ಗದಗ: ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಗದಗ ಹಾಗೂ ಶ್ರೀ ಜಗದ್ಗುರು ಬೂದೀಶ್ವರ ವಿದ್ಯಾಪೀಠ ಹೊಸಹಳ್ಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆ. 1ರಂದು ಗದಗ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನ ತಾಲೂಕಿನ ಹೊಸಹಳ್ಳಿಯ ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನಮಠದಲ್ಲಿ ಜರುಗಲಿದೆ ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ಅಂದು ಬೆಳಗ್ಗೆ 9.30ಕ್ಕೆ ರಾಷ್ಟ್ರ, ನಾಡ ಹಾಗೂ ಪರಿಷತ್ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದ್ದು, ಜಗದ್ಗುರು ಅಭಿನವ ಬೂದೀಶ್ವರ ಮಹಾಸ್ವಾಮಿಗಳು, ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಹಾಗೂ ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಜಗದ್ಗುರು ಅಭಿನವ ಬೂದೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಶಾಸಕ ಹಾಗೂ ಕ.ರಾ. ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕುರ್ತಕೋಟಿ ಗ್ರಾಪಂ ಮಾಜಿ ಅಧ್ಯಕ್ಷ ಅಪ್ಪಣ್ಣ ಇನಾಮತಿ ಅಧ್ಯಕ್ಷತೆ ವಹಿಸಲಿದ್ದಾರೆ.

ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಮುಂಡರಗಿಯ ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಪ್ರಣತಿ ಗಡಾದ ಉಪಸ್ಥಿತರಿರುವರು.

ಸಮ್ಮೇಳನದ ಅಂಗವಾಗಿ ಎರಡು ವೈವಿಧ್ಯಮಯ ಗೋಷ್ಠಿಗಳನ್ನು ಆಯೋಜಿಸಲಾಗಿದ್ದು, ಮಧ್ಯಾಹ್ನ 12ಕ್ಕೆ ಮರೆಯಲಾಗದ ನಾಡಿನ ಶರಣರು ಗೋಷ್ಠಿ ಜರುಗಲಿದೆ. ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೖತ ಅಶೋಕ ಉಂಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಪನ್ಯಾಸ 1ರಲ್ಲಿ ಗದಗನ ಕುಮಾರ ಶಶಾಂಕ ಸಂಕದಾಳ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಕುರಿತು, ಉಪನ್ಯಾಸ 2ರಲ್ಲಿ ಗದಗನ ಐಶ್ವರ್ಯಾ ಪಾಟೀಲ ವಚನ ಪಿತಾಮಹ ಫ.ಗು. ಹಳಕಟ್ಟಿ ಕುರಿತು, ಉಪನ್ಯಾಸ 3ರಲ್ಲಿ ಹೊಸಳ್ಳಿಯ ಶ್ರೀದೇವಿ ಗಾಳಪ್ಪನವರ ಹೊಸಹಳ್ಳಿಯ ಹೊಂಬೆಳಕು ಶ್ರೀ ಜಗದ್ಗುರು ಬೂದೀಶ್ವರರು ವಿಷಯ ಕುರಿತು ಮಾತನಾಡಲಿದ್ದಾರೆ.

ಮಧ್ಯಾಹ್ನ 2.20ಕ್ಕೆ ಮಕ್ಕಳ ಹರಟೆ ಕಾರ್ಯಕ್ರಮ ಪ್ರಗತಿಪರ ಚಿಂತಕ ಡಾ. ಜಿ.ಬಿ. ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯಲಿದೆ.


ಸಂಜೆ 4ಕ್ಕೆ ಸಮಾರೋಪ ಹಾಗೂ ಬಾಲ ಶರಣಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಶ್ರೀ ಶಿವಶಾಂತವೀರ ಶರಣರ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಲಾರಿ ವಗ್ಗರ (ರೋಣ), ಪ್ರಿಯಾಂಕಾ ಲಮಾಣಿ (ಗದಗ), ಪ್ರೀತಮ್ ಕಬ್ಬೇರಹಳ್ಳಿ (ಶಿರಹಟ್ಟಿ), ಪ್ರೀತಿ ಬುಳ್ಳಾ (ಗಜೇಂದ್ರಗಡ), ದಿಂಗಾಲೇಶ ಜಂಗಳಿ (ಲಕ್ಷ್ಮೇಶ್ವರ), ಹರ್ಷಿತಾ ಕೋರಿಶೆಟ್ಟರ (ಗದಗ ಗ್ರಾಮೀಣ), ರಾಹುಲ್ ಕಾರಭಾರಿ (ಮುಂಡರಗಿ) ಪ್ರಣಮ್ಯ ಗುಜಮಾಗಡಿ (ನರಗುಂದ) ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.