೆಹಮಾನ್ ಪ್ರಾಸ್ತಾವಿಕ ಮಾತನಾಡಿದರು. ಚೇತನ್ ಪಿಲಿಕುಳ ನಿರೂಪಿಸಿದರು.