ಸಾರಾಂಶ
ಭಟ್ಕಳ: ಹವ್ಯಕರು ಎಲ್ಲೇ ಉದ್ಯೋಗದಲ್ಲಿದ್ದರೂ ತಮ್ಮ ಆಚಾರ, ವಿಚಾರ. ಸಂಸ್ಕೃತಿಯನ್ನು ಮರೆಯಬಾರದು ಎಂದು ವೇ.ಮೂ. ಕೃಷ್ಣಾನಂದ ಭಟ್ಟ ಬಲ್ಸೆ ತಿಳಿಸಿದರು.
ಮುರುಡೇಶ್ವರದ ಬಸ್ತಿಮಕ್ಕಿಯಲ್ಲಿರುವ ರಾಘವೇಶ್ವರ ಭಾರತೀ ಹವ್ಯಕ ಸಭಾಭವನದಲ್ಲಿ ಭಟ್ಕಳ ತಾಲೂಕು ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹವ್ಯಕರು ತಮ್ಮ ಆಚಾರ, ವಿಚಾರ, ತಮ್ಮತನವನ್ನು ಮರೆತರೆ ಮುಂದಿನ ತಲೆಮಾರಿನವರಿಗೆ ತೊಂದರೆಯಾಗಲಿದೆ. ಜೀವನದಲ್ಲಿ ತಾಳ್ಮೆ ಮುಖ್ಯ. ಯುವಪೀಳಿಗೆಯನ್ನು ಸರಿಯಾದ ಮಾರ್ಗದಲ್ಲಿ ಬೆಳೆಸುವ ಅಗತ್ಯವಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್ಟ ಮಾತನಾಡಿ, ಆಧುನಿಕತೆ ಭರಾಟೆಯಲ್ಲಿ ಹವ್ಯಕರು ನಮ್ಮತನವನ್ನು ಎಂದಿಗೂ ಬಿಟ್ಟುಕೊಡಬಾರದು. ನಮ್ಮ ಭಾಷೆ, ಸಂಸ್ಕೃತಿ ಉಳಿಸಿಕೊಳ್ಳಬೇಕಿದೆ. ಹವಿಗನ್ನಡ ಭಾಷೆ ಚೆಂದವಾಗಿದ್ದು, ಇದನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಹವ್ಯಕರ ಆಚಾರ- ವಿಚಾರದ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನದ ಅಗತ್ಯವಿದೆ ಎಂದರು.
ಸಂಸ್ಥಾಪಕ ಅಧ್ಯಕ್ಷ, ನಿವೃತ್ತ ತಹಸೀಲ್ದಾರ್ ಡಿ.ಜಿ. ಹೆಗಡೆ ಮಾತನಾಡಿ, ಬ್ರಾಹ್ಮಣರು ಮೊದಲಿನಿಂದಲೂ ಸವಾಲನ್ನು ಮೆಟ್ಟಿ ನಿಂತವರು. ನಮ್ಮ ಸಂಘಟನೆಯ ವತಿಯಿಂದ ಯುವ ಪ್ರತಿಭೆಗಳಿಗೆ ವಿವಿಧ ಸ್ಮರ್ಧಾತ್ಮಕ ಪರೀಕ್ಷಾ ತಯಾರಿಯ ಕುರಿತು, ಉನ್ನತ ಶಿಕ್ಷಣದ ಕುರಿತು ಸಹಾಯ ಮಾಡುವ ಇಚ್ಛೆ ಇದ್ದು, ಮುಂದಿನ ದಿನಗಳಲ್ಲಿ ನೆರವೇರಲಿ ಎಂದು ಹಾರೈಸಿದರು.ಯಲ್ಲಾಪುರದ ತಹಸೀಲ್ದಾರ್ ಅಶೋಕ ಎನ್. ಭಟ್ಟ ಮಾತನಾಡಿ, ಹವ್ಯಕರು ಸಂಘಟಿತರಾಗಿ ಪರಸ್ಪರ ಸಹಾಯ ಮಾಡುವ ಗುಣವನ್ನು ಬೆಳೆಸಬೇಕಾಗಿದೆ ಎಂದರು.
ನಿವೃತ್ತ ತಹಸೀಲ್ದಾರ್ ಡಿ.ಜಿ. ಹೆಗಡೆ ಮಾತನಾಡಿ, ಸಂಘಟನೆ ಮತ್ತಷ್ಟು ಪ್ರಭಲವಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮಂಜುನಾಥ ಹೆಗಡೆ, ಸಂಘದ ಗೌರವ ಮಾರ್ಗದರ್ಶಕರಾದ ಶಂಭು ಎನ್. ಹೆಗಡೆ, ಪತ್ರಕರ್ತ ರಾಧಾಕೃಷ್ಣ ಭಟ್ಟ, ಸನ್ಮಾನಿತರಾದ ಶ್ರೀಧರ ಹೆಬ್ಬಾರ, ನೀಲಕಂಠ ಉಪಾಧ್ಯಾಯ, ಶ್ರೀನಿವಾಸ ಉಪಾಧ್ಯಾಯ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಸುಧಾ ಭಟ್ಟ, ಭಟ್ಕಳ ಹವ್ಯಕ ವಲಯದ ಅಧ್ಯಕ್ಷೆ ರೇಶ್ಮಾ ಭಟ್ಟ, ಭವತಾರಿಣಿ ವಲಯದ ಅಧ್ಯಕ್ಷ ವಿನಾಯಕ ಭಟ್ಟ, ಹಿರಿಯರಾದ ಎಂ.ವಿ. ಹೆಗಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ನೌಕರರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೃಷಿಯಲ್ಲಿ ಶ್ರೀಧರ ಹೆಬ್ಬಾರ್, ವೈದಿಕರಾದ ನೀಲಕಂಠ ಉಪಾಧ್ಯಾಯ, ಸಮಾಜ ಸೇವೆಯಲ್ಲಿ ನಾಗರಾಜ ಮಧ್ಯಸ್ಥ ಗೋಳಿಕುಂಬ್ರಿ, ಸಂಗೀತದಲ್ಲಿ ಸುಬ್ರಹ್ಮಣ್ಯ ಹೆಗಡೆ, ಸಾಹಿತ್ಯದಲ್ಲಿ ವೆಂಕಟ್ರಮಣ ಹೆಗಡೆ(ಯೋಗೀಶ) ಅವರನ್ನು ಸನ್ಮಾನ ಪತ್ರ, ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.ಸೀತಾ ಹೆಗಡೆ ಪ್ರಾರ್ಥಿಸಿದರು. ಗಣೇಶ ಹೆಗಡೆ ಸ್ವಾಗತಿಸಿದರು. ಕೆ.ಬಿ. ಹೆಗಡೆ ವರದಿ ವಾಚಿಸಿದರು. ಐ.ವಿ. ಹೆಗಡೆ, ಎಂ.ಜಿ. ಹೆಗಡೆ ನಿರ್ವಹಿಸಿದರು. ಗಣಪತಿ ಶಿರೂರು ವಂದಿಸಿದರು. ನಂತರ ಚಿಂತನಾ ಹೆಗಡೆ ಮಾಳಕೋಡ ಅವರ ನೇತೃತ್ವದಲ್ಲಿ ನಡೆದ ಯಕ್ಷ ನೃತ್ಯ ಗಾನ ಹಾಸ್ಯ ವೈಭವ ಮನರಂಜಿಸಿತು.