ಸಾರಾಂಶ
ಗದಗ: ಕನ್ನಡ ನಾಡು ಸೇವೆ, ಸಾಹಿತ್ಯಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಕುರ್ತಕೋಟಿ ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಗದಗ ತಾಲೂಕಿನ ಸಾಹಿತ್ಯ 5ನೇ ಕನ್ನಡ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಕನ್ನಡ ನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡಲು ಜಿಲ್ಲೆಯ ಪಾತ್ರ ಮಹತ್ವದ್ದಾಗಿದೆ ಎಂದು ಶ್ಲಾಘಿಸಿದ ಸಚಿವರು ಸಾಹಿತ್ಯ ಸಮ್ಮೇಳನ ಮಾದರಿ ಸಮ್ಮೇಳನ ಆಗಲಿ ಎಂದರು.
ಕನ್ನಡ ನಾಡಿನ ಹಲವಾರು ಸಾಹಿತಿ, ಸತ್ಪುರುಷರಿಗೆ ಪ್ರೋತ್ಸಾಹಿದ ಕೀರ್ತಿ ಕುರ್ತಕೋಟಿ ಗ್ರಾಮಕ್ಕೆ ಸಲ್ಲುತ್ತದೆ. ಕುರ್ತಕೋಟಿಯು ನಾಟಕ, ಬಯಲಾಟ, ರಂಗಭೂಮಿ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಸಿದ್ಧವಾಗಿದೆ. ಭಾರತ ರತ್ನ ಭೀಮಸೇನ ಜೋಶಿ ಅವರ ಪ್ರಥಮ ಗುರುಗಳು ಸಹ ಕುರ್ತಕೋಟಿಯವರು. ಈ ಗ್ರಾಮವು ಐತಿಹಾಸಿಕ ಶಿಲ್ಪಕಲೆ, ವಾಸ್ತಶಿಲ್ಪದಂತಹ ಕಟ್ಟಡಗಳಿಂದ ಖ್ಯಾತವಾಗಿದೆ. ಗ್ರಾಮದ ಕನ್ನಡದ ಕೀರ್ತಿ ಎಂದೇ ಪ್ರಖ್ಯಾತರಾದ ಕೀರ್ತಿನಾಥ ಕುರ್ತಕೋಟಿ ಅವರು ಖ್ಯಾತ ಸಾಹಿತಿ ಹಾಗೂ ವಿಮರ್ಶಕರು ಆಗಿದ್ದರು.ಕುಮಾರವ್ಯಾಸ ಹಾಗೂ ದ.ರಾ. ಬೇಂದ್ರೆಯವರ ಸಾಹಿತ್ಯದಲ್ಲಿ ಅಧಿಕಾರಯುತವಾಗಿ ಮಾತನಾಡಿ ಪ್ರಖ್ಯಾತ ವಾಗ್ಮಿಯೂ ಆಗಿದ್ದರು. ಕುರ್ತಕೋಟಿಯ ಡಾ. ಅರುಣ ಪಾಟೀಲ ಅವರು ಶ್ರೇಷ್ಠ ಸಂಶೋಧಕರು, ವಿಜ್ಞಾನಿಗಳಾಗಿದ್ದಾರೆ. ರಸಾಯನ ಶಾಸ್ತ್ರಿದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದು, ಜಿಲ್ಲೆಯಲ್ಲಿ ಮೋಡ ಬಿತ್ತನೆ ಪ್ರಯೋಗಕ್ಕೆ ಕಾರಣಿಭೂತರಾಗಿದ್ದಾರೆ ಎಂದರು.
ಹೊಸಹಳ್ಳಿಯ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.ನಾಡೋಜ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ಕನ್ನಡ ಭಾಷೆಯು ಬದ್ಧತೆ ಹಾಗೂ ಪರಿಪೂರ್ಣತೆ ಹೊಂದಿದ ಭಾಷೆಯಾಗಿದೆ. ಇದನ್ನು ಲಿಪಿಗಳ ರಾಣಿ ಎಂದು ಕರೆಯಲಾಗಿದೆ. ಕನ್ನಡ ನಾಡು ಹೆಸಕಾಂತ ಕವಿಗಳು, ನಾಟಕಕಾರರು, ಸಾಹಿತಿಗಳು, ಗಮಕಿಗಳನ್ನು ಹೊಂದಿದೆ ಎಂದರು.
ಕುರ್ತಕೋಟಿ ಗ್ರಾಮವು ಸ್ನೇಹ ಸೌಹಾರ್ದತೆ, ಸಹನೆ, ತಾಳ್ಮೆಗೆ ಹೆಸರಾಗಿದೆ. ಕನ್ನಡದ ದೀಪ ಚಿರಕಾಲ ಬೆಳಗಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಗದಗ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಸಮ್ಮೇಳನದ ಸರ್ವಾಧ್ಯಕ್ಷ ಜಗನ್ನಾಥಸಿಂಗ ಕಿಶನಸಿಂಗ್ ಜಮಾದಾರ, ನಿಕಟಪೂರ್ವ ಅಧ್ಯಕ್ಷರಾದ ಶಿವಶರಣೆ ಡಾ. ನೀಲಮ್ಮ ತಾಯಿ ಅಸುಂಡಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಅಕ್ಬರಸಾಬ ಬಬರ್ಜಿ, ಅಶೋಕ ಮಂದಾಲಿ, ಪ್ರಾಚಾರ್ಯ ಅನ್ನದಾನಿ ಹಿರೇಮಠ, ಗದಗ ಎಪಿಎಂಸಿ ಸದಸ್ಯ ಅಪ್ಪಣ್ಣ ಇನಾಮತಿ, ಗ್ರಾಮದ ಗಣ್ಯರಾದ ಗಿರೀಶ ಡಬಾಲಿ, ಪ್ರಗತಿಪರ ರೈತ ವಿರೂಪಣ್ಣ ಹೊಸಮನಿ, ಪ್ರಾ.ಸ. ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಪ್ಪ ಚೂರಿ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ. ಶಿವಪ್ಪ ಮ. ಕುರಿ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಡಿ.ಎಸ್. ತಳವಾರ ಇತರರು ಇದ್ದರು.ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಕುರ್ತಕೋಟಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜಗನ್ನಾಥಸಿಂಗ ಜಮಾದಾರ ಹಾಗೂ ತಾಯಿ ಭುವನೇಶ್ವರ ಮೆರವಣಿಗೆಯು ಸಕಲ ವಾದ್ಯ ವೈಭವಗಳೊಂದಿಗೆ ಅದ್ಧೂರಿಯಾಗಿ ನಡೆಯಿತು.ಹೊಸಹಳ್ಳಿ ಗ್ರಾಮದ ಬೂದೀಶ್ವರ ಭಜನಾ ಸಂಘದ ಕರಡಿ ಮಜಲು ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಡೊಳ್ಳು ಮೇಳದ ಸದ್ದು ಸಾಹಿತ್ಯ ಪ್ರೇಮಿಗಳ ಗಮನ ಸೆಳೆಯಿತು.