ತೀವ್ರ ರಾಜಕೀಯ ಸಮರಕ್ಕೆ ಕಾರಣವಾಗಿದ್ದ ಗದಗ- ಬೆಟಗೇರಿ ನಗರಸಭೆ ಕಾಂಗ್ರೆಸ್‌ ತೆಕ್ಕೆಗೆ

| N/A | Published : Mar 01 2025, 01:05 AM IST / Updated: Mar 01 2025, 12:30 PM IST

ಸಾರಾಂಶ

  ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಗದಗ-ಬೆಟಗೇರಿ ನಗರಸಭೆಯ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ಚುನಾವಣೆ ಜರುಗಿದ್ದು, ಕಾಂಗ್ರೆಸ್‌ನ ಕೃಷ್ಣಾ ಪರಾಪೂರ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಶಕುಂತಲಾ ಅಕ್ಕಿ ಆಯ್ಕೆಯಾದರು.

ಗದಗ :  ಕಾಂಗ್ರೆಸ್, ಬಿಜೆಪಿ ನಡುವೆ ತೀವ್ರ ರಾಜಕೀಯ ಸಮರಕ್ಕೆ ಕಾರಣವಾಗಿ ಕಳೆದೊಂದು ವಾರದಿಂದ ಪ್ರತಿ ಕ್ಷಣಕ್ಕೂ ನ್ಯಾಯಾಲಯ, ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಆದೇಶಗಳಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಗದಗ-ಬೆಟಗೇರಿ ನಗರಸಭೆಯ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ಚುನಾವಣೆ ಜರುಗಿದ್ದು, ಕಾಂಗ್ರೆಸ್‌ನ ಕೃಷ್ಣಾ ಪರಾಪೂರ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಶಕುಂತಲಾ ಅಕ್ಕಿ ಆಯ್ಕೆಯಾದರು.

ಈ ನಡುವೆ ಧಾರವಾಡದ ರಾಜ್ಯ ಹೈಕೋರ್ಟ್‌ ಪೀಠವು ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯನ್ನು ಬುಧವಾರದ ವರೆಗೆ ಮುಂದೂಡಿ ಆದೇಶ ನೀಡಿದ್ದು, ಅದನ್ನು ಬಿಜೆಪಿ ಸದಸ್ಯರು ಚುನಾವಣಾಧಿಕಾರಿಗಳ ಗಮನಕ್ಕೆ ತಂದರೂ ಸಹ ತಮಗೆ ಯಾವುದೇ ಆದೇಶ ಬಂದಿಲ್ಲ ಎಂದು ಚುನಾವಣೆ ಪ್ರಕ್ರಿಯೆ ನಡೆಸಿ ಫಲಿತಾಂಶ ಘೋಷಿಸಿದ್ದಾರೆ.

ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ತಡಸದ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷ್ಮಿ ದಿಂಡೂರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್‌ ಮಾಡಿ ಸೆ.144 ಜಾರಿ ಮಾಡಿದ ಹಿನ್ನೆಲೆಯಲ್ಲಿ ನಗರಸಭೆಯ ರಸ್ತೆಗಳು ಬಿಕೋ ಎನ್ನುತ್ತಿದ್ದವು.

35 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ 18 ಸದಸ್ಯರಿದ್ದು, ನಗರಸಭೆಯ ವಕಾರಗಳ ಲೀಜ್ ವಿಸ್ತರಣೆ ವಿಷಯದಲ್ಲಿ ನಕಲಿ ಠರಾವು ಸೃಷ್ಟಿಸಿದ ಆರೋಪ ಸಾಬೀತಾದ ಹಿನ್ನೆಲೆ 3 ಜನ ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಂಡಿದೆ. ಇದರಿಂದ ಬಿಜೆಪಿ ಸಂಖ್ಯಾಬಲ 15ಕ್ಕೆ ಕುಸಿದಿದೆ. ಮೊದಲ ಅವಧಿಯಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ 17 ಸದಸ್ಯ ಬಲ ಹೊಂದಿತ್ತು, ಶುಕ್ರವಾರ ನಡೆದ ಚುನಾವಣೆಯಲ್ಲಿ ಗದಗ ಶಾಸಕ ಎಚ್.ಕೆ. ಪಾಟೀಲ ಮತ ಸೇರಿ ಒಟ್ಟು 18 ಮತ ಪಡೆಯುವ ಮೂಲಕ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಿತು.

ಹೈಡ್ರಾಮಾ : ಬೆಳಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲು ಆಗಮಿಸಿದ ವೇಳೆಯಲ್ಲಿ ನಾಮಪತ್ರ ಸಲ್ಲಿಸುವವರು ಮಾತ್ರ ಒಳಗಡೆ ಹೋಗಬೇಕು ಇನ್ನುಳಿದವರು ಹೋಗಲು ಅವಕಾಶವಿಲ್ಲ ಎಂದು ಪೊಲೀಸರು ಪ್ರವೇಶ ನಿರಾಕರಿಸಿದ ವೇಳೆಯಲ್ಲಿ ತಳ್ಳಾಟ, ನೂಕಾಟದ ಮಧ್ಯೆ ಬಿಜೆಪಿಯವರು ನಾಮಪತ್ರ ಸಲ್ಲಿಸಿದರು. ನಂತರ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಲು ಸದಸ್ಯರು ಆಗಮಿಸಿದ ವೇಳೆಯಲ್ಲಿ ಸದಸ್ಯರಲ್ಲದವರನ್ನು ಗೇಟ್ ಒಳಗಡೆ ಬಿಟ್ಟ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶಗೊಂಡ ಬಿಜೆಪಿ ಜಿಲ್ಲಾಧ್ಯಕ್ಷರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು.

3 ಜನ ಬಿಜೆಪಿ ಸದಸ್ಯರ ಸದಸ್ಯತ್ವ ಅಮಾನತು ಮಾಡಿರುವ ಪ್ರಾದೇಶಿಕ ಆಯುಕ್ತರ ತೀರ್ಪನ್ನು ಪ್ರಶ್ನಿಸಿ ಬಿಜೆಪಿ ಸದಸ್ಯರು ಗುರುವಾರ ಧಾರವಾಡ ಹೈಕೋರ್ಟ್‌ನಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಮೊದಲ ಪ್ರಕರಣದಲ್ಲಿ ಚುನಾವಣೆ ಮುಂದೂಡಲು ಸಾಧ್ಯವಿಲ್ಲ ಎಂದು, ಎರಡನೇ ಪ್ರಕರಣದಲ್ಲಿ ಅಮಾನತುಗೊಂಡಿರುವ 3 ಜನ ಸದಸ್ಯರಿಗೆ ಫೆ. 28ರಂದು ನಡೆಯುವ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿತ್ತು, ಆದರೆ ಅದರಲ್ಲಿ ಪ್ರಾದೇಶಿಕ ಆಯುಕ್ತರ ತೀರ್ಪಿನ ಬಗ್ಗೆಯೇ ಉಲ್ಲೇಖಿಸಲಾಗಿತ್ತು. ರಾತ್ರಿ ಪ್ರಾದೇಶಿಕ ಆಯುಕ್ತರು 3 ಜನ ಸದಸ್ಯರ ಸದಸ್ಯತ್ವ ಮತ್ತೆ ರದ್ದುಗೊಳಿಸಿ ಆದೇಶಿಸಿದ್ದರು. ಇದರಿಂದ ತೀವ್ರ ಕುಪಿತಗೊಂಡಿದ್ದ ಬಿಜೆಪಿ ಸದಸ್ಯರು ಮತ್ತೆ ಶುಕ್ರವಾರ ನ್ಯಾಯಾಲಯದ ಮೊರೆ ಹೋಗಿದ್ದರು. ಕ್ಷಣ ಕ್ಷಣಕ್ಕೂ, ದಿನ ದಿನಕ್ಕೂ ನ್ಯಾಯಾಲಯ, ಪ್ರಾದೇಶಿಕ ಆಯುಕ್ತರ ಕಚೇರಿ ಆದೇಶಗಳನ್ನೇ ಕಾಯುವಂತಾಯಿತು.

ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ವಿಚಾರಣೆಗೆತ್ತಿಕೊಂಡ ನ್ಯಾಯಾಲಯ 1.30ರ ವೇಳೆಗೆ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ತಡೆಯಾಜ್ಞೆ ನೀಡಿ ಬುಧವಾರಕ್ಕೆ ಮುಂದೂಡಿತು ಎನ್ನುವುದು ಬಿಜೆಪಿ ಸದಸ್ಯರು ಮತ್ತು ಪ್ರಮುಖರ ಅಭಿಪ್ರಾಯವಾಗಿತ್ತು. ಆದರೆ ಇದೆಲ್ಲರ ಮಧ್ಯೆ ಚುನಾವಣಾಧಿಕಾರಿ ಎಸಿ ಗಂಗಪ್ಪ ಅಧ್ಯಕ್ಷರ ಚುನಾವಣೆಗೆ ನೀಡಿದೆ ಎನ್ನಲಾದ ತಡೆಯಾಜ್ಞೆಯ ಪ್ರತಿಗಳು ನಮಗೆ ಬಂದಿಲ್ಲ ಎಂದು ಯಥಾವತ್ತಾಗಿ ಚುನಾವಣೆ ನಡೆಸಲು ಮುಂದಾದರು.

 ಇದರಿಂದ ತೀವ್ರ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ನಗರಸಭೆಯ ಸಭಾಭವನದಿಂದ ಹೊರ ನಡೆದರು. ಈ ವೇಳೆ ಒಳಗಡೆ ಕಾಂಗ್ರೆಸ್ ಸದಸ್ಯರು ಕೈ ಎತ್ತುವ ಮೂಲಕ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಅಂತಿಮಗೊಳಿಸಿ ಘೋಷಣೆ ಮಾಡಿದರು. ಮಧ್ಯಾಹ್ನ 2ಕ್ಕೆ ಸರಿಯಾಗಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಯಿತು. 

32 ಜನ ಸದಸ್ಯರು ಗದಗ ಶಾಸಕ ಎಚ್.ಕೆ. ಪಾಟೀಲ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹಾಜರಿದ್ದರು. ಎಲ್ಲರ ಹಾಜರಾತಿ ಪಡೆದುಕೊಂಡು ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ಬಿಜೆಪಿ ಸದಸ್ಯರು ಚುನಾವಣಾ ಪ್ರಕ್ರಿಯೆಯಿಂದ ಹೊರ ನಡೆದರು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕೃಷ್ಣಾ ಪರಾಪೂರ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಶಕುಂತಲಾ ಅಕ್ಕಿ ಅವರಿಗೆ ಕೈ ಎತ್ತುವ ಮೂಲಕ ನಡೆದ ಚುನಾವಣೆಯಲ್ಲಿ 18 ಮತಗಳು ಪಡೆದ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೋಷಿಸಲಾಗಿದೆ. ಚುನಾವಣೆ ಮುಂದೂಡಿಕೆ ವಿಷಯವಾಗಿ ಈ ಮೇಲ್‌ ಆಗಲಿ, ದೃಢೀಕರಣ ಪತ್ರವಾಗಲಿ ನಮಗೆ ಲಭ್ಯವಾಗಿಲ್ಲ, ಬಿಜೆಪಿ ಸದಸ್ಯರು ಮಾಡುತ್ತಿರುವ ಆರೋಪ ನಿರಾಧಾರವಾಗಿದೆ ಗದಗ ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಹೇಳಿದರು.