ಸಾರಾಂಶ
ಶಿವಕುಮಾರ ಕುಷ್ಟಗಿ
ಗದಗ: ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿನ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಉತ್ತೇಜನ ನೀಡುವ ಮತ್ತು ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಮಹತ್ವಾಕಾಂಕ್ಷೆಯ ಗದಗ ಕನೆಕ್ಟ್ (Gadag Connect) ಎಂಬ ವಿನೂತನ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಚಾಲನೆ ನೀಡಿದೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಗದಗ ಜಿಲ್ಲೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ವಿದ್ಯಾರ್ಥಿ ನಿಲಯಗಳಲ್ಲಿ ವಾಸಿಸುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗಾಗಿ ಈ ವಿಶೇಷ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಗಳನ್ನು ಕೇವಲ ಶಿಕ್ಷಣದಲ್ಲಿ ಮಾತ್ರವಲ್ಲದೆ, ಜೀವನದ ಎಲ್ಲ ಮಜಲುಗಳಲ್ಲಿ ಯಶಸ್ವಿಯಾಗುವಂತೆ ಸಿದ್ಧಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ.ಉದ್ದೇಶಗಳು: ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿ ಮಾಡಿ, ಅವರ ವ್ಯಕ್ತಿತ್ವ ಅಭಿವೃದ್ಧಿಪಡಿಸುವುದು. ಇಲಾಖಾ ಯೋಜನೆಗಳ ಜಾಗೃತಿ ಮೂಡಿಸುವುದು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಲ್ಲ ಯೋಜನೆಗಳ ಬಗ್ಗೆ ಅರಿವು ಮೂಡಿಸಿ, ಅವುಗಳ ಸಂಪೂರ್ಣ ಸದುಪಯೋಗಕ್ಕೆ ಪ್ರೇರೇಪಿಸಿ, ವೃತ್ತಿ ಮತ್ತು ಕೌಶಲ್ಯ ಮಾರ್ಗದರ್ಶನ ಮಾಡಿ, ಪ್ರಸ್ತುತ ಉದ್ಯೋಗಾವಕಾಶಗಳ ಮಾಹಿತಿ ನೀಡಿ, ಸ್ವಯಂ ಉದ್ಯೋಗ ಸೃಷ್ಟಿಗೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸುವುದು. ವಿದ್ಯಾರ್ಥಿನಿಲಯಗಳ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಿ, ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ.
ಹೇಗೆ ಕಾರ್ಯ ನಿರ್ವಹಿಸುತ್ತದೆ?: ಈಗಾಗಲೇ ಎಲ್ಲ ವಸತಿ ನಿಲಯಗಳಲ್ಲಿರುವ ಕ್ಯಾಮೆರಾಗಳನ್ನು ಬಳಕೆ ಮಾಡಿಕೊಂಡು ಜಿಲ್ಲಾ ಕೇಂದ್ರದಿಂದಲೇ ಸಂಪನ್ಮೂಲ ವ್ಯಕ್ತಿಗಳ ಮೂಲಕ ನಿಗದಿತ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಮತ್ತು ತಂತ್ರಜ್ಞಾನದ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ತಲುಪುವುದು. ಗದಗ ಕನೆಕ್ಟ್ ಕಾರ್ಯಕ್ರಮದಡಿ ಪ್ರತಿ ತಿಂಗಳು ಕನಿಷ್ಠ ಎರಡು ಬಾರಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ರೇರಕ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವುದು, ಪುಸ್ತಕದ ವಿಷಯಗಳೊಂದಿಗೆ ಜೀವನದಲ್ಲಿ ಯಶಸ್ಸು ಸಾಧಿಸಲು ಬೇಕಾದ ಧನಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸ ಹೆಚ್ಚಿಸುವುದು. ವಿವಿಧ ಕ್ಷೇತ್ರಗಳ ಸಾಧಕರನ್ನು ಆಹ್ವಾನಿಸಿ, ಅವರ ಅನುಭವಗಳ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವುದು. ಸ್ಪರ್ಧಾತ್ಮಕ ಪರೀಕ್ಷೆಗಳು, ಉನ್ನತ ಶಿಕ್ಷಣ ಮತ್ತು ಹೊಸ ಉದ್ಯೋಗ ಪ್ರವೃತ್ತಿಗಳ ಬಗ್ಗೆ ತಜ್ಞರಿಂದ ಮಾಹಿತಿ ನೀಡುವ ವಿನೂತನ ಯೋಜನೆ ಇದಾಗಿದೆ.ಹೊಸ ಚಿಂತನೆ: ಈ ವಿನೂತನ ಯೋಜನೆಯಲ್ಲಿ ಸದ್ಯ ಜಿಲ್ಲೆಯ ವಿವಿಧ ತಾಲೂಕುಗಳ 11 ವಸತಿ ನಿಲಯಗಳನ್ನು ಸೇರ್ಪಡೆ ಮಾಡಲಾಗಿದ್ದು, ಸದ್ಯದಲ್ಲಿಯೇ ಇನ್ನುಳಿದ ವಸತಿ ನಿಲಯಗಳಿಗೂ ವಿಸ್ತರಿಸಲಾಗುವುದು. ಈ ಕಾರ್ಯಕ್ರಮದ ಯಶಸ್ಸಿಗಾಗಿ ತಾಲೂಕು ಕಲ್ಯಾಣಾಧಿಕಾರಿಗಳು, ತಾಲೂಕು ವಿಸ್ತರಣಾಧಿಕಾರಿಗಳು, ನಿಲಯ ಪಾಲಕರು ಮತ್ತು ನಿಲಯ ಮೇಲ್ವಿಚಾರಕರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಇದೊಂದು ಹೊಸ ಚಿಂತನೆಗೆ ನಾಂದಿ ಹಾಡಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿ ಎಂ.ಎಂ. ತುಮ್ಮರಮಟ್ಟಿ ಹೇಳಿದರು.ಸಹಕಾರಿ: ಜಿಲ್ಲಾಡಳಿತದ ದೂರದೃಷ್ಟಿಯ ಈ ಕಾರ್ಯಕ್ರಮ ಗದಗ ಜಿಲ್ಲೆಯ ಸಾವಿರಾರು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಿ, ಅವರನ್ನು ದೇಶದ ಪ್ರಗತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ನೆರವಾಗಲಿದೆ. ನಾನೇ ಶುಕ್ರವಾರ ಸಂಜೆ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ಮಾಡಿ ಅವರ ಸಮಸ್ಯೆ ಆಲಿಸಿದ್ದೇನೆ. ವಿದ್ಯಾರ್ಥಿಗಳು ಧೈರ್ಯದಿಂದ ಎಲ್ಲವನ್ನೂ ತಿಳಿಸಿದ್ದು, ಹಿರಿಯರಿಂದ ಕಾಲ ಕಾಲಕ್ಕೆ ಸೂಕ್ತ ಮಾಹಿತಿ ಪಡೆಯಲು ಇದು ಹೆಚ್ಚು ಸಹಕಾರಿಯಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))