ಸಾರಾಂಶ
ಶಿವಕುಮಾರ ಕುಷ್ಟಗಿಕನ್ನಡಪ್ರಭ ವಾರ್ತೆ ಗದಗಜಿಲ್ಲಾ ಕೇಂದ್ರವಾದ ಗದಗ-ಬೆಟಗೇರಿ ಅವಳಿ ನಗರಕ್ಕೆ ನಿತ್ಯವೂ ಕೆಲಸ ಕಾರ್ಯಗಳಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಹೋಗುತ್ತಾರೆ. ಅವಳಿ ನಗರದ ಜನಸಂಖ್ಯೆಯೇ 2.24 ಲಕ್ಷವಿದೆ. ನಿತ್ಯವೂ ಲಕ್ಷಾಂತರ ಜನರಿಗೆ ಅವಶ್ಯವಿರುವ ಜೀವಜಲವನ್ನು ಸರಬರಾಜು ಮಾಡುವಲ್ಲಿ ನಗರಸಭೆ ಹೆಣಗಾಡುತ್ತಿದೆ.ಸಾರ್ವಜನಿಕರಿಗೆ ನಿತ್ಯ ಬಳಕೆಗೆ ನೀರು ಸಿಗದಂತಾಗಿದೆ. ಇನ್ನು ಶುದ್ಧವಾದ ನೀರು ಎನ್ನುವುದು ಕನಸಿನ ಮಾತಾಗಿದೆ. ದೇಶಕ್ಕೆ ಶುದ್ಧ ಕುಡಿವ ನೀರಿನ ಘಟಕಗಳನ್ನು ಪರಿಚಯಿಸಿದ ಗದಗ ನಗರದಲ್ಲಿಯೇ ಶುದ್ಧ ಕುಡಿವ ನೀರಿನ ಘಟಕಗಳು ಕುಂಟುತ್ತಾ, ತೆವಳುತ್ತಾ ಸಾಗುತ್ತಿವೆ. ಇನ್ನು ಹಲವಾರು ಘಟಕಗಳು ಸ್ಥಗಿತಗೊಂಡಿದ್ದು, ಸಾರ್ವಜನಿಕರು ಮತ್ತದೇ ಫ್ಲೋರೈಡ್ ಯುಕ್ತ ನೀರನ್ನೇ ಕುಡಿಯುವಂತಾಗಿದೆ. ಒಟ್ಟು 30 ಘಟಕಗಳಿವೆ: ಅವಳಿ ನಗರದ ವಿವಿಧ ಬಡಾವಣೆಗಳಲ್ಲಿ ಬೇರೆ ಬೇರೆ ಖಾಸಗಿ ಸೇವಾ ಸಂಸ್ಥೆಗಳ ಸಹಾಯದಿಂದ 30 ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಬೇಸಿಗೆ ಪೂರ್ವದಲ್ಲಿಯೇ ಅವುಗಳ ನಿರ್ವಹಣೆ ಮಾಡಬೇಕಾದ ಅಧಿಕಾರಿಗಳು, ನಗರಸಭೆಯ ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಸದ್ಯ 14 ಶುದ್ಧ ಕುಡಿವ ನೀರಿನ ಘಟಕಗಳು ಸ್ಥಗಿತಗೊಂಡಿದ್ದು, 16 ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಸ್ಥಗಿತಕ್ಕೆ ಕಾರಣವೇನು?: ಸದ್ಯ ಸ್ಥಗಿತಗೊಂಡಿರುವ 14 ಶುದ್ಧ ಕುಡಿವ ನೀರಿನ ಘಟಕಗಳ ಸ್ಥಗಿತಕ್ಕೆ ಪ್ರಮುಖ ಕಾರಣ, ಅಂತರ್ಜಲ ಕೊರತೆಯಿಂದಾಗಿ ಕೊಳವೆಬಾವಿಗಳು ಬತ್ತಿರುವುದು, ಇನ್ನು ಸಾರ್ವಜನಿಕರು ನಿರೀಕ್ಷಿತ ಪ್ರಮಾಣದಲ್ಲಿ ಶುದ್ಧ ನೀರು ಬಳಕೆ ಮಾಡದೇ ಇರುವ ಹಿನ್ನೆಲೆಯಲ್ಲಿ ಘಟಕ ಸ್ಥಾಪಿಸಿದ ಕಟ್ಟಡಗಳ ಬಾಡಿಗೆ, ವಿದ್ಯುತ್ ಬಿಲ್, ನಿರ್ವಹಣೆ ಹಾಗೂ ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ವೇತನ ನೀಡಲು ಸಾಧ್ಯವಾಗದೇ ಘಟಕಗಳು ಹಾಗೂ ಅವಳಿ ನಗರದಲ್ಲಿ ಅಕ್ರಮ ಕಟ್ಟಡ ತೆರವು (ವಕಾರ ಸಾಲು ತೆರವು) ಸಂದರ್ಭದಲ್ಲಿ ಇನ್ನೂ ಕೆಲವು ಘಟಕಗಳು ಸ್ಥಗಿತಗೊಂಡಿವೆ.
ಆರಂಭದಲ್ಲಿದ್ದ ಆಸಕ್ತಿ ಈಗಿಲ್ಲ: ಅವಳಿ ನಗರದಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ಪ್ರಾರಂಭಿಸುವ ವೇಳೆಯಲ್ಲಿ ಖಾಸಗಿ ಸೇವಾ ಸಂಸ್ಥೆಗಳು ತೋರಿಸುತ್ತಿದ್ದ ಆಸಕ್ತಿಯನ್ನು ಈಗ ತೋರಿಸುತ್ತಿಲ್ಲ. ಹಾಗಾಗಿ ಹಲವಾರು ಘಟಕಗಳ ಸ್ಥಗಿತಗೊಂಡಿವೆ. ಇನ್ನು ಕೆಲವು ಘಟಕಗಳು ಚಾಲನೆಯಲ್ಲಿದ್ದರೂ ಅವುಗಳ ನಿರ್ವಹಣೆ ಸರಿಯಾಗಿ ನಡೆಯದ ಹಿನ್ನೆಲೆಯಲ್ಲಿ ಆರ್ ಓ ಘಟಕಗಳ ನೀರಿಗಿಂತ ಸಾಮಾನ್ಯ ನೀರೇ ಎಷ್ಟೋ ಚೆನ್ನಾಗಿದೆ ಎನ್ನುವಂತಾ ಚರ್ಚೆಗಳು ಅವಳಿ ನಗರದಲ್ಲಿದ್ದು ಈ ಬಗ್ಗೆ ಅಧಿಕಾರಿಗಳು, ಖಾಸಗಿ ಸಂಸ್ಥೆಳು ಗಮನ ಹರಿಸಬೇಕಿದೆ.ಅತಿಯಾದ ಪ್ಲೋರೈಡ್ ಇದೆ: ಗದಗ-ಬೆಟಗೇರಿ ಅವಳಿ ನಗರದಲ್ಲಿನ ಯಾವುದೇ ಕೊಳವೆಬಾವಿಗಳಲ್ಲಿ ನೀರಿನ ಗಡಸು (ಟಿಡಿಎಸ್) ಟೋಟಲ್ ಡಿಸಾಲ್ವಡ್ ಸಾಲಿಡ್) ಪ್ರಮಾಣ ಕನಿಷ್ಠ 2500 (ಪಿಪಿಎಂ) ರಿಂದ ಪ್ರಾರಂಭವಾಗಿ ಯಾವುದೇ ರೀತಿಯ ಬಳಕೆಗೆ ಯೋಗ್ಯವಲ್ಲದ 5 (ಪಿಪಿಎಂ) ಪಾರ್ಟ್ಸ್ ಫರ್ ಮಿಲಯನ್) ಸಾವಿರದವರೆಗೂ ಗಡಸು ಹಾಗೂ ಫ್ಲೋರೈಡ್ ಅಂಶ ಕಂಡು ಬರುತ್ತಿದೆ. ಅದಕ್ಕಾಗಿ ಅವಳಿ ನಗರದಲ್ಲಿ ಶುದ್ಧ ಕುಡಿವ ನೀರಿನ ಘಟಕಗಳ ಅವಶ್ಯಕತೆ ಅತ್ಯಂತ ಪ್ರಮುಖವಾಗಿದೆ. ಕಳೆದ 10 ವರ್ಷಗಳಲ್ಲಿ ಹೆಚ್ಚಿನ ಜನರು ಶುದ್ಧ ಕುಡಿವ ನೀರಿನ ಘಟಕಗಳ ನೀರನ್ನೇ ಬಳಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಕಾಯಿಲೆಗಳಿಗೆ ತುತ್ತಾಗುವುದು ತಪ್ಪಿತ್ತು, ಆದರೆ ಕಳೆದ ಕೆಲವು ವರ್ಷಗಳಿಂದ ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಹಣೆ ಇಲ್ಲದೇ ಇರುವುದು ಅನಿವಾರ್ಯವಾಗಿ ಗಡಸು ನೀರು ಕುಡಿಯುವಂತಾಗಿದೆ.ಅವಳಿ ನಗರದಲ್ಲಿರುವ ಒಟ್ಟು 30 ಘಟಕಗಳಲ್ಲಿ 6 ಧರ್ಮಸ್ಥಳ ಸಂಸ್ಥೆಯಿಂದ ಅನುಷ್ಠಾನವಾಗಿದ್ದು ಎಲ್ಲಾ ಚಾಲನೆಯಲ್ಲಿವೆ. ನಗರಸಭೆಯ 6 ಘಟಕಗಳಲ್ಲಿ ಒಂದು ಮಾತ್ರ ಚಾಲನೆಯಲ್ಲಿದೆ. 5 ಸ್ಥಗಿತಗೊಂಡಿವೆ, ಕೆ.ಎಚ್.ಪಾಟೀಲ ಸೇವಾ ಸಂಸ್ಥೆಯಿಂದ 18 ಘಟಕಗಳನ್ನು ಅನುಷ್ಠಾನ ಮಾಡಿದ್ದು, ಅವುಗಳಲ್ಲಿ 9 ಘಟಕಗಳು ಸ್ಥಗಿತಗೊಂಡದ್ದು, 9 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಅವಳಿ ನಗರದಲ್ಲಿರುವ ಶುದ್ಧ ಕುಡಿವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಡಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಉತ್ತರಿಸುತ್ತೇನೆ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಹೇಳುತ್ತಾರೆ.