ಸಾರಾಂಶ
ಮಹೇಶ ಛಬ್ಬಿ ಗದಗ
ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಸಂಪೂರ್ಣ ಕೆಸರುಮಯವಾಗಿದೆ.ಈ ಕಚೇರಿಗೆ ನಗರ ಹಾಗೂ ಗ್ರಾಮೀಣ ಭಾಗಗಳಿಂದ ನಿತ್ಯ ನೂರಾರು ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಅರ್ಜಿ ಹಿಡಿದು ಬರುತ್ತಾರೆ. ಸಾರ್ವಜನಿಕರು ಕಚೇರಿ ಒಳಗೆ ಹೋಗಲು ಕೆಸರಿನ ರಾಡಿಯಲ್ಲಿ ನಡೆದುಕೊಂಡು ಹೋಗಬೇಕಿದೆ. ಇಲ್ಲಿ ಕೆಲಸ ಮಾಡುವ ಅಧಿಕಾರಿ, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ.
ಈ ಆವರಣ ಕೆಂಪು ಮಣ್ಣಿನಿಂದ ಕೂಡಿದ್ದು, ಮಳೆ ಬಂದಾಗೊಮ್ಮೆ ಆವರಣ ತುಂಬೆಲ್ಲ ನೀರು ನಿಂತು ರಾಡಿಯಾಗಿರುತ್ತಿದೆ. ಇದರಿಂದ ನಿತ್ಯ ಕಚೇರಿ ಕೆಲಸಕ್ಕೆಂದು ಬರುವ ಸಾರ್ವಜನಿಕರು ಕಚೇರಿ ಒಳಗೆ ತೆರಳಲು ಪರದಾಡುತ್ತಾರೆ. ಮಹಿಳೆಯರು, ವಯೋವೃದ್ಧರು ಬರುವುದು ಅಸಾಧ್ಯದ ಮಾತಾಗಿದೆ.ದಿನನಿತ್ಯ ಹತ್ತಾರು ಬಿಡಾಡಿ ದನಗಳು ಆವರಣದಲ್ಲಿ ಅಲೆದಾಡಿ ಇಲ್ಲಿಯೇ ವಾಸಸ್ಥಳವನ್ನಾಗಿ ಮಾಡಿಕೊಂಡಿವೆ. ಒಮ್ಮೊಮ್ಮೆ ಈ ದನಗಳ ಕಾದಾಟ ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತದೆ. ಕಚೇರಿ ಆವರಣದಲ್ಲಿ ಪಾರ್ಕಿಂಗ್ ಮಾಡಿದ ಬೈಕ್ ಗಳ ಸೈಡ್ ಬ್ಯಾಗಗಳಲ್ಲಿ ಏನಾದರೂ ಆಹಾರ ಪದಾರ್ಥವಿದ್ದರೆ ಅವುಗಳನ್ನು ತಿನ್ನುವ ಭರದಲ್ಲಿ ಕಾದಾಟ ನಡೆದು ಬೈಕ್, ಕಾರುಗಳು ಜಖಂಗೊಂಡಿರುವ ಪ್ರಸಂಗ ನಡೆದಿವೆ. ಅಷ್ಟೇ ಅಲ್ಲದೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.
ಅಡ್ಡಾದಿಡ್ಡಿ ಪಾರ್ಕಿಂಗ್: ತಹಸೀಲ್ದಾ ಕಚೇರಿ ಆವರಣ ಸೇರಿದಂತೆ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಬೈಕ್, ಕಾರು ಪಾರ್ಕಿಂಗ್ ಮಾಡುವರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತದೆ. ಮೊದಲೇ ಆವರಣ ಮಳೆಗೆ ನೀರು ನಿಂತು ಕೆಸರಿನ ಗದ್ದೆಯದಂತಾಗಿದ್ದು, ಜತೆಗೆ ಬಿಡಾಡಿ ದನ, ಬೀದಿ ನಾಯಿಗಳ ಹಾವಳಿ, ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಸಮಸ್ಯೆಯಿಂದ ದಿನನಿತ್ಯ ಇಲ್ಲಿಗೆ ಬರುವ ಸಾರ್ವಜನಿಕರು ಕಂಗೆಟ್ಟು ಹೋಗಿದ್ದಾರೆ.ಇನ್ನು ತಹಸೀಲ್ದಾರ ಕಚೇರಿಗೆ ಬರುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳು ಇಲ್ಲ. ಸಾರ್ವಜನಿಕರು ಕುಡಿಯುವ ನೀರಿಗೆ ಪಕ್ಕದ ಹೋಟೆಲ್ಲಗಳನ್ನೇ ಅವಲಂಭಿಸುವಂತಾಗಿದೆ.
ಶೌಚಾಲಯ ಇಲ್ಲದಿರುವುರಿಂದ ಕಚೇರಿ ಹಿಂಬದಿಯ ಬಯಲು ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ರೋಗ ರುಜಿನಗಳು ಉತ್ಪತಿ ಮಾಡುವ ಸ್ಥಳವಾಗಿದೆ. ಡೆಂಘೀ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಜಾಗ್ರತೆ ಮೂಡಿಸುತ್ತಿದೆ. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ, ಸ್ವಚ್ಛತೆ ಕಾಪಾಡಿ ಎಂದು ಆದರೆ ದಿನ ನಿತ್ಯ ನೂರಾರು ಜನರು ಬರುವ ತಹಸೀಲ್ದಾರ ಕಚೇರಿ ಆವರಣದಲ್ಲಿ ಸ್ವಚ್ಛತೆ ಇಲ್ಲ. ಜತೆಗೆ ಆವರಣದಲ್ಲಿ ಮಳೆ ನೀರು ನಿಲ್ಲುತ್ತದೆ. ದಿನನಿತ್ಯ ತಹಸೀಲ್ದಾರ ಕಚೇರಿಗೆ ಸಮಸ್ಯೆ ಹಿಡಿದುಕೊಂಡು ಬರುವ ಸಾರ್ವಜನಿಕರಿಗೆ ಇಲ್ಲಿಯೇ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾರೆ.ತಹಸೀಲ್ದಾರ್ ಕಚೇರಿಗೆ ನಗರ ಸೇರಿದಂತೆ ಗ್ರಾಮೀಣ ಭಾಗಗಳಿಂದ ನಿತ್ಯ ನೂರಾರು ಜನರು, ಮಹಿಳೆಯರು, ವಯೋವೃದ್ಧರು ಬರುತ್ತಾರೆ. ಆದರೆ ಕಚೇರಿ ಒಳಗೆ ಹೋಗಬೇಕೆಂದರೆ ಕೆಸರಿನ ರಾಡಿಯಲ್ಲಿ ನಡೆದುಕೊಂಡು ಹೋಗಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಆವರಣದಲ್ಲಿ ಮಳೆ ನೀರು ನಿಲ್ಲದಂತೆ ಪೇವರ್ಸ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಳಗುಂದ ನಿವಾಸಿ ದತ್ತಣ್ಣ ಯಳವತ್ತಿ ತಿಳಿಸಿದ್ದಾರೆ.