ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಸ್ಪರ್ಧಿಸಲಿದ್ದು, ಜೆಡಿಎಸ್ ಪ್ರಭಾವ ಇರುವ ಕಡೆಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುವುದು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

 ಮಡಿಕೇರಿ : ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಹಿನ್ನೆಲೆಯಲ್ಲಿ ಮುಂಬರುವ ಜಿ.ಪಂ, ತಾ.ಪಂ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಎನ್‌ಡಿಎ ಮೈತ್ರಿ ಕೂಟದ ಮೂಲಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಜೆಡಿಎಸ್‌ ಪ್ರಭಾವ ಇರುವ ಕಡೆಗಳಲ್ಲಿ ಪಕ್ಷದ ಸಮರ್ಥ ಕಾರ್ಯಕರ್ತರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಜಾತ್ಯತೀತ ಜನತಾದಳದ ಸದಸ್ಯತ್ವ ಅಭಿಯಾನದ 3 ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ನಗರದ ರಾಜದರ್ಶನ್ ಸಭಾಂಗಣದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಕನಿಷ್ಠ 10 ಸಾವಿರ ಸದಸ್ಯರನ್ನು ನೋಂದಾಯಿಸುವ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕೆಂದು ಕರೆ ನೀಡಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಸಂದರ್ಭ 6 ತಿಂಗಳಲ್ಲಿ 8 ಬಾರಿ ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಮಾತ್ರವಲ್ಲದೇ ನೂರಾರು ಸಂತ್ರಸ್ತರಿಗೆ 9.80 ಲಕ್ಷ ರು. ಗಳಲ್ಲಿ ನಿರ್ಮಿಸಿಕೊಡುವ ಮೂಲಕ ಸುಸಜ್ಜಿತ ಮನೆಗಳನ್ನು ಕೊಡುಗೆ ನೀಡಿದ್ದರು. ಇದು ಜೆಡಿಎಸ್ ಪಕ್ಷದ ಹೆಗ್ಗಳಿಕೆಯೂ ಆಗಿದೆ ಎಂದು ಸ್ಮರಿಸಿದರು. ಇದೀಗ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಎನ್‌ಡಿಎ ಒಕ್ಕೂಟದಲ್ಲಿ ಬೆರೆತಿವೆ. ಮುಂಬರುವ ಚುನಾವಣೆಗಳಲ್ಲಿ ಎನ್‌ಡಿಎ ಮೈತ್ರಿ ಕೂಟದ ಮೂಲಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ.

ಜೆಡಿಎಸ್ ಪ್ರಭಾವ ಇರುವ ಕಡೆಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆ. ಆ ಕಾರಣ ಜೆಡಿಎಸ್ ಪಕ್ಷದ ನೋಂದಣಿಯನ್ನು ಹೆಚ್ಚಿಸಬೇಕಿದೆ. ಕಾರ್ಯಕರ್ತರು ಶ್ರಮ ವಹಿಸಬೇಕು ಎಂದು ಕರೆ ನೀಡಿದರು.

ಎನ್‌ಡಿಎ ಮೈತ್ರಿ ಕೂಟದ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸಿದಲ್ಲಿ ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ ಎಂದು ಸಾ.ರಾ.ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯ 5 ತಾಲೂಕು ಅಧ್ಯಕ್ಷರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾ ಜೆಡಿಎಸ್‌ಗೆ ಅಧ್ಯಕ್ಷರನ್ನು ನೇಮಕ ಪಟ್ಟಿಯನ್ನು ಮಾಡಲಾಗುತ್ತದೆ. ಆಕಾಂಕ್ಷಿಗಳ ಪಟ್ಟಿಯನ್ನು ಪಡೆದುಕೊಂಡು ವರಿಷ್ಠರ ಮುಂದಿಡಲಾಗುತ್ತದೆ. ಸದಸ್ಯತ್ವ ಅಭಿಯಾನ ಪೂರ್ಣಗೊಂಡ ಬಳಿಕ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ ಎಂದರು.

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಸಿ.ಎಲ್.ವಿಶ್ವ ಮಾತನಾಡಿ, ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಯ ಸಮಯವಾಗಿರುವ ಹಿನ್ನೆಲೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ನೀಡುವಂತಾಗಬೇಕು. ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆ ಸಂದರ್ಭ ಕಾಂಗ್ರೆಸ್‌ಗೆ ಬೆಂಬಲ ನೀಡಿದ ಜೆಡಿಎಸ್ ಸದಸ್ಯರನ್ನು ಪಕ್ಷದಿಂದ ಅಮಾನತು ಮಾಡಿ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎನ್‌ಡಿಎ ಮೈತ್ರಿ ಕೂಟದ ಮೂಲಕ ಚುನಾವಣೆ ಎದುರಿಸಿದರೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲಿ ಗೆಲುವು ಸಾಧಿಸಬಹುದು ಎಂದರು. ಇದೇ ಸಂದರ್ಭ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಮಾತನಾಡಿ, ಜಿಲ್ಲಾ ಜೆಡಿಎಸ್‌ಗೆ ನೂತನ ಜಿಲ್ಲಾಧ್ಯಕ್ಷರ ನೇಮಕ ಮಾಡಬೇಕು. ಈ ಕುರಿತು ರಾಜ್ಯ ವರಿಷ್ಠರ ಗಮನ ಸೆಳೆಯುವಂತೆ ಸದಸ್ಯತ್ವ ನೋಂದಣಿ ಉಸ್ತುವಾರಿ ಸಾ.ರಾ.ಮಹೇಶ್ ಅವರನ್ನು ಆಗ್ರಹಿಸಿದರು.

ಮಡಿಕೇರಿ ತಾಲೂಕು ಅಧ್ಯಕ್ಷ ರವಿಕಿರಣ್ ಶೆಟ್ಟಿ, ವಿರಾಜಪೇಟೆ ಅಧ್ಯಕ್ಷ ಪಿ.ಎ.ಮಂಜುನಾಥ್, ಸೋಮವಾರಪೇಟೆ ಅಧ್ಯಕ್ಷ ಸಿ.ಎಲ್.ನಾಗರಾಜು, ಕುಶಾಲನಗರ ಅಧ್ಯಕ್ಷ ಕೋಟಿ ರಾಮಣ್ಣ ಪ್ರವೀಣ್‌, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಜಿ.ಜಾಶಿರ್, ಪ್ರಮುಖರಾದ ವಿಠಲ ಗೌಡ, ಶ್ರೀನಿವಾಸ್‌, ಸುರೇಶ್, ಜಯಮ್ಮ ಉಪಸ್ಥಿತರಿದ್ದರು.