ಸಾರಾಂಶ
ಹಾವೇರಿ: ಭಾವೈಕ್ಯದ ಭಾರತದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಭಾರತ ಭಾವೈಕ್ಯದ ನಾಡು. ನಾವು ಸೌಹಾರ್ದದಿಂದ ಬದುಕುತ್ತಿದ್ದೇವೆ. ಆದರೂ ನಮ್ಮ ತಾಳ್ಮೆ ಪರೀಕ್ಷಿಸುವ ಅನೇಕ ಸಂದರ್ಭಗಳು ಎದುರಾಗುತ್ತಿವೆ. ನಾವು ಈಗಲೇ ಜಾಗ್ರತರಾಗದಿದ್ದಲ್ಲಿ ಭವಿಷ್ಯದ ಭಾರತಕ್ಕೆ ಕುತ್ತು ಬರಲಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ನುಡಿದರು.
ಇಲ್ಲಿನ ಜಿಲ್ಲಾ ಜಾಗ್ರತ ನಾಗರಿಕ ವೇದಿಕೆ ವತಿಯಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಹಾಗೂ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದೊಂದು ಆತ್ಮವಲೋಕನಾ ಸಭೆ. ನಾವೆಲ್ಲರೂ ಜಾಗ್ರತರಾಗಿ ಮುಂದಿನ ಹೆಜ್ಜೆ ಇಡಬೇಕು. ನೆರೆಯ ದೇಶದಲ್ಲಿ ಜಾತಿ ನಿಂದನೆ, ಧರ್ಮನಿಂದನೆ ಮಾಡಿ ಪ್ರಾಣ ತೆಗೆಯುವ ಕೆಲಸ ನಡೆದಿದೆ. ನಮ್ಮ ರಾಷ್ಟ್ರದಿಂದ ನೀಡುವ ಅನೇಕ ಸೌಲತ್ತುಗಳನ್ನು ನಿಲ್ಲಿಸಿದರೆ ಬೇರೆ ದೇಶಗಳು ಸಂಕಷ್ಟ ಎದುರಿಸುತ್ತವೆ ಎಂದ ಶ್ರೀಗಳು, ನಾವು ನಮಗೇನು ಆಗಿಲ್ಲ ಎಂಬ ಭಾವನೆಯಿಂದ ಮೈಯಿಗೆ ಎಣ್ಣೆ ಹಚ್ಚಿಕೊಂಡು ಕೂರಬಾರದು. ಬೇರೆ-ಬೇರೆ ದೇಶದಲ್ಲಿ ನೆಲೆಸಿರುವ ಹಿಂದೂಗಳಿಗೆ ಅಡಚಣೆ ಆಗುತ್ತಿದೆ. ನಮ್ಮ ದೇಶದಲ್ಲೂ ಇಂತಹ ಸ್ಥಿತಿ ಬರಬಹುದು. ಹೀಗಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಭವ್ಯ ಪರಂಪರೆ ಹೊಂದಿ ಆಶ್ರಯ, ಅನ್ನ ನೀಡಿದ ದೇಶ ನಮ್ಮದು. ನಮ್ಮ ದೇಶದಲ್ಲಿ ಹುಟ್ಟಿಹೋಗಿರುವ ಹಿಂದೂಗಳ ಮೇಲೆ ದೌರ್ಜನ್ಯ ಆಗುತ್ತಿರುವುದು ಖಂಡನೀಯ. ಜಗತ್ತಿನಲ್ಲಿ ಏನೇ ಸಮಸ್ಯೆ, ದೌರ್ಜನ್ಯ ನಡೆದರೆ ಮೊದಲು ಖಂಡಿಸುವುದು ನಮ್ಮ ದೇಶ. ಸಂಸ್ಕೃತಿ, ಸಂಸ್ಕಾರ, ಧರ್ಮ ನಾಶವಾದರೆ ಭಾರತ ದೇಶ ನಾಶವಾಗುತ್ತದೆ. ಹೀಗಾಗಿ ಈಗಲೇ ಯುವಕರು ಎಚ್ಚೆತ್ತುಕೊಳ್ಳಬೇಕು ಎಂದರು.
ಅಗಡಿ ಆನಂದವನದ ಶ್ರೀಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ ಮಾತನಾಡಿ, ನಮ್ಮಲ್ಲೇ ನಮಗೆ ಜೈಕಾರ ಕೂಗಲು ಮುಜುಗರ ಎದುರಿಸುವ ಪರಿಸ್ಥಿತಿ ಬಂದಿದೆ. ಹಿಂದೂಗಳು ಒಂದಾಗಿ ಕೂಗಿದರೆ ನೆರೆಯ ಬಾಂಗ್ಲಾ ದೇಶಕ್ಕೆ ಕೇಳಬೇಕು. ನಮ್ಮ ದೇಶದ ಹಿಂದುಗಳು ಇನ್ನಾದರೂ ಜಾಗೃತಿ ಆಗಬೇಕು ಎಂದರು.ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ಬೇರೆಯವರ ಮನೆಗೆ ಬೆಂಕಿ ಬಿದ್ದಿದೆ. ನಮಗೇನೂ ಆಗಿಲ್ಲ ಎಂದು ಮನೆಯ ಬಾಗಿಲು ಹಾಕಿಕೊಂಡು ಕೂರುತ್ತಿದ್ದೇವೆ. ಬೇರೆಯವರ ಮನೆಗೆ ಹತ್ತಿದ ಬೆಂಕಿ ನಮಗೂ ತಾಗುತ್ತದೆ ಎಂಬ ಜ್ಞಾನ ಇರಬೇಕು. ಮಠಾಧೀಶರು ಒಂದಾದಾಗ ಮಾತ್ರ ಆ ದೇಶಕ್ಕೆ ಸಂದೇಶ ಕೊಡಲು ಸಾಧ್ಯ. ಸರ್ಕಾರದಿಂದ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುವ ಕಾರ್ಯ ನಡೆಯುತ್ತಿದೆ. ಇದು ಸರಿಯಲ್ಲ, ಇನ್ನಾದರೂ ಹಿಂದೂಗಳು ಒಂದಾಗಿ ಹೋರಾಡಬೇಕು ಎಂದರು.
ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ ಮಾತನಾಡಿ, ನಮ್ಮ ಅಭಿಮಾನ ನಮಗೆ ಅಷ್ಟೇ ಸಿಮೀತವಾಗದೇ ನಮ್ಮ ಅಭಿಮಾನ ದೇಶಕ್ಕೆ ಇರಬೇಕು. ದೇಶದ ಪ್ರತಿಯೊಬ್ಬರೂ ಸ್ವಾಭಿಮಾನದ ಹೋರಾಟ ಮಾಡುವುದು ಇಂದಿನ ಅಗತ್ಯವಿದೆ ಎಂಬುದನ್ನು ಅರಿತುಕೊಳ್ಳಬೇಕು. ಬಾಂಗ್ಲಾದೇಶದಲ್ಲಿ ನಡೆದ ಘಟನೆ ಮತ್ತೆ ಅಲ್ಲಿ ನಡೆಯಬಾರದು ಎಂಬ ಸಂದೇಶ ಕಳುಹಿಸುವ ಅಗತ್ಯವಿದೆ ಎಂದರು.ಗೌರಿಮಠದ ಶಿವಯೋಗಿ ಶಿವಾಚಾರ್ಯರು, ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಚಿಂತಕ ಶ್ರೀಕಾಂತ ಹೊಸಕೇರಿ ಮಾತನಾಡಿದರು.
ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಪಿ.ಡಿ. ಶಿರೂರ, ಪವನ ಬಹದ್ದೂರುದೇಸಾಯಿ, ಪ್ರಭಾಕಾರರಾವ್ ಮಂಗಳೂರು, ಪರಶುರಾಮ ಹರಪನಹಳ್ಳಿ, ನಾಗೇಂದ್ರ ಕಡಕೋಳ ಇತರರಿದ್ದರು. ಬಳಿಕ ಹಾವೇರಿಯ ಹುಕ್ಕೇರಿಮಠದಿಂದ ಪ್ರಾರಂಭವಾದ ಪಂಜಿನ ಮೆರವಣಿಗೆ ಎಂಜಿ ರಸ್ತೆ, ದ್ಯಾಮವ್ವದೇವಿ ಪಾದಗಟ್ಟೆ ರಸ್ತೆ, ಗಾಂಧಿ ವೃತ್ತ, ಜೆಪಿ ರಸ್ತೆ ಮೂಲಕ ಹಾದು ಹೊಸಮನಿ ಸಿದ್ದಪ್ಪ ವೃತ್ತ ತಲುಪಿತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.