ಸಾರಾಂಶ
ಗದಗ-ವಾಡಿ ರೈಲ್ವೆ ಯೋಜನೆಗೆ ಬಿಜೆಪಿ ಸರ್ಕಾರ ₹ 549 ಕೋಟಿ ನೀಡಿದೆ. ಆದರೆ, ಬಸವರಾಜ ರಾಯರಡ್ಡಿ ಅವರು ಎಲ್ಲವೂ ಕಾಂಗ್ರೆಸ್ ಸರ್ಕಾರದ ಕೊಡುಗೆ ಎಂದು ಹೇಳುತ್ತಿದ್ದಾರೆ. 2014ರ ಮೊದಲಿಗೆ ಕಾಂಗ್ರೆಸ್ ಸರ್ಕಾರ ಹಾಗೂ ರಾಯರಡ್ಡಿ ಅವರ ಆಡಳಿತ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ.
ಕುಕನೂರು:
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಗದಗ-ವಾಡಿ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿರಬಹುದು. ಆದರೆ, ಕಾಮಗಾರಿಗೆ ಅನುದಾನ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿ ಯಲಬುರ್ಗಾ ಮಂಡಲದ ಅಧ್ಯಕ್ಷ ಮಾರುತಿ ಹೊಸಮನಿ ಶಾಸಕರ ಹೇಳಿಕೆಗೆ ತಿರುಗೇಟು ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ-ವಾಡಿ ರೈಲ್ವೆ ಯೋಜನೆಗೆ ಬಿಜೆಪಿ ಸರ್ಕಾರ ₹ 549 ಕೋಟಿ ನೀಡಿದೆ. ಆದರೆ, ರಾಯರಡ್ಡಿ ಅವರು ಎಲ್ಲವೂ ಕಾಂಗ್ರೆಸ್ ಸರ್ಕಾರದ ಕೊಡುಗೆ ಎಂದು ಹೇಳುತ್ತಿದ್ದಾರೆ. 2014ರ ಮೊದಲಿಗೆ ಕಾಂಗ್ರೆಸ್ ಸರ್ಕಾರ ಹಾಗೂ ರಾಯರಡ್ಡಿ ಅವರ ಆಡಳಿತ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಅಲ್ಲದೆ ಗದಗ-ವಾಡಿ ರೈಲ್ವೆ ಯೋಜನೆ ಸಹ ಮೋದಿ ಪ್ರಧಾನಿಗಳಾದ ನಂತರ ಆಗಿದೆ ಎಂದರು.
ಪುನರ್ವಸತಿ ಗ್ರಾಮಗಳಿಗೆ ಸವಕಳಿ ಬಿಲ್‌ಗಳನ್ನು ಹಾಲಪ್ಪ ಆಚಾರ್ ಅವರು ವಿಪ ಸದಸ್ಯರಿದ್ದಾಗ ಕೊಡಿಸಿದ್ದಾರೆ. ಸರ್ಕಾರಿ ಕೆರೆಗಳ ಸರ್ವೇ ಮಾಡಿಸಿ ಕೆರೆ ತುಂಬಿಸುವ ಯೋಜನೆಯನ್ನು ಸಾಕಾರಗೊಳಿಸಿದ್ದಾರೆ. ಆದರೆ, ರಾಯರಡ್ಡಿ ಅವರು ಕ್ಷೇತ್ರಕ್ಕೆ ಎಲ್ಲವೂ ತಮ್ಮದೆ ಕೊಡುಗೆ ಎಂದು ಹೇಳುತ್ತಿರುವುದು ಖಂಡನೀಯ ಎಂದರು.ತಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ ನಾಗಲಾಪೂರಮಠ ಮಾತನಾಡಿ, ರಾಯರಡ್ಡಿ ಅವರು ಎಲ್ಲವೂ ನಾನೇ ಮಾಡಿನಿ, ನನ್ನಿಂದಲೇ ಎಂದು ಕಾರ್ಯಕ್ರಮಗಳಲ್ಲಿ ರೈಲ್ವೆ ಯೋಜನೆ ಬಗ್ಗೆ ಮಾತನಾಡಿದ್ದಾರೆ. ಗದಗ-ವಾಡಿ ಹಾಗೂ ಮುನಿರಾಬಾದ್-ಮೆಹಬೂಬ್ ನಗರ ರೈಲ್ವೆ ಯೋಜನೆ ಕಾಮಗಾರಿಗಳು ಬಿಜೆಪಿ ಸರ್ಕಾರದ ಅನುದಾನದಿಂದ ತೀವ್ರಗತಿಯಲ್ಲಿ ಸಾಗುತ್ತಿವೆ ಎಂದು ಹೇಳಿದರು.
ಪಟ್ಟಣಕ್ಕೆ ಕ್ರೀಡಾಂಗಣವಿಲ್ಲ. ಅಲ್ಲದೇ ಹಾಲಪ್ಪ ಆಚಾರ್ ಅವರು ತಾಲೂಕಾಡಳಿತ ಕಚೇರಿಗೆ ಅನುದಾನ ಕೊಡಿಸಿ ಟೆಂಡರ್ ಪ್ರಕ್ರಿಯೆಗೆ ಬಂದಿದ್ದು, ರಾಜ್ಯ ಸರ್ಕಾರದಿಂದ ಭೂಸ್ವಾಧೀನ ಹಣ ತುಂಬದ ಕಾರಣ ಜಾಗ ರದ್ದಾಯಿತು. ಇದನ್ನು ಬಿಟ್ಟು ರಾಯರಡ್ಡಿ ಅವರು ಗುದ್ನೇಪ್ಪನಮಠದ ಜಾಗದ ಹಿಂದೆ ತಹಸೀಲ್ದಾರ್ ಕಚೇರಿ ಮಾಡಲು ಬೆನ್ನು ಹತ್ತಿದ್ದಾರೆ ಎಂದು ದೂರಿದರು.ಪ್ರಮುಖರಾದ ಅಮರೇಶ ಹುಬ್ಬಳ್ಳಿ, ಕರಬಸಯ್ಯ ಬಿನ್ನಾಳ, ಬಸವರಾಜ ಹಾಳಕೇರಿ, ಮಂಜುನಾಥ ನಾಡಗೌಡರ, ಕನಕಪ್ಪ ಬ್ಯಾಡರ, ವಿನಾಯಕ ಯಾಳಗಿ, ಲಕ್ಷ್ಮಣ ಕಾಳಿ, ಪಪಂ ಸದಸ್ಯ ಜಗನ್ನಾಥ ಬೋವಿ, ಮಂಜುನಾಥ ಮಾಲಗಿತ್ತಿ ಇದ್ದರು