ಪಂಪ ಮಹಾಕವಿಯಿಂದ ಹಿಡಿದು ರಾಷ್ಟ್ರಕವಿ ಕುವೆಂಪು ಅವರವರೆಗೆ ಕನ್ನಡದ ಪ್ರಮುಖ ಕವಿಗಳ ಕಾವ್ಯಕೃತಿಗಳನ್ನು ಆಳವಾಗಿ ವಿಮರ್ಶಿಸಿ, ಅವುಗಳ ಸಾಹಿತ್ಯಿಕ ಮೌಲ್ಯವನ್ನು ಅನಾವರಣಗೊಳಿಸಿದ ಹಿರಿಮೆ ಜಿ.ಎಚ್. ನಾಯಕ ಅವರಿಗೆ ಸಲ್ಲುತ್ತದೆ.

ಅಂಕೋಲಾ: ವಿನಯಶೀಲ ವಿಮರ್ಶಕರೆಂದೇ ಗುರುತಿಸಿಕೊಂಡಿದ್ದ ಜಿ.ಎಚ್. ನಾಯಕರು ಯಾವುದೇ ಕೃತಿಯನ್ನು ವಿಮರ್ಶಿಸುವಾಗಲೂ ಕೃತಿಕಾರನ ಸೃಜನಶೀಲತೆಯನ್ನು ಗೌರವಿಸಿ, ಅವರ ಮನಸ್ಸಿಗೆ ನೋವಾಗದಂತೆ ಎಚ್ಚರಿಕೆಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು ಎಂದು ವಿಮರ್ಶಕ ನಟರಾಜ್ ಹುಳಿಯಾರ ಅಭಿಪ್ರಾಯಪಟ್ಟರು.

ಪಟ್ಟಣದ ಜಿಸಿ ಕಾಲೇಜಿನಲ್ಲಿ ಜಿ.ಎಚ್. ನಾಯಕ ಪ್ರತಿಷ್ಠಾನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪಂಪ ಮಹಾಕವಿಯಿಂದ ಹಿಡಿದು ರಾಷ್ಟ್ರಕವಿ ಕುವೆಂಪು ಅವರವರೆಗೆ ಕನ್ನಡದ ಪ್ರಮುಖ ಕವಿಗಳ ಕಾವ್ಯಕೃತಿಗಳನ್ನು ಆಳವಾಗಿ ವಿಮರ್ಶಿಸಿ, ಅವುಗಳ ಸಾಹಿತ್ಯಿಕ ಮೌಲ್ಯವನ್ನು ಅನಾವರಣಗೊಳಿಸಿದ ಹಿರಿಮೆ ಜಿ.ಎಚ್. ನಾಯಕ ಅವರಿಗೆ ಸಲ್ಲುತ್ತದೆ ಎಂದರು.

ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಮಾತನಾಡಿ, ನಾಡಿನ ಖ್ಯಾತ ವಿಮರ್ಶಕರು, ಚಿಂತಕರು ಹಾಗೂ ಸಾಹಿತಿಗಳಲ್ಲಿ ಒಬ್ಬರಾಗಿರುವ ಜಿ.ಎಚ್. ನಾಯಕ ಅವರು ಸಾಹಿತ್ಯ ವಿಮರ್ಶೆಯ ಮೂಲಕ ಕನ್ನಡ ಸಾಹಿತ್ಯದ ಮೌಲ್ಯಗಳನ್ನು ವಿಶ್ಲೇಷಿಸಿ, ತಮ್ಮ ವೈಚಾರಿಕ ಮತ್ತು ಪ್ರಗತಿಪರ ಚಿಂತನೆಗಳಿಂದ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದರು.

ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಮಾತನಾಡಿ, ಅಂಕೋಲೆಯ ಮಣ್ಣಿನಲ್ಲಿರುವ ತ್ಯಾಗದ ಪರಂಪರೆ ಹಾಗೂ ಹೋರಾಟದ ಪ್ರಭಾವವೇ ಜಿ.ಎಚ್. ನಾಯಕರಂಥ ಮಹಾನ್ ವಿಮರ್ಶಕರ ಸೃಷ್ಟಿಗೆ ಪ್ರೇರಣೆಯಾಗಿದೆ. ವಿಧೇಯತೆ, ವಿನಯವಂತಿಕೆ ಹಾಗೂ ಸರಳತೆಯನ್ನು ಮೈಗೂಡಿಸಿಕೊಂಡು ಸಂತನಂತೆ ಬದುಕು ಸಾಗಿಸಿದ ಜಿ.ಎಚ್. ನಾಯಕರ ಜೀವನಕ್ರಮ, ಅವರು ನಾಡು ಗುರುತಿಸುವಂತಹ ಅಪೂರ್ವ ಸಾಧನೆಗಳನ್ನು ಮಾಡುವಂತೆ ಪ್ರೇರೇಪಿಸಿದೆ ಎಂದರು.

ಜಿ.ಎಚ್. ನಾಯಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಖ್ಯಾತ ವಿಮರ್ಶಕರಾಗಿ ತಮ್ಮದೇ ಆದ ಛಾಪು ಮೂಡಿಸಿರುವ ಜಿ.ಎಚ್. ನಾಯಕ ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಟ್ರಸ್ಟ್, ಮುಂದಿನ ದಿನಗಳಲ್ಲಿ ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಪೂರಕವಾಗುವಂತೆ ಹಲವು ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ ಎಂದರು.

ಸಾಹಿತಿ ಹೊನ್ನಮ್ಮಾ ನಾಯಕ ಮಾತನಾಡಿ, ಪ್ರಾಮಾಣಿಕತೆ, ನಿಷ್ಠೆ ಹಾಗೂ ಮೌಲ್ಯಾಧಾರಿತ ಬದುಕಿನ ಮೂಲಕ ಅವರು ಸಮಾಜಕ್ಕೆ ಮಾದರಿಯಾದ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು ಎಂದರು.

ನಿವೃತ್ತ ಉಪನ್ಯಾಸಕ ವಸಂತ ನಾಯಕ, ಜಿ.ಸಿ. ಕಾಲೇಜಿನ ಪ್ರಾಚಾರ್ಯ ಡಾ. ಎಸ್.ವಿ. ವಸ್ತ್ರದ, ಸಹಕಾರಿ ಧುರೀಣ ಜಾರ್ಜ್ ಫರ್ನಾಂಡಿಸ್ ಉಪಸ್ಥಿತರಿದ್ದರು. ಟ್ರಸ್ಟ್ ಉಪಾಧ್ಯಕ್ಷ, ನಿವೃತ್ತ ಪ್ರಾಚಾರ್ಯ ಡಾ. ಮಹೇಶ ಗೋಳಿಕಟ್ಟೆ ಸ್ವಾಗತಿಸಿದರು.

ಸಾಹಿತಿ ಜೆ. ಪ್ರೇಮಾನಂದ ಪರಿಚಯಿಸಿದರು. ಡಯಟ್ ಕಾಲೇಜಿನ ನಿವೃತ್ತ ಉಪನ್ಯಾಸಕ ಎನ್.ಜೆ. ನಾಯಕ ಉಪಸ್ಥಿತರಿದ್ದರು. ಪರ್ತಕರ್ತ ಮಾರುತಿ ಹರಿಕಂತ್ರ ನಿರೂಪಿಸಿದರು. ಸಾಹಿತಿ, ಟ್ರಸ್ಟ್ ಕೋಶಾಧ್ಯಕ್ಷ ಸಂದೀಪ ನಾಯಕ ವಂದಿಸಿದರು.