ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ಗದಗ- ಬೆಟಗೇರಿ ನಗರಸಭೆ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ನಿಗದಿ ಮಾಡಿದ್ದ ಮೀಸಲಾತಿಗೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಹಿನ್ನೆಲೆ ಧಾರವಾಡ ಹೈಕೋರ್ಟ್ ಮುಂದಿನ ವಿಚಾರಣೆ ವರೆಗೂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸದಂತೆ ಗುರುವಾರ ತಡೆಯಾಜ್ಞೆ ನೀಡಿದೆ.ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಮಾಡಿರುವ ರೋಸ್ಟರ್ ಸರಿಯಾಗಿ ಪಾಲನೆಯಾಗಿಲ್ಲ, 2ಎ ಸೇರಿದಂತೆ ವಿವಿಧ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಸಿಕ್ಕಿಲ್ಲ ಎಂದು ಈ ಹಿಂದೆ ಆಗಿರುವ ಎಲ್ಲ ಮೀಸಲಾತಿಗಳ ಪಟ್ಟಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದು ಅದನ್ನು ಪರಿಶೀಲನೆ ನಡೆಸಿದ ನ್ಯಾಯಾಲಯ ಸದ್ಯಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
35 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ18 ಸ್ಥಾನ ಪಡೆದಿದ್ದು, ಬಹುಮತ ಹೊಂದಿದೆ. 17 ಸ್ಥಾನ ಕಾಂಗ್ರೆಸ್ ಪಡೆದಿದೆ. ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ,ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು, ಇದರ ಆಧಾರದಲ್ಲಿ ಅಧಿಕಾರ ಪೂರ್ಣಗೊಳಿಸಿದ್ದ ಬಿಜೆಪಿ ಮತ್ತೆ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಅಣಿಯಾಗುತ್ತಿದ್ದ ವೇಳೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ನಿಗದಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ನಿರಾಸೆಗೆ ಕಾರಣವಾಗಿದೆ.ಈ ಹಿಂದೆ ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಅಧಿಕಾರಿಗಳು ಮಾಡಿದ ಅಚಾತುರ್ಯದಿಂದ ಪ್ರಕರಣ 6 ತಿಂಗಳಿಗೂ ಹೆಚ್ಚು ಕಾಲ ನ್ಯಾಯಾಲಯದಲ್ಲಿ ಚರ್ಚೆಯಾಗಿ ಇತ್ಯರ್ಥವಾಗಿತ್ತು. ನಗರಸಭೆಯ ಹಿಂದಿನ ಪೌರಾಯುಕ್ತ ಪ್ರಶಾಂತ ವರಗಪ್ಪನವರ ನನ್ನ ಸಹಿ ನಕಲಿ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದು. ಆರೋಪ ಎದುರಿಸುತ್ತಿರುವ 3 ಜನ ಬಿಜೆಪಿ ಸದಸ್ಯರು ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿ ಮಧ್ಯಂತರ ಜಾಮೀನು ಪಡೆದಿದ್ದಾರೆ. ಪೌರಾಯುಕ್ತರು ದಾಖಲಿಸಿದ ಪ್ರಕರಣವೇ ಸಕ್ರಮವಲ್ಲ ಎಂದು ಬಿಜೆಪಿ ಸದಸ್ಯರು ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಈ ಪ್ರಕರಣದಲ್ಲಿಯೂ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈಗ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಗೆ ತಡೆಯಾಜ್ಞೆ ನೀಡಿರುವುದು ಸೇರಿದಂತೆ ನಗರಸಭೆಯ ಹಲವಾರು ನಿರ್ಧಾರಗಳು ನ್ಯಾಯಾಲಯದಲ್ಲಿಯೇ ಆಗುತ್ತಿರುವುದು ಅತೀ ಹೆಚ್ಚು ಚರ್ಚಿತ ವಿಷಯವಾಗಿದೆ.
ತಡೆಯಾಜ್ಞೆಯಲ್ಲೇನಿದೆ: ಆ. 29ರಂದು ಧಾರವಾಡ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯಲ್ಲಿ ಅಧ್ಯಕ್ಷರ ಮೀಸಲಾತಿ ಪದೇ ಪದೇ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ. ಅದಕ್ಕಾಗಿ ಈ ಪ್ರಕರಣದ ಮುಂದಿನ ವಿಚಾರಣೆಯನ್ನು 11-9-2024 ಕ್ಕೆ ನಿಗದಿ ಮಾಡಲಾಗಿದ್ದು, ಅಲ್ಲಿಯವರೆಗೂ ಗದಗ ಬೆಟಗೇರಿ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸದಂತೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿದೆ.ಸೇರ್ಪಡೆ ತೀರ್ಪು ಬಾಕಿ ಇದೆ: ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಅಧಿಕಾರ ಪಡೆಯಬೇಕು ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ ನ ವಿಪ ಸದಸ್ಯ ಸಲೀಂ ಅಹ್ಮದ, ಬಿಜೆಪಿಯ ಎಸ್.ವಿ.ಸಂಕನೂರ ತಮ್ಮ ಹೆಸರುಗಳನ್ನು ಗದಗ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಗದಗ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಈಗಾಗಲೇ ಪೂರ್ಣಗೊಂಡಿದ್ದು, ತೀರ್ಪು ಮಾತ್ರ ಹೊರ ಬರಬೇಕಿದೆ. ಇಬ್ಬರೂ ವಿಪ ಸದಸ್ಯರ ಸೇರ್ಪಡೆ ನಿರ್ಧಾರದ ಮೇಲೆ ಎರಡೂ ರಾಜಕೀಯ ಪಕ್ಷಗಳ ಗದ್ದುಗೇರುವ ಭವಿಷ್ಯ ನಿರ್ಧಾರವಾಗಲಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ 2ಎಗೆ ಮೀಸಲಾತಿ ನಿಗದಿ ಮಾಡಬೇಕು. ಈ ರೋಸ್ಟರ್ ಬಹಳ ವರ್ಷಗಳಿಂದ ಬಂದಿಲ್ಲ ಎಂದು ನಾವು ನ್ಯಾಯಾಲಯದಲ್ಲಿ ಮನವಿ ಮಾಡಿದ್ದೇವು, ಇದನ್ನು ಪರಿಗಣಿಸಿರುವ ನ್ಯಾಯಾಲಯ ಸದ್ಯಕ್ಕೆ ತಡೆಯಾಜ್ಞೆ ನೀಡಿದೆ ಎಂದು ವಾಡ್ ನಂ. 1 ಸದಸ್ಯೆ ಲಕ್ಷ್ಮಿ ಸಿದ್ದಮ್ಮನಹಳ್ಳಿ ತಿಳಿಸಿದ್ದಾರೆ.