ಗದಗ ಜಿಲ್ಲೆಗೆ ಕೆ.ಎಚ್. ಪಾಟೀಲರ ಕೊಡುಗೆ ಅಪಾರ: ಮಲ್ಲಿಕಾರ್ಜುನ ಖರ್ಗೆ

| Published : Mar 17 2025, 12:34 AM IST

ಗದಗ ಜಿಲ್ಲೆಗೆ ಕೆ.ಎಚ್. ಪಾಟೀಲರ ಕೊಡುಗೆ ಅಪಾರ: ಮಲ್ಲಿಕಾರ್ಜುನ ಖರ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದಲ್ಲಿ ಗದಗ ವಿಶೇಷವಾದ ಜಿಲ್ಲೆಯಾಗಿ ಬೆಳೆಯುತ್ತಿದೆ. ಇದಕ್ಕೆ ಕೆ.ಎಚ್. ಪಾಟೀಲ ಕೊಡುಗೆ ಅಪಾರವಾಗಿದೆ. ತಂದೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಚಿವ ಎಚ್.ಕೆ. ಪಾಟೀಲ ಮತ್ತು ಮಾಜಿ ಶಾಸಕ ಡಿ.ಆರ್. ಪಾಟೀಲ ಸಾಗುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶ್ಲಾಘಿಸಿದರು.

ಗದಗ: ಕರ್ನಾಟಕದಲ್ಲಿ ಗದಗ ವಿಶೇಷವಾದ ಜಿಲ್ಲೆಯಾಗಿ ಬೆಳೆಯುತ್ತಿದೆ. ಇದಕ್ಕೆ ಕೆ.ಎಚ್. ಪಾಟೀಲ ಕೊಡುಗೆ ಅಪಾರವಾಗಿದೆ. ತಂದೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಚಿವ ಎಚ್.ಕೆ. ಪಾಟೀಲ ಮತ್ತು ಮಾಜಿ ಶಾಸಕ ಡಿ.ಆರ್. ಪಾಟೀಲ ಸಾಗುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶ್ಲಾಘಿಸಿದರು.

ಭಾನುವಾರ ಇಲ್ಲಿನ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಆಯೋಜಿಸಲಾಗಿದ್ದ ಕೆ.ಎಚ್. ಪಾಟೀಲ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರ, ಕೃಷಿ ಕ್ಷೇತ್ರದಲ್ಲಿ ಕೆ.ಎಚ್. ಪಾಟೀಲ ಅವರು ವಿಶೇಷ ಆಸಕ್ತಿ ಹೊಂದಿದ್ದರು. ತಾತ್ವಿಕ ವಿಚಾರಗಳನ್ನು ಹೆಚ್ಚು ಅಳವಡಿಸಿಕೊಂಡಿದ್ದ ಅವರು, ಸಾಮಾಜಿಕ ನ್ಯಾಯಕ್ಕೂ ಬೆಂಬಲ ನೀಡುತ್ತಿದ್ದರು. ಅವರೊಬ್ಬ ನಿಷ್ಠುರವಾದಿಯಾಗಿದ್ದರು ಎಂದರು.

ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಡಿ.ಆರ್. ಪಾಟೀಲ, ಕೆ.ಎಚ್. ಪಾಟೀಲ ಅವರು ದೈಹಿಕವಾಗಿ ನಮ್ಮ ಜತೆ ಇಲ್ಲದಿದ್ದರೂ ಅವರು ಬಿಟ್ಟು ಹೋಗಿರುವ ಸಾಮಾಜಿಕ ಕಾರ್ಯಗಳು ನಮಗೆ ನಿರಂತರ ಪ್ರೇರಣೆಯಾಗಿವೆ. ಅವರು ರಾಜಕಾರಣದಲ್ಲಿ ಎಂದಿಗೂ ಅಂಜಿದವರಲ್ಲ. ತಮ್ಮ ನಿಲುವಿಗೆ ಯಾವಾಗಲೂ ಬದ್ಧರಾಗಿರುತ್ತಿದ್ದರು. ಅಂತಹ ಮಹಾನ್ ನಾಯಕರ ಶತಮಾನೋತ್ಸವದಲ್ಲಿ ಭಾಗವಹಿಸಿದ ನಾವೇ ಪುಣ್ಯವಂತರು ಎಂದರು.

ರಾಜ್ಯದಲ್ಲಿ ಇಂದಿಗೂ ಅಲ್ಪ ಪ್ರಮಾಣದಲ್ಲಾದರೂ ಅರಣ್ಯ ಸಂಪತ್ತು ಉಳಿದಿದೆ ಎಂದರೆ ಅದಕ್ಕೆ ಅಂದು ಅರಣ್ಯ ಸಚಿವರಾಗಿದ್ದ ಕೆ.ಎಚ್. ಪಾಟೀಲ ತೆಗೆದುಕೊಂಡಿದ್ದ ದಿಟ್ಟ ಕ್ರಮಗಳ ಕಾರಣವಾಗಿದೆ. ಅರಣ್ಯದ ಒಳಗೆ ಎತ್ತಿನ ಬಂಡಿಗಳ ಓಡಾಟ ನಿಷೇಧ ಮಾಡುತ್ತಾರೆ. ಇದರಿಂದ ವಿರೋಧ ಪಕ್ಷದ ನಾಯಕರು ಹಾಗೂ ಸ್ವಪಕ್ಷದವರು ವಿರೋಧ ವ್ಯಕ್ತವಾದರೂ ಅವರನ್ನೆಲ್ಲಾ ಸಮಾಧಾನಪಡಿಸಿ ಕಾನೂನು ಜಾರಿಗೆ ತಂದ ಹಿನ್ನೆಲೆಯಲ್ಲಿ ರಾಜ್ಯದ ಅರಣ್ಯ ರಕ್ಷಣೆಯಾಗಿ ಉಳಿದಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲ ಅವರ ಹೆಸರಿನಲ್ಲಿ ಬಡವರ ಮಕ್ಕಳಿಗೆ ಸ್ಕಾಲರ್‌ಶಿಪ್‌ ನೀಡಬೇಕು. ಇದರಿಂದ ನೂರಾರು ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ. "ವಿದ್ಯೆ ಇಲ್ಲದವನು ಹದ್ದಿಗಿಂತ ಕನಿಷ್ಠ " ಎನ್ನುವ ಗಾದೆ ಮಾತು ಇದೆ. ವಿದ್ಯೆ ನೀಡಿದರೆ ಕೆಲಸ ನೀಡಿದಂತೆ ಆಗುತ್ತದೆ. ಈ ನಿಟ್ಟಿನಲ್ಲಿ ಸಚಿವ ಎಚ್.ಕೆ. ಪಾಟೀಲ, ಡಿ.ಆರ್. ಪಾಟೀಲ ಕಾರ್ಯ ಪ್ರವೃತ್ತರಾಗಬೇಕು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸಹಕಾರಿ ಕ್ಷೇತ್ರವೆಂದರೆ ತಟ್ಟನೆ ನೆನಪಾಗುವುದು ಕೆ.ಎಚ್. ಪಾಟೀಲರು. ಅವರ ಹಲವಾರು ದಶಕಗಳ ಹಿಂದೆಯೇ ಕಂಡ ಕನಸುಗಳನ್ನು ಇಂದಿಗೂ ನಾವೆಲ್ಲ ಸಾಕಾರ ಮಾಡಲು ಆಗುತ್ತಿಲ್ಲ, ಅಷ್ಟೊಂದು ದೂರ ದೃಷ್ಟಿಯುಳ್ಳ ನಾಯಕರಾಗಿದ್ದರು. ಅವರು ಬಿಟ್ಟು ಹೋಗಿರುವ ಕೆಲಸ ಕಾರ್ಯಗಳನ್ನು ಅವರ ಮಗ ಎಚ್.ಕೆ. ಪಾಟೀಲ ಹಾಗೂ ಅವರ ಕುಟುಂಬದವರು ನಡೆಸಿಕೊಂಡು ಹೋಗಿ ಗದಗ ಮಾದರಿ ಜಿಲ್ಲೆಯಾಗಿ ರೂಪಿಸಿದ್ದು ಇತಿಹಾಸ ಎಂದು ಜೆಡಿಎಸ್‌ ನಾಯಕ ಜೆ.ಟಿ. ದೇವೇಗೌಡರ ಹೇಳಿದರು.

ಹೊಸ ಜಿಲ್ಲೆಯಾಗಿ ಜನ್ಮ ತಳೆದ ನಂತರ ರಾಜ್ಯದಲ್ಲಿಯೇ ಅತಿ ವೇಗವಾಗಿ ಬೆಳೆದ ಜಿಲ್ಲೆ ಯಾವುದಾದರೂ ಇದ್ದರೆ ಅದು ಗದಗ ಜಿಲ್ಲೆ ಮಾತ್ರ, ನಾನು ಹಲವಾರು ಬಾರಿ ಹೇಳುತ್ತೇನೆ, ಗದಗ, ಧಾರವಾಡದಿಂದ ಬೇರ್ಪಟ್ಟ ನಂತರ ಧಾರವಾಡ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ದೇಶವೇ ಮೆಚ್ಚುವಂತಹ ಯೋಜನೆಗಳು ಗದಗ ಜಿಲ್ಲೆಯಲ್ಲಿ ಅನುಷ್ಠಾನವಾಗಿವೆ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಕೆ.ಎಚ್. ಪಾಟೀಲ ಅವರು ತಮ್ಮ ಕೆಲಸ ಕಾರ್ಯಗಳ ಮೂಲಕ ದೇಶವೇ ಗದಗ ಜಿಲ್ಲೆಯತ್ತ ನೋಡುವಂತೆ ಮಾಡಿದ್ದಾರೆ. ಅವರು ಹುಟ್ಟುಹಾಕಿದ ನೂರಾರು ಸಹಕಾರಿ ಸಂಸ್ಥೆಗಳು ಇಂದಿಗೂ ಎಂದಿಗೂ ಮಾದರಿಯಾಗಿವೆ. ಅವರೊಬ್ಬ ದೂರದೃಷ್ಟಿಯುಳ್ಳ, ಬಡವರ, ರೈತರ ಪರವಾಗಿ ಗಟ್ಟಿಯಾದ ಧ್ವನಿ ಎತ್ತುವ ಛಾತಿ ಹೊಂದಿದ್ದರು ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.