ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಶ್ರೀ ಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾವೇಶವನ್ನು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಉದ್ಘಾಟಿಸಿದರು.

ಧಾರವಾಡ: ಬದುಕಿನ ಆದರ್ಶದ ಮೌಲ್ಯಗಳ ನೆರಳಿನಲ್ಲಿ ಮೊದಲು ಮಾನವನಾಗಲು ರೂಢಿಸಿಕೊಂಡು, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿ, ಎಲ್ಲರಿಗೂ ಸ್ಮರಣೀಯವಾಗುವ ಸಾರ್ಥಕ ಜೀವನದಿಂದ ಸಾಕ್ಷಾತ್ಕಾರ ಹೊಂದಲು ಪ್ರಯತ್ನಿಸಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ನುಡಿದರು.

ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಶ್ರೀ ಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕಾಗಿ-ಧರ್ಮಕ್ಕಾಗಿ: ಭಾರತೀಯರು ಭಗವಂತನೊಂದಿಗೆ ಭಕ್ತಿಯ ಅನುಸಂಧಾನಗೈಯುವ ಚಿಂತನೆ ವಿಶ್ವವ್ಯಾಪಕವಾದದ್ದು. ಭಾರತೀಯ ಸನಾತನ ಸಂಸ್ಕೃತಿಯ ಪರಂಪರೆಯನ್ನು ತೆರೆದ ಹೃದಯದಿಂದ ಅವಲೋಕನಗೈದು ದೇಶವಾಸಿಗಳೆಲ್ಲರೂ ಮೊದಲು ದೇಶಕ್ಕಾಗಿ, ನಂತರ ಧರ್ಮ-ಸಂಸ್ಕೃತಿ ಸಂರಕ್ಷಣೆಗಾಗಿ ಕೈಜೋಡಿಸಿ ಶ್ರಮಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಧರ್ಮ ಉಳಿದಾಗ ಮಾತ್ರ ಮಾನವ ಕುಲ ಉಳಿದು ಬೆಳೆದು ಬಲಗೊಳ್ಳಲು ಸಾಧ್ಯ ಎಂದರು.

ಶಿರಕೋಳ ಹಿರೇಮಠದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಜಿಲ್ಲೆ ಇನಾಂಹೊಂಗಲ ವಿರಕ್ತಮಠದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಸುಳ್ಳದ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿದರು. ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ, ಸಮಾಜಸೇವಕ ಮಂಜುನಾಥ ಮಕ್ಕಳಗೇರಿ, ಜಿಪಂ ಮಾಜಿ ಉಪಾಧ್ಯಕ್ಷ ನಿಜನಗೌಡ ಪಾಟೀಲ ಮಾತನಾಡಿದರು.

ಲೇಖಕ ಗುರುಮೂರ್ತಿ ಯರಗಂಬಳಿಮಠ ಸ್ವಾಗತಿಸಿದರು. ಸೋಮಲಿಂಗಶಾಸ್ತ್ರಿ ಗುಡ್ಡದಮಠ ವಂದಿಸಿದರು. ಅಮ್ಮಿನಬಾವಿ, ಮರೇವಾಡ, ತಿಮ್ಮಾಪುರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ ಹಾಗೂ ಧಾರವಾಡ ನಗರದ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.