ಜಾನಪದ ಸಂಶೋಧನೆಗೆ ನಾಂದಿ ಹಾಡಿದ ಗದ್ದಗಿಮಠ: ಡಾ. ಭಾಸ್ಕರ್‌

| Published : Jan 11 2025, 12:46 AM IST

ಸಾರಾಂಶ

ಗದ್ದಗಿಮಠರ ತಂದೆ ಪ್ರಸಿದ್ಧ ಜಾನಪದ ಹಾಡುಗಾರರು. ಮನೆಯ ಜಾನಪದ ಸಂಸ್ಕೃತಿಯ ಪ್ರಭಾವ ಅವರ ಮೇಲೆ ಪ್ರಭಾವ ಬೀರಿತು. ಏನು ಸೌಲಭ್ಯಗಳಿಲ್ಲದ ಆ ಕಾಲಘಟ್ಟದಲ್ಲಿ ಗದ್ದಗಿಮಠರು ಉತ್ತರ ಕರ್ನಾಟಕದ ಹಳ್ಳಿ, ಹಳ್ಳಿಗಳಿಗೆ ಎತ್ತಿನ ಬಂಡೆಯಲ್ಲಿ ಸಂಚರಿಸಿ ಲಕ್ಷಾಂತರ ಜಾನಪದ ಹಾಡು ಸಂಗ್ರಹಿಸಿ ಕವಿವಿಗೆ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದರು.

ಧಾರವಾಡ:

ಡಾ. ಬಿ.ಎಸ್. ಗದ್ದಗಿಮಠ ಜಾನಪದ ಸಂಶೋಧನೆಗೆ ನಾಂದಿ ಹಾಡಿದ ಖ್ಯಾತ ಜಾನಪದ ತಜ್ಞರು. ಜಾನಪದ ಸಾಹಿತ್ಯ ಶ್ರೀಮಂತಗೊಳಿಸಿದ ಕೀರ್ತಿ ಇವರದಾಗಿದೆ ಎಂದು ಜಾನಪದ ವಿವಿ ಕುಲಪತಿ ಡಾ. ಟಿ.ಎಂ. ಭಾಸ್ಕರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಾ. ಬಿ.ಎಸ್. ಗದ್ದಗಿಮಠ ದತ್ತಿ, ಗದ್ದಗಿಮಠ ದಂಪತಿ ಹೆಸರಿನ ಪ್ರತಿಷ್ಠಾನ ಉದ್ಘಾಟನೆ ಹಾಗೂ ಅವರ ಹೆಸರಿನ ಗ್ರಂಥ ಬಿಡುಗಡೆಯಲ್ಲಿ ಮಾತನಾಡಿದ ಅವರು, ಗದ್ದಗಿಮಠರ ತಂದೆ ಪ್ರಸಿದ್ಧ ಜಾನಪದ ಹಾಡುಗಾರರು. ಮನೆಯ ಜಾನಪದ ಸಂಸ್ಕೃತಿಯ ಪ್ರಭಾವ ಅವರ ಮೇಲೆ ಪ್ರಭಾವ ಬೀರಿತು. ಏನು ಸೌಲಭ್ಯಗಳಿಲ್ಲದ ಆ ಕಾಲಘಟ್ಟದಲ್ಲಿ ಗದ್ದಗಿಮಠರು ಉತ್ತರ ಕರ್ನಾಟಕದ ಹಳ್ಳಿ, ಹಳ್ಳಿಗಳಿಗೆ ಎತ್ತಿನ ಬಂಡೆಯಲ್ಲಿ ಸಂಚರಿಸಿ ಲಕ್ಷಾಂತರ ಜಾನಪದ ಹಾಡು ಸಂಗ್ರಹಿಸಿ ಕವಿವಿಗೆ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದರು. ಜಾನಪದ ಕ್ಷೇತ್ರದಲ್ಲಿ ಕವಿವಿಯಿಂದ ಪಿಎಚ್‌ಡಿ ಪಡೆದವರಲ್ಲಿ ಇವರೇ ಮೊದಲಿಗರು ಎಂದರು.

ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದು ಮುಖ್ಯವಲ್ಲ. ಬದುಕಿದ ರೀತಿ, ನೀತಿ ಮುಖ್ಯ. ಡಾ. ಬಿ.ಎಸ್. ಗದ್ದಗಿಮಠರು ಬಾಳಿದ್ದು 43 ವರ್ಷಗಳು ಮಾತ್ರ. ಆದರೆ, ಅವರ ಸಾಧನೆ ಅಪಾರ. ಅವರದು ಸಾರ್ಥಕದ ಬದುಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿವಿ ವಿಶ್ರಾಂತ ಕುಲಪತಿ, ಎಸ್.ಆರ್. ಕುಲಕರ್ಣಿ ಮಾತನಾಡಿದರು. ದತ್ತಿದಾನಿ ಡಾ. ನಿಜಗುಣದೇವ ಗದ್ದಗಿಮಠ, ಪುಲಕೇಶಿ ಗದ್ದಗಿಮಠ, ಪ್ರಮೀಳಾ ಹಟ್ಟಿಹೊಳಿ, ಮೇಘಾ ಹುಕ್ಕೇರಿ, ಡಾ. ರಾಮು ಮೂಲಗಿ ಇದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಉಷಾ ಗದ್ದಗಿಮಠ ಪ್ರಾಸ್ತಾವಿಕ ಮಾತನಾಡಿದರು.