ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಶಿಕ್ಷಣ ಇಲಾಖೆ ಪ್ರತಿವರ್ಷವೂ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆ ಜೊತೆಗೆ ಇತರೆ ಚಟುವಟಿಕೆ ಹಮ್ಮಿಕೊಂಡು ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸಲು ಅನೇಕ ಕಾರ್ಯಕ್ರಮ ರೂಪಿಸಿದೆ. ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಯೂ ವಿದ್ಯಾರ್ಥಿಗಳ ಬದುಕಿಗೆ ಹೊಸ ಆಯಾಮ ತುಂಬಲಿದೆ. ೨೦೨೪- ೨೫ನೇ ಸಾಲಿನ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಯಶಸ್ವಿಗೊಳಿಸುವಲ್ಲಿ ಎಲ್ಲರೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿದರು.ಅವರು, ನಗರದ ಆದರ್ಶ ವಿದ್ಯಾಲಯದಲ್ಲಿ ಪ್ರಸ್ತುತ ವರ್ಷದ ಹೋಬಳಿ ಮತ್ತು ವಲಯಮಟ್ಟದ ಕ್ರೀಡಾಕೂಟಗಳ ಪೂರ್ವಬಾವಿ ಸಭೆ ಉದ್ಘಾಟಿಸಿ ಮಾತನಾಡಿ, ಪ್ರತಿವರ್ಷ ಎಲ್ಲಾ ಕ್ರೀಡೆಗಳಲ್ಲೂ ಚಳ್ಳಕೆರೆ ತಾಲೂಕು ಉತ್ತಮ ಸಾಧನೆ ದಾಖಲಿಸುತ್ತಾ ಬಂದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಬಹುತೇಕ ಪಂದ್ಯ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಕ್ರೀಡಾಕೂಟದ ಯಶಸ್ವಿಗೆ ಎಲ್ಲರೂ ಇಲಾಖೆಯೊಂದಿಗೆ ಕೈಜೋಡಿಸಿ ಎಂದರು. ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯ ಅಶೋಕರೆಡ್ಡಿ, ಪ್ರಸ್ತುತ ವರ್ಷದ ಕ್ರೀಡಾಕೂಟಕ್ಕೆ ಚಾಲನೆಗೆ ಶಾಲೆಯಲ್ಲಿ ಈ ಸಭೆ ಆಯೋಜಿಸಿರುವುದು ಸಂತಸ ತಂದಿದೆ. ನಮ್ಮ ಶಾಲೆಯಲ್ಲೂ ಸಹ ಹಲವಾರು ಕ್ರೀಡಾಪಟುಗಳಿದ್ದಾರೆ. ಕ್ರೀಡಾಪಟುಗಳ ಭವಿಷ್ಯ ಉಜ್ವಲಗೊಳಿಸುವಲ್ಲಿ ಶಿಕ್ಷಣ ಇಲಾಖೆ ಈ ಕಾರ್ಯ ಒಂದು ಉತ್ತಮ ಹೆಜ್ಜೆ ಎಂದರು.
ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಇಂದು ಕ್ರಿಕೆಟ್ ಸೇರಿ ಎಲ್ಲಾ ಕ್ರೀಡೆಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ಕ್ರೀಡೆಯಲ್ಲಿ ಭಾರತದ ಶಕ್ತಿ ಹೆಚ್ಚಾಗಿದೆ. ಇತ್ತೀಚೆಗೆ ತಾನೇ ಟಿ.೨೦ ವಿಶ್ವಕಪ್ ಗೆಲ್ಲುವಲ್ಲಿ ಭಾರತ ಯಶಸ್ವಿಯಾಗಿದೆ. ನಾವೆಲ್ಲರೂ ಕ್ರೀಡೆ ಹೆಚ್ಚು ಉತ್ತೇಜಿಸಬೇಕು ಎಂದರು.ತಾಲೂಕು ದೈಹಿಕ ಶಿಕ್ಷಕರ ನಿರ್ದೇಶಕ ಸುನೀಲ್ ನಾಯ್ಕ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ, ವಿಶ್ವಭಾರತಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ.ಟಿ.ವೀರಭದ್ರಸ್ವಾಮಿ, ಡಿ.ಎಸ್.ಪಾಲಯ್ಯ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಜಕುಮಾರ್, ಕಾರ್ಯದರ್ಶಿ ಶ್ರೀರಾಮ ನಾಯಕ, ಖಜಾಂಚಿ ಮರವಾಯಿ ಶ್ರೀನಿವಾಸ್, ಉಮೇಶ್, ಸಿದ್ದಪ್ಪ ಉಪಸ್ಥಿತರಿದ್ದರು.