ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ಹಾವೇರಿ-ಗದಗ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದಿದ್ದು, ಆಡಳಿತಾರೂಢ ಕಾಂಗ್ರೆಸ್ ನಿರೀಕ್ಷೆ ತಲೆ ಕೆಳಗಾಗಿ ಬಿಜೆಪಿಯ ಬಸವರಾಜ ಬೊಮ್ಮಾಯಿ 43 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು. ಕಾನೂನು ಸಚಿವ ಎಚ್.ಕೆ. ಪಾಟೀಲ ತವರು ಕ್ಷೇತ್ರದಲ್ಲಿಯೇ ಬಿಜೆಪಿ ಹೆಚ್ಚು ಮತ ಪಡೆದಿರುವುದು ಕಾಂಗ್ರೆಸ್ ಕಾರ್ಯಕರ್ತರ ತಲ್ಲಣಕ್ಕೆ ಕಾರಣವಾಗಿದೆ.ಹಾವೇರಿ-ಗದಗ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ 7 ರಲ್ಲಿ ಆಡಳಿತಾರೂಢ ಕಾಂಗ್ರೆಸ್ ಶಾಸಕರಿದ್ದಾರೆ, ಗದಗ ಜಿಲ್ಲೆಯ ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಕಾಂಗ್ರೆಸ್ ಪಕ್ಷದ 7 ಜನ ಶಾಸಕರಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ ಸೋಲಿನ ಕುರಿತು ಚರ್ಚೆಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಬಹಳಷ್ಟು ಗಂಭೀರವಾಗಿ ನಡೆಯುತ್ತಿವೆ.
10666 ಮತಗಳ ಲೀಡ್: ಗದಗ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಭಾರೀ ಜನಬೆಂಬಲ ಪಡೆದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿಗಿಂತಲೂ 10666 ಹೆಚ್ಚು ಮತಗಳನ್ನು (ಲೀಡ್) ಪಡೆದಿದ್ದು, ಇದು ಸಹಜವಾಗಿಯೇ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಭೂತಪೂರ್ವವಾಗಿ ಬೆಂಬಲಿಸಿದ್ದ ಮತದಾರರು ಒಂದೇ ವರ್ಷದಲ್ಲಿ ತನ್ನ ನಿಲುವು ಬದಲಿಸಿ ಬಿಜೆಪಿ ಬೆಂಬಲಿಸಿದ್ದಾನೆ.ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ, ಗದಗ, ರೋಣ ಹಾಗೂ ಶಿರಹಟ್ಟಿ ಮೀಸಲು ಈ 3 ಕ್ಷೇತ್ರಗಳು ಹಾವೇರಿ ಕ್ಷೇತ್ರ ವ್ಯಾಪ್ತಿಗೆ, ನರಗುಂದ ವಿಧಾನಸಭಾ ಮಾತ್ರ ಬಾಗಲಕೋಟೆ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದು, ಗದಗ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಹೆಚ್ಚಿನ ಮತ ಪಡೆದಿದ್ದು, ರೋಣ ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚಿನ ಮತ ಪಡೆದಿದೆ. ಗಮನಾರ್ಹ ಸಂಗತಿ ಎಂದರೆ ಹಾವೇರಿ ಕ್ಷೇತ್ರದಲ್ಲಿ ಏಕೈಕ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಪ್ರತಿನಿಧಿಸುವ ಶಿರಹಟ್ಟಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ (6936) ಹೆಚ್ಚಿನ ಮತ ಪಡೆದಿದೆ.
ಕಾರಣವಾಯ್ತಾ ಕುಡಿವ ನೀರು ?: ಗದಗ-ಬೆಟಗೇರಿ ಅವಳಿ ನಗರದಲ್ಲಿಯೇ ಅತೀ ಹೆಚ್ಚು ಮತದಾರರಿದ್ದು, ಪ್ರಸಕ್ತ ಸಾಲಿನಲ್ಲಿ ಅವಳಿ ನಗರದ ಜನರು ಕುಡಿವ ನೀರಿಗಾಗಿ ತೀವ್ರ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಸೂಕ್ತವಾಗಿ ನಿಭಾಯಿಸುವಲ್ಲಿ ಗದಗ ಶಾಸಕರು ನಿರ್ಲಕ್ಷ್ಯ ಮಾಡಿದರು, ನಗರಸಭೆಯಲ್ಲಿ ಬಿಜೆಪಿ ಆಡಳಿತವಿದೆ ಅವರೇ ಸರಿಮಾಡಿಕೊಳ್ಳಲಿ ಎಂದು ಅವಳಿ ನಗರದ ಜನರ ಸಮಸ್ಯೆ ನಿರ್ಲಕ್ಷ್ಯ ಮಾಡಿದ್ದೇ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಲು ಪ್ರಮುಖ ಕಾರಣವಾಗಿದೆ. ಇದರೊಟ್ಟಿಗೆ ಜನರ ಮೂಲಭೂತ ಸಮಸ್ಯೆ ನಿರ್ಲಕ್ಷ್ಯ ಮಾಡಿದ್ದೇ ಪ್ರಮುಖ ಕಾರಣ ಎನ್ನುತ್ತಾರೆ ಗದಗ ಬೆಟಗೇರಿ ಅವಳಿ ನಗರದ ಜನ.ಕೈ ಹಿಡಿಯದ ಗ್ಯಾರಂಟಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಿದ್ದೇ ಮಾಡಿದ್ದು, ಗ್ರಾಮೀಣ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದ್ದೇವೆ ಎಂದು ಹೇಳುತ್ತಲೇ ಬಂದರೇ ವಿನಃ ಅದರಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಯೋಚಿಸಲೇ ಇಲ್ಲ, ಅದರ ಬಗ್ಗೆ ಯಾರಾದರೂ ಮಾತನಾಡಿದರೆ ಅವರೆಲ್ಲ ಬಡವರ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನ ಮಾಡಿದರು. ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರ ನೀಡಿರುವುದಕ್ಕೆ ಸಾಕಷ್ಟು ಪುರುಷರು ಅಪಸ್ಪರ ಎತ್ತಿ, ನಾವು ನಿತ್ಯವೂ ಹಣ ಕೊಟ್ಟರೂ ಬಸ್ ಗಳಲ್ಲಿ ನಿಲ್ಲಲು ಜಾಗ ಸಿಗುತ್ತಿಲ್ಲ ಎಂದು ಉತ್ತರ ಕರ್ನಾಟಕ ಭಾಗದಲ್ಲಿ ಬಹಿರಂಗವಾಗಿಯೇ ಆಕ್ರೋಶ ಹೊರಹಾಕುತ್ತಿದ್ದರು. ಆ ಆಕ್ರೋಶವೀಗ ಮತಗಳಾಗಿ ಪರಿವರ್ತನೆಯಾಗಿದ್ದು ಕಾಂಗ್ರೆಸ್ ಹಿನ್ನಡೆಗೆ ಕಾರಣವಾಗಿದೆ ಎನ್ನುತ್ತಾರೆ ಸಾರ್ವಜನಿಕರು.