ಮೋದಿ ಕೇವಲ ಸುಳ್ಳನ್ನೇ ಪಸರಿಸುತ್ತಿದ್ದಾರೆ: ಜಿ.ವಿ. ಸೀತಾರಾಮ್

| Published : Apr 18 2024, 02:28 AM IST

ಸಾರಾಂಶ

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆಯೋ ಅಥವಾ ಮೋದಿಯದ್ದೋ ಎನ್ನುವಂತ ಪರಿಸ್ಥಿತಿ ಇದೆ. ಪಕ್ಷ ಮತ್ತು ಪ್ರಣಾಳಿಕೆಯಲ್ಲಿ ಬಿಜೆಪಿ ಗ್ಯಾರಂಟಿ ಎಂಬುದರ ಬದಲಿಗೆ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಮೋದಿ ಇಲ್ಲದಿದ್ದರೆ ಬಿಜೆಪಿ ಇಲ್ಲ, ಆರ್.ಎಸ್.ಎಸ್ ಇಲ್ಲವೇ ಇಲ್ಲ ಎನ್ನುವಂತಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಏಕ ಚಕ್ರಾಧಿಪತಿಯಂದೆ ನಡೆದುಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಕೇವಲ ಸುಳ್ಳನ್ನೇ ಪಸರಿಸುತ್ತಿದ್ದಾರೆ ಎಂದು ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮ್ ಟೀಕಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆಯೋ ಅಥವಾ ಮೋದಿಯದ್ದೋ ಎನ್ನುವಂತ ಪರಿಸ್ಥಿತಿ ಇದೆ. ಪಕ್ಷ ಮತ್ತು ಪ್ರಣಾಳಿಕೆಯಲ್ಲಿ ಬಿಜೆಪಿ ಗ್ಯಾರಂಟಿ ಎಂಬುದರ ಬದಲಿಗೆ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಮೋದಿ ಇಲ್ಲದಿದ್ದರೆ ಬಿಜೆಪಿ ಇಲ್ಲ, ಆರ್.ಎಸ್.ಎಸ್ ಇಲ್ಲವೇ ಇಲ್ಲ ಎನ್ನುವಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೂ ಕೂಡ ಬರ ಪರಿಹಾರ ನೀಡುವ ನಿಟ್ಟಿನಲ್ಲಿ ತಾಂತ್ರಿಕ ತೊಂದರೆ ಎದುರಾದವು ಎಂದಿದ್ದಾರೆ. ರಾಜ್ಯದ ಸಿಎಂ ಸೇರಿದಂತೆ ಸಂಪುಟದ ಎಲ್ಲರೂ ರಾಜ್ಯದಲ್ಲಿನ ಬರ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹೀಗಾಗಿ ವಿಜಯೇಂದ್ರ ಅವರ ಹೇಳಿಕೆ ಬರ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರದ ವೈಫಲ್ಯ ಒಪ್ಪಿಕೊಂಡಂತಾಗಿದೆ ಎಂದು ಅವರು ದೂರಿದರು.

ಇದೇ ವೇಳೆ, ಮೋದಿ ಅವರ ವಿಕಸಿತ ಭಾರತ ಪರಿಕಲ್ಪನೆ ಕೂಡ ಸುಳ್ಳಾಗಿದೆ. ಕಳೆದ ಹತ್ತು ವರ್ಷಗಳಿಂದ ಹೇಳಿದ್ದನ್ನೇ ಹೇಳುತ್ತಿದ್ದಾರೆಯೇ ಹೊರತು ಏನನ್ನೂ ಸಾಧಿಸಿಲ್ಲ. ಹೀಗಾಗಿ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯನ್ನು ಕಿತ್ತೊಗೆದು ಗ್ಯಾರೆಂಟಿ ಜಾರಿಗೊಳಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಕೋಟೆಹುಂಡಿ ಮಹದೇವ್, ಗೋಪಿನಾಥ್, ಆನಂದ್, ಶಿವನಾಗಪ್ಪ ಇದ್ದರು.