ಗದಗ -ಬೆಟಗೇರಿ ಅಭಿವೃದ್ಧಿ ವಿಧೇಯಕಕ್ಕೆ ರಾಜ್ಯಪಾಲರಿಂದ ಅಂಕಿತ!

| Published : May 17 2025, 01:43 AM IST

ಗದಗ -ಬೆಟಗೇರಿ ಅಭಿವೃದ್ಧಿ ವಿಧೇಯಕಕ್ಕೆ ರಾಜ್ಯಪಾಲರಿಂದ ಅಂಕಿತ!
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಪಾಲ ಹಾಗೂ ರಾಜ್ಯ ಸರ್ಕಾರದ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದ ವಕಾರಗಳ ಅಭಿವೃದ್ಧಿ (ಗದಗ -ಬೆಟಗೇರಿ ವ್ಯಾಪಾರ ಅಭಿವೃದ್ಧಿ ಮತ್ತು ವಸ್ತು ಪ್ರದರ್ಶನ) ಪ್ರಾಧಿಕಾರಕ್ಕೆ ಕೊನೆಗೂ ರಾಜ್ಯಪಾಲರ ಅಂಕಿತ ಬಿದಿದ್ದು. ರಾಜ್ಯ ಸರ್ಕಾರ ಸೋಮವಾರ ಅಧಿಕೃತವಾಗಿ ಗೆಜೆಟ್ ಹೊರಡಿಸಿದ್ದು ಬಿಜೆಪಿ, ಕಾಂಗ್ರೆಸ್ ನಡುವಿನ ತಿಕ್ಕಾಟದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದಂತಾಗಿದೆ.

ಶಿವಕುಮಾರ ಕುಷ್ಟಗಿ

ಗದಗ: ರಾಜ್ಯಪಾಲ ಹಾಗೂ ರಾಜ್ಯ ಸರ್ಕಾರದ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದ ವಕಾರಗಳ ಅಭಿವೃದ್ಧಿ (ಗದಗ -ಬೆಟಗೇರಿ ವ್ಯಾಪಾರ ಅಭಿವೃದ್ಧಿ ಮತ್ತು ವಸ್ತು ಪ್ರದರ್ಶನ) ಪ್ರಾಧಿಕಾರಕ್ಕೆ ಕೊನೆಗೂ ರಾಜ್ಯಪಾಲರ ಅಂಕಿತ ಬಿದಿದ್ದು. ರಾಜ್ಯ ಸರ್ಕಾರ ಸೋಮವಾರ ಅಧಿಕೃತವಾಗಿ ಗೆಜೆಟ್ ಹೊರಡಿಸಿದ್ದು ಬಿಜೆಪಿ, ಕಾಂಗ್ರೆಸ್ ನಡುವಿನ ತಿಕ್ಕಾಟದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದಂತಾಗಿದೆ.

ಈ ಹಿಂದೆ ವಕಾರ ಸಾಲು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಅಂಕಿತಕ್ಕೆ ರಾಜ್ಯಪಾಲರ ಬಳಿ ಎರಡೂ ಬಾರಿ ರಾಜ್ಯ ಸರ್ಕಾರ ಪ್ರಸ್ತಾವನೆ ಕಳಿಸಿಕೊಟ್ಟಿತ್ತು. ಕೆಲ ನ್ಯೂನತೆ ಸರಿಪಡಿಸಿಕೊಳ್ಳಲು ಮತ್ತು ಕೆಲ ಮಾಹಿತಿ ಕೇಳಿ ರಾಜ್ಯಪಾಲರು ಎರಡೂ ಬಾರಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಮರಳಿಸಿದ್ದರು. ರಾಜ್ಯಪಾಲರ ಸಲಹೆಯಂತೆ ವಿಧೇಯಕ ತಿದ್ದುಪಡಿಗೊಳಿಸಿ ಅನುಮೋದನೆ ಪಡೆಯಲಾಗಿದೆ.

ಏನೇನು ಬದಲಾವಣೆ: ಈ ಮೊದಲು ಪ್ರಾಧಿಕಾರಕ್ಕೆ ಒಳಪಡುವ ಕ್ಷೇತ್ರದ ವಿಧಾನಸಭಾ ಸದಸ್ಯರು ಪ್ರಾಧಿಕಾರಕ್ಕೆ ಪದನಿಮಿತ್ತ ಸದಸ್ಯರಾಗಿರುತ್ತಾರೆ ಎಂದು ವಿಧೇಯಕದ ಮೂರನೇ ಖಂಡದಲ್ಲಿ ಸೇರಿಸಲಾಗಿತ್ತು. ಕೇವಲ ಸ್ಥಳೀಯ ಶಾಸಕರನ್ನು ಮಾತ್ರ ಸದಸ್ಯರನ್ನಾಗಿ ವಿಧೇಯಕದಲ್ಲಿ ಒಳಪಡಿಸಿದ್ದನ್ನು ಬಿಜೆಪಿ ಮುಖಂಡರು ವಿರೋಧಿಸಿದ್ದರು. ಇದೊಂದು ರಾಜತಾಂತ್ರಿಕ ನಡೆಯಾಗಿತ್ತು. ಹೀಗಾಗಿ ಪ್ರಸ್ತುತ ವಿಧೇಯಕದ ಮೂರನೇ ಖಂಡದಲ್ಲಿ ವಿಧಾನಸಭಾ ಸದಸ್ಯರ ಜತೆಗೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ, ನಗರಸಭೆ ವಿಪಕ್ಷ ನಾಯಕ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಪದನಿಮಿತ್ತ ಸದಸ್ಯರನ್ನಾಗಿ ಸೇರಿಸಿ ಗಜೆಟ್ ಹೊರಡಿಸಲಾಗಿದೆ. ಸರ್ಕಾರೇತರ ಮೂವರು ಸದಸ್ಯರನ್ನು ನೇಮಕ ಮಾಡುವ ಕುರಿತು ಗೆಜೆಟ್ ನಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿಷ್ಠೆ: ವಕಾರ ಸಾಲು ಪ್ರಕರಣವು ಕಾಂಗ್ರೆಸ್ ಬಿಜೆಪಿ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು. ವಕಾರು ಸಾಲು ಅಭಿವೃದ್ಧಿ ಪ್ರಾಧಿಕಾರ ವಿಷಯ ಅತ್ಯಂತ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವ ಎಚ್.ಕೆ.ಪಾಟೀಲ ಸಚಿವ ಸಂಪುಟದವರೆಗೂ ತೆಗೆದುಕೊಂಡು ಹೋಗಿದ್ದರಿಂದ ಈ ವಿಷಯ ರಾಜ್ಯ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿತ್ತು. ಇದೇ ವಿಷಯ ಮುಂದೆ ಕಾನೂನು ಸಮರಕ್ಕೂ ನಾಂದಿ ಹಾಡಿತು. ಬಿಜೆಪಿ ಸದಸ್ಯರು ವಕಾರ ಸಾಲು ಲೀಸ್ ನೀಡಿದ್ದರು. ಇದರಿಂದ ಸಚಿವ ಎಚ್.ಕೆ. ಪಾಟೀಲ ಕೂಡ ಪ್ರಾಧಿಕಾರ ರಚನೆಗಾಗಿ ಹಠಕ್ಕೆ ಬಿದ್ದಿದ್ದರು. ಬಿಜೆಪಿ ಕೂಡ ಕೊನೆವರೆಗೂ ಪ್ರಬಲ ವಿರೋಧ ನೀಡಿ ರಾಜ್ಯಪಾಲರ ಮೂಲಕ ಹಲವಾರು ಬಾರಿ ತಿದ್ದುಪಡಿಗಾಗಿ ಮರಳಿ ಕಳಿಸಿದ್ದರು. ಆದರೆ ಪಟ್ಟು ಬಿಡದ ಕಾಂಗ್ರೆಸ್ ಕೊನೆಗೂ ರಾಜ್ಯಪಾಲರ ಅಂಕಿತ ಪಡೆದು ಬೀಗುತ್ತಿದೆ.

ಹಿನ್ನೆಲೆ:ನಗರದ ಕೇಂದ್ರ ಸ್ಥಾನದಲ್ಲಿರುವ 32 ಎಕರೆ (ವಕಾರು ಸಾಲುಗಳು) ಜಮೀನನ್ನು ಈ ಹಿಂದೆ ಜಿನ್ನಿಂಗ್ ಫ್ಯಾಕ್ಟರಿ ಸೇರಿದಂತೆ ಕೈಗಾರಿಕೆಗಳಿಗಾಗಿ ಲೀಜ್ ನೀಡಲಾಗಿತ್ತು. ಆ ಲೀಜ್ ಮುಗಿದು ಹಲವಾರು ವರ್ಷಗಳು ಕಳೆದರೂ ಮಾಲೀಕರು ಆ ಆಸ್ತಿ ಬಿಟ್ಟುಕೊಟ್ಟಿರಲಿಲ್ಲ. ಈ ವಿಷಯವಾಗಿ ನಗರಸಭೆ ಮತ್ತು ಲೀಜ್ ಮಾಲೀಕರ ನಡುವೆ ಹಲವಾರು ವರ್ಷಗಳ ಕಾಲ ಸುಪ್ರೀಂ ಕೋರ್ಟನಲ್ಲಿ ಸಂಘರ್ಷ ನಡೆದಿತ್ತು. ಕೊನೆಗೆ ಎಲ್ಲ 32 ಎಕರೆ ಜಮೀನು ನಗರಸಭೆಗೆ ಸೇರಿದ್ದು ಎಂದು ತೀರ್ಪು ಬಂದ ಹಿನ್ನೆಲೆಯಲ್ಲಿ ಅವುಗಳನ್ನೆಲ್ಲ ತೆರವುಗೊಳಿಸಲಾಗಿತ್ತು. ತೆರವಾಗಿ ಖಾಲಿ ಬಿದ್ದಿರುವ ಸ್ಥಳದ ಲೀಸ್ ಅವಧಿ ವಿಸ್ತರಿಸುವುದಕ್ಕೆ ನಗರಸಭೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಅವಧಿಯಲ್ಲಿ ಠರಾವು ಮಾಡಲಾಗಿತ್ತು. ಇದನ್ನು ಕಾಂಗ್ರೆಸ್ ತೀವ್ರ ವಿರೋಧಿಸಿತ್ತಲ್ಲದೇ ಹೋರಾಟದ ಹಾದಿ ಹಿಡಿದಿತ್ತು. ಕೊನೆಗೆ ಕಾನೂನು ಮೂಲಕ ಇದಕ್ಕಾಗಿಯೇ ಪ್ರಾಧಿಕಾರ ರಚನೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಯಶ ಕಂಡಿದ್ದಾರೆ.

ಗೆಜೆಟ್‌ನಲ್ಲಿ ಏನಿದೆ?:ಪ್ರಾಧಿಕಾರಕ್ಕೆ ಆಯುಕ್ತರಾಗಿ ಕಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ನೇಮಕ ಮಾಡುವುದು. ನಗರದ ಯೋಜನಾ ಇಲಾಖೆಯ ಓರ್ವ ಸಿಬ್ಬಂದಿ ಯೋಜನಾಧಿಕಾರಿಯಾಗಿ ನೇಮಕಗೊಳಿಸುವುದು. ಲೋಕೋಪಯೋಗಿ ಇಲಾಖೆಯ ಎಇಇ ಹುದ್ದೆಗೆ ಸಮನಾದ ಅಧಿಕಾರಿ ಅಭಿಯಂತರನಾಗಿ ನೇಮಕಗೊಳಿಸುವುದು. ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆ ವಿಭಾಗದ ಕಿರಿಯ ಶ್ರೇಣಿ ಅಧಿಕಾರಿಯನ್ನು ಪ್ರಾಧಿಕಾರಕ್ಕೆ ಲೆಕ್ಕಾಧಿಕಾರಿಯಾಗಿ ನೇಮಕ ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಅಳವಡಿಕೆ ಮಾಡಿ ರಾಜ್ಯ ಸರ್ಕಾರ ಗಜೆಟ್ ಹೊರಡಿಸಿದೆ.

ವಾಣಿಜೋದ್ಯಮವಲ್ಲದೇ ನೂತನ ಕೌಶಲ್ಯಗಳ ಅನಾವರಣದ ಸ್ಥಳವಾಗಿ ಅದು ರೂಪುಗೊಳ್ಳಲಿದೆ. ವಿಶೇಷ ಯೋಜನೆಗಳ ಅನುಷ್ಠಾನ ಮೂಲಕ ಪ್ರಾಧಿಕಾರ ರಚನೆ ಸಕಾರಾತ್ಮಕಗೊಳಿಸಿ, ಅಭಿವೃದ್ಧಿಗೊಳಿಸಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.