ಶೇ. 100 ಸಮೀಕ್ಷೆ ಪೂರ್ಣಗೊಳಿಸಿದ ಗದಗ ಜಿಲ್ಲೆ!

| Published : Oct 10 2025, 01:01 AM IST

ಸಾರಾಂಶ

ಪ್ರತಿ ಮನೆಗೆ ಯುಎಚ್ಐಡಿ ಸ್ಟಿಕ್ಕರ್‌ ಅಂಟಿಸುವ ಕಾರ್ಯವನ್ನು ಹೆಸ್ಕಾಂ ಸಿಬ್ಬಂದಿಗೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಬೀಗ ಹಾಕಿದ್ದ ಮತ್ತು ಖಾಲಿ ಇದ್ದ ಮನೆಗಳಿಗೂ ಸ್ಟಿಕ್ಕರ್‌ ಅಂಟಿಸಲಾಗಿದ್ದು, ಇದರಿಂದ ದತ್ತಾಂಶದಲ್ಲಿ ಕೆಲವು ನ್ಯೂನತೆಗಳು ಉಂಟಾಗಿದ್ದವು. ಜಿಲ್ಲಾಡಳಿತವು ಈ ನ್ಯೂನತೆಗಳನ್ನು ತ್ವರಿತವಾಗಿ ಸರಿಪಡಿಸಿ, ಬುಧವಾರ ಸಂಜೆ ವೇಳೆಗೆ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ.

ಶಿವಕುಮಾರ ಕುಷ್ಟಗಿಗದಗ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಾದ್ಯಂತ ನಡೆಸುತ್ತಿರುವ ಮಹತ್ವದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗದಗ ಜಿಲ್ಲೆಯು ಸಮೀಕ್ಷೆ ಪೂರ್ಣಗೊಳಿಸಲು ಇನ್ನೂ ಎರಡು ದಿನ ಬಾಕಿ ಇರುವಾಗಲೇ ಜಿಲ್ಲಾಡಳಿತವು ಶೇ. 100ರಷ್ಟು ಸಾಧನೆ ಮಾಡಿ, ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.ಸಮೀಕ್ಷಾ ಪ್ರಗತಿಯಲ್ಲಿ ಆರಂಭದಲ್ಲಿ ಮೂರನೇ ಸ್ಥಾನದಲ್ಲಿದ್ದ ಗದಗ, ಅಂತಿಮ ಹಂತದಲ್ಲಿ ದಿಟ್ಟ ಹೆಜ್ಜೆ ಇರಿಸಿತು. ಮಂಗಳವಾರದ ವೇಳೆಗೆ ಶೇ. 97ರಷ್ಟು ಜಾತಿ ಜನಗಣತಿ ಪೂರ್ಣಗೊಂಡಿತ್ತು. ಬಾಕಿ ಉಳಿದಿದ್ದ ಶೇ. 3ರಷ್ಟು ಸಮೀಕ್ಷೆಯನ್ನು ಪೂರ್ಣಗೊಳಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿತ್ತು.​ಈ ಹಿಂದೆ, ಪ್ರತಿ ಮನೆಗೆ ಯುಎಚ್ಐಡಿ ಸ್ಟಿಕ್ಕರ್‌ ಅಂಟಿಸುವ ಕಾರ್ಯವನ್ನು ಹೆಸ್ಕಾಂ ಸಿಬ್ಬಂದಿಗೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಬೀಗ ಹಾಕಿದ್ದ ಮತ್ತು ಖಾಲಿ ಇದ್ದ ಮನೆಗಳಿಗೂ ಸ್ಟಿಕ್ಕರ್‌ ಅಂಟಿಸಲಾಗಿದ್ದು, ಇದರಿಂದ ದತ್ತಾಂಶದಲ್ಲಿ ಕೆಲವು ನ್ಯೂನತೆಗಳು ಉಂಟಾಗಿದ್ದವು. ಜಿಲ್ಲಾಡಳಿತವು ಈ ನ್ಯೂನತೆಗಳನ್ನು ತ್ವರಿತವಾಗಿ ಸರಿಪಡಿಸಿ, ಬುಧವಾರ ಸಂಜೆ ವೇಳೆಗೆ ಸಮೀಕ್ಷೆಯನ್ನು ಪೂರ್ಣಗೊಳಿಸಿ, ರಾಜ್ಯಕ್ಕೆ ಪ್ರಥಮ ಜಿಲ್ಲೆಯಾಗಿ ಹೊರಹೊಮ್ಮಿದೆ.​ರಾಜ್ಯದ 25 ಜಿಲ್ಲೆಗಳು ಈಗಾಗಲೇ ಶೇ. 80ಕ್ಕಿಂತ ಹೆಚ್ಚಿನ ಸಮೀಕ್ಷೆಯನ್ನು ಪೂರ್ಣಗೊಳಿಸಿವೆ. ಆದರೆ, ಶೇ. 100ರಷ್ಟು ಸಾಧನೆಗೆ ಕೆಲವು ಸವಾಲುಗಳು ಅಡ್ಡಿಯಾಗುತ್ತಿವೆ. ಗುಳೆ ಹೋದ ಕುಟುಂಬಗಳು, ಉದ್ಯೋಗ ನಿಮಿತ್ತ ಊರು ಬಿಟ್ಟಿರುವ ಸದಸ್ಯರು, ನಾಪತ್ತೆಯಾದವರು ಹಾಗೂ ಮಳೆಗೆ ಕುಸಿದ ಮನೆಗಳಂಥ ನಾನಾ ಕಾರಣಗಳಿಂದಾಗಿ ಹಲವು ಮನೆಗಳ ಸಮೀಕ್ಷೆ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ.

​ಅಧಿಕಾರಿಗಳು ಅಂತಹ ಬಾಕಿ ಉಳಿದ ಮನೆಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ರಾಜ್ಯದಲ್ಲಿ ಸಮೀಕ್ಷೆಯ ಗಡುವನ್ನು ಅಕ್ಟೋಬರ್ 18ರ ವರೆಗೆ ವಿಸ್ತರಿಸಲಾಗಿದ್ದು, ಈ ಅವಧಿಯೊಳಗೆ ಶೇ. 100ರಷ್ಟು ಗುರಿ ಸಾಧಿಸುವ ಭರವಸೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಗದಗ ಜಿಲ್ಲೆಯ ಸಾಧನೆಯು ರಾಜ್ಯದ ಇತರೆ ಜಿಲ್ಲೆಗಳಿಗೆ ಒಂದು ಮಾದರಿಯಾಗಿದ್ದು, ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಉತ್ತೇಜನ ನೀಡಿದಂತಾಗಿದೆ.284473 ಮನೆಗಳ ಸಮೀಕ್ಷೆಯ ಗುರಿ

ಗದಗ ಜಿಲ್ಲೆಯಲ್ಲಿ ಒಟ್ಟು 284473 ಮನೆಗಳ ಸಮೀಕ್ಷೆಯ ಗುರಿ ಹೊಂದಲಾಗಿತ್ತು. ಆ ಪೈಕಿ 268100 ಮನೆಗಳ ಗಣತಿ ಕಾರ್ಯ ಪೂರ್ಣಗೊಳಿಸಲಾಗಿದೆ. ಅದೇ ರೀತಿ 16962 ಮನೆಯಲ್ಲಿ ಯಾರೂ ಇರದ ಕಾರಣ ಸಮೀಕ್ಷೆ ಪೂರ್ಣಗೊಳಿಸಲಾಗಿದೆ.