ಜಿ.ಎಸ್. ಶಿವರುದ್ರಪ್ಪ ಅವರು ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ? ಎಂಬ ತಮ್ಮ ಕವಿತೆಗಳ ಮೂಲಕ ಜನಮನ ಪ್ರಭಾವಿಸಿದರು. ಭಾವಗೀತೆ ಪರಂಪರೆಗೆ ಹೊಸ ಸಿಂಚನ ತಂದ ಇವರು ಮನಸ್ಸು ಮರುಭೂಮಿಯಾದರೆ ಬದುಕಿಗೆ ಅರ್ಥವಿಲ್ಲವೆಂದು ಕಳಕಳಿ ವ್ಯಕ್ತಪಡಿಸಿದರು.

ಗದಗ: ನವ್ಯ, ನವೋದಯ, ದಲಿತ, ಬಂಡಾಯ ಹೀಗೆ ಯಾವುದೇ ಕಾವ್ಯ ಪಂಥಕ್ಕೆ ಕಟ್ಟು ಬೀಳದೆ ಪ್ರಗತಿಪರ ಧೋರಣೆಯನ್ನೇ ಕಾವ್ಯದ ಮುಖ್ಯ ಧ್ಯೇಯವಾಗಿಸಿಕೊಂಡ ಶಿವರುದ್ರಪ್ಪನವರು ಜೀವನದ ಅನುಭವಗಳಿಗೆ ಸ್ಪಂದಿಸಿ ಮೌಲಿಕ ಕೃತಿಗಳನ್ನು ರಚಿಸಿದರು. ಮನಸ್ಸು ಸದಾ ಮಾನವೀಯ ಮೌಲ್ಯಗಳ ನೆಲೆಯಾಗಿ ಸುಮಧುರ ಬಾಂಧವ್ಯಕ್ಕೆ ಸೇತುವಾಗಬೇಕೆಂದು ಪ್ರತಿಪಾದಿಸಿದ ಸಮನ್ವಯ ಕವಿ ಜಿ.ಎಸ್. ಶಿವರುದ್ರಪ್ಪನವರು ಎಂದು ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ ತಿಳಿಸಿದರು.

ನಗರದ ಕಬ್ಬಿಗರ ಕೂಟದಲ್ಲಿ ನಡೆದ ಜಿ.ಎಸ್. ಶಿವರುದ್ರಪ್ಪನವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಶಿವರುದ್ರಪ್ಪನವರ ಬದುಕು ಬರಹ ಕುರಿತು ಉಪನ್ಯಾಸ ನೀಡಿದರು.

ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ? ಎಂಬ ತಮ್ಮ ಕವಿತೆಗಳ ಮೂಲಕ ಜನಮನ ಪ್ರಭಾವಿಸಿದರು. ಭಾವಗೀತೆ ಪರಂಪರೆಗೆ ಹೊಸ ಸಿಂಚನ ತಂದ ಇವರು ಮನಸ್ಸು ಮರುಭೂಮಿಯಾದರೆ ಬದುಕಿಗೆ ಅರ್ಥವಿಲ್ಲವೆಂದು ಕಳಕಳಿ ವ್ಯಕ್ತಪಡಿಸಿದರು. ಕಲ್ಲು ಮಣ್ಣಿನ ಗುಡಿಗಳಲ್ಲಿ ಇಲ್ಲದ ದೇವರನ್ನು ಹುಡುಕುವುದರ ಬದಲು ಮನುಷ್ಯರಲ್ಲಿ ಹುದುಗಿದ ಪ್ರೀತಿ, ವಾತ್ಸಲ್ಯ, ಮಮತೆ, ಕಳಕಳಿಗಳನ್ನು ಗುರುತಿಸುವ ಪ್ರಯತ್ನವೇ ದೇವರ ಅನ್ವೇಷಣೆ ಎಂದು ತಮ್ಮ ಸಾಹಿತ್ಯದ ಮೂಲಕ ಮನವರಿಕೆ ಮಾಡಿಕೊಟ್ಟದ್ದಾರೆ ಎಂದರು.ಐವತ್ತರ ದಶಕದಲ್ಲೇ ಸಾಹಿತ್ಯ ಕೃಷಿ ಪ್ರಾರಂಭಿಸಿದ ಕವಿ ಶಿವರುದ್ರಪ್ಪ ಏಳು ದಶಕಗಳ ನಿರಂತರ ಕಾವ್ಯ, ವಿಮರ್ಶೆ, ಸಂಶೋಧನೆ ಇತ್ಯಾದಿ ಪ್ರಕಾರಗಳಲ್ಲಿ 60ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದರು. ಕುವೆಂಪು, ಬೇಂದ್ರೆ ಪ್ರಭಾವದಲ್ಲಿ ಬೆಳೆದರೂ ತಮ್ಮ ಆಸ್ಮಿತೆಯನ್ನು ಉಳಿಸಿಕೊಂಡು ಸಾಹಿತ್ಯ ಕೃಷಿಗೈದರು. ಜನಪರ, ಜೀವಪರ ಆಶಯಗಳನ್ನೆ ಮುಖ್ಯ ಗುರಿಯಾಗಿಸಿಕೊಂಡು ಶಿವರುದ್ರಪ್ಪ ಪ್ರಗತಿಪರ, ಚಿಂತನಪರ ಸಾಹಿತ್ಯ ರಚನೆ ಮಾಡಿದರೆಂದರು.ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಮಾತನಾಡಿ, ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಶಿವರುದ್ರಪ್ಪನವರ ಜನ್ಮಶತಮಾನೋತ್ಸವವನ್ನು ಗದಗ ಪರಿಸರದಲ್ಲಿ ಮೊಟ್ಟ ಮೊದಲು ಆಚರಿಸಿದ ಹಿರಿಮೆ ಕಬ್ಬಿಗರ ಕೂಟಕ್ಕೆ ಸಲ್ಲುತ್ತದೆ ಎಂದರು.

ಈ ವೇಳೆ ನಿವೃತ್ತ ಶಿಕ್ಷಕ ಎಸ್.ಎಸ್. ಮಲ್ಲಾಪೂರ, ನಿವೃತ್ತ ಉಪತಹಸೀಲ್ದಾರ್ ಪ್ರ.ತೋ. ನಾರಾಯಣಪೂರ, ಎಂ.ವಿ. ಕೆಂಭಾವಿಮಠ, ಟಿ.ಐ. ಗದಗಿನ, ವೆಂಕಟೇಶ ಮೇರವಾಡೆ, ರಾಘವೇಂದ್ರ ಮೇದಾರ, ಬಸವರಾಜ ಗಣಪ್ಪನವರ, ಶ್ರೀಶ ಕಬಾಡಿ, ಆರ್.ಡಿ. ನಾಡಗೇರ, ಡಿ.ಎಂ. ಕೆರೂರ, ಜಗನ್ನಾಥ, ಶರೀಫ ದೊಡ್ಡಮನಿ ಮುಂತಾದವರು ಇದ್ದರು. ನಜೀರ ಸಂಶಿ ಸ್ವಾಗತಿಸಿದರು. ಬಾಬಾಜಾನ ಯಲಿಗಾರ ವಂದಿಸಿದರು.