ಕನ್ನಡ ಬದುಕಿನ ಭಾಗವಾದರೆ ಭವಿಷ್ಯ ಉಜ್ವಲ: ನ್ಯಾ. ಡಾ। ಎಚ್‌.ಬಿ.ಪ್ರಭಾಕರಶಾಸ್ತ್ರಿ

| Published : Apr 14 2024, 01:53 AM IST

ಕನ್ನಡ ಬದುಕಿನ ಭಾಗವಾದರೆ ಭವಿಷ್ಯ ಉಜ್ವಲ: ನ್ಯಾ. ಡಾ। ಎಚ್‌.ಬಿ.ಪ್ರಭಾಕರಶಾಸ್ತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನಮ್ಮ ಬದುಕಿನ ಭಾಗವಾದರೆ ಮಾತ್ರ ಉಜ್ವಲ ಭವಿಷ್ಯ ನಮ್ಮದಾಗಲು ಸಾಧ್ಯ ಎಂದು ವಿಶ್ರಾಂತ ನ್ಯಾಯಮೂರ್ತಿ ಡಾ। ಎಚ್‌.ಬಿ.ಪ್ರಭಾಕರಶಾಸ್ತ್ರಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡ ನಮ್ಮ ಬದುಕಿನ ಭಾಗವಾದರೆ ಮಾತ್ರ ಉಜ್ವಲ ಭವಿಷ್ಯ ನಮ್ಮದಾಗಲು ಸಾಧ್ಯ ಎಂದು ವಿಶ್ರಾಂತ ನ್ಯಾಯಮೂರ್ತಿ ಡಾ। ಎಚ್‌.ಬಿ.ಪ್ರಭಾಕರಶಾಸ್ತ್ರಿ ಅಭಿಪ್ರಾಯಪಟ್ಟರು.

ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ವಿವಿಧ ದತ್ತಿ ಪುರಸ್ಕಾರಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ದತ್ತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಬೆನ್ನೆಲುಬಾಗಿ ನಿಂತಿರುವುದರಿಂದ ಕನ್ನಡ ಸಾರಸ್ವತ ಲೋಕಕ್ಕೂ ಕ್ರಿಯಾಶೀಲತೆ ಲಭಿಸಲಿದೆ ಎಂದರು.

ಕನ್ನಡದಲ್ಲಿ ತೀರ್ಪನ್ನು ನೀಡುವ ಮೂಲಕ ವೃತ್ತಿಯಲ್ಲಿ ಕನ್ನಡ ಕಾಳಜಿಯನ್ನು ಉಳಿಸಿ ಕೊಳ್ಳಲು ಪ್ರಯತ್ನಿಸಿದ್ದ ತಮಗೆ ಕನ್ನಡಿಗರೇ ತಮ್ಮ ಭಾಷೆಯನ್ನು ಉಳಿಸಿ ಕೊಳ್ಳುತ್ತಿಲ್ಲವೆನ್ನುವ ಆತಂಕ ಕಾಡುತ್ತಿದೆ. ಕನ್ನಡಿಗರು ಕನ್ನಡವನ್ನು ಎಲ್ಲೆಡೆ ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ, ಬಳಸುವಂತಾಗಬೇಕು. ಕನ್ನಡ ಮನೆ ಭಾಷೆಯಾಗುವುದರ ಜೊತೆಗೆ ವ್ಯವಹಾರಿಕ ಭಾಷೆಯಾಗಿಯೂ ಬಳಕೆಯಾಗಬೇಕು. ಈ ಮೂಲಕ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಅಭಿವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ। ಮಹೇಶ್‌ ಜೋಶಿ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿಯ ಅಡಿಪಾಯದ ಮೇಲೆ ಬೆಳೆಯುತ್ತಿರುವ ವಿಶ್ವದಲ್ಲಿಯೇ ವಿರಳವೆನ್ನಿಸಬಹುದಾದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಎಲ್ಲ ನೆಲೆಗಳಲ್ಲಿಯೂ ಕನ್ನಡವನ್ನು ಬೆಳೆಸುವ ಮತ್ತು ಉಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷ ಎಚ್.ವಿ.ನಂಜುಂಡಯ್ಯಅವರ ಮೊಮ್ಮಗ ಡಾ। ರವೀಂದ್ರ ಅರೋಡಿ, ದತ್ತಿದಾನಿ ಡಾ। ಎ.ಪುಷ್ಪಾ ಅಯ್ಯಂಗಾರ್ ಮತ್ತು ಎನ್.ಕೆ.ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ದತ್ತಿ ಪ್ರಶಸ್ತಿ ಪ್ರದಾನ:

ಸಮಾರಂಭದಲ್ಲಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮತ್ತು ಡಾ। ಅಮರೇಂದ್ರ ಹೊಲ್ಲಂಬಳ್ಳಿ ಅವರಿಗೆ ‘ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್’ ಧರ್ಮದರ್ಶಿಗಳ ಪ್ರಶಸ್ತಿ ಮತ್ತು ಕೆ.ಜಿ.ಸರೋಜಾ ನಾಗರಾಜ್‌, ಡಾ। ಕೆ.ವಿ.ರಾಜೇಶ್ವರಿ ಅವರಿಗೆ ಕಾದಂಬರಿಗಾರ್ತಿ ‘ದಿ.ಎ.ಪಂಕಜಶ್ರೀ ಪ್ರಶಸ್ತಿ’ ಹಾಗೂ ‘ನಾಗಡಿಕೆರೆ-ಕಿಟ್ಟಪ್ಪ ಗೌಡ ರುಕ್ಮಿಣಿ ತೀರ್ಥ ಹಳ್ಳಿ’ ದತ್ತಿ ಪ್ರಶಸ್ತಿಯನ್ನು ಕೆ.ಎನ್.ಪುಟ್ಟಲಿಂಗಯ್ಯ ಗೌಡ ಅವರಿಗೆ ಪ್ರದಾನ ಮಾಡಿ ಸನ್ಮಾನಿಸಲಾಯಿತು.