ಸಾರಾಂಶ
ಧಾರವಾಡ:
ಗಳಗನಾಥರು ಮತ್ತು ಅವರ ಕಾದಂಬರಿಗಳು ಕೃತಿ ಬಗ್ಗೆ ಅಮೂಲಾಗ್ರ ಚರ್ಚೆಯಾಗಬೇಕು ಎಂದು ಸಾಹಿತಿ ರಾಘವೇಂದ್ರ ಪಾಟೀಲ ಹೇಳಿದರು.ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಗಳಗನಾಥ ಮತ್ತು ಹಾವೇರಿಯ ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನ, ಮನೋಹರ ಗ್ರಂಥ ಮಾಲಾ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಕೃಷ್ಣಮೂರ್ತಿ ಕಿತ್ತೂರ ಸಂಶೋಧಿಸಿ ಬರೆದ ಗಳಗನಾಥರು ಮತ್ತು ಅವರ ಕಾದಂಬರಿಗಳು ಪುಸ್ತಕ ಬಿಡುಗಡೆ ಮಾಡಿದ ಅವರು, ಹೊಸಗನ್ನಡ ಭಾಷೆ-ಸಾಹಿತ್ಯಗಳಿಗೆ ಭದ್ರ ಬುನಾದಿ ಹಾಕಿದವರಲ್ಲಿ ಗಳಗನಾಥರೂ ಒಬ್ಬರು. 70ರ ದಶಕದಲ್ಲಿ ಕಾದಂಬರಿಗಳು ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿದವು. ಆಧುನಿಕ ಕಲಾತ್ಮಕ ಕೃತಿಗಳನ್ನು ತುಲನೆ ಮಾಡುವ ಕಾರ್ಯವನ್ನು ಡಾ. ಕೃಷ್ಣಮೂರ್ತಿ ಕಿತ್ತೂರ ಮಾಡಿದ್ದಾರೆ ಎಂದರು.
ಗಳಗನಾಥರ ಸಾಹಿತ್ಯವನ್ನು ವಿಸ್ತಾರವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಭಾಷಾಂತರ, ರೂಪಾಂತರ, ಅನುವಾದದ ರೀತಿಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ. ಅನುವಾದ, ಭಾಷಾಂತರ ಮೂಲಕ ಕನ್ನಡಕ್ಕೆ ಬಂದ ಕೃತಿಗಳನ್ನು ಹೋಲಿಕೆ ಮಾಡುತ್ತ ಗಳಗನಾಥರ ಬರಹದ ಕುರಿತು ಈ ಕೃತಿಯನ್ನು ಕಿತ್ತೂರ ಸಂಪಾದನೆ ಮಾಡಿದ್ದಾರೆ ಎಂದು ಹೇಳಿದರು.ಧಾರವಾಡದ ಟ್ರೇನಿಂಗ್ ಕಾಲೇಜ್ ಹಿರಿಮೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಬಗ್ಗೆ ಬರೆದ ಹಾಗೂ ಸಕ್ಕರಿ ಬಾಳಾಚಾರ್ಯರ ಬಗೆಗಿನ ವಿಷಯಗಳು ಈ ಕೃತಿಯಲ್ಲಿ ಓದುಗನನ್ನು ಸೆಳೆಯುತ್ತದೆ. ಗಳಗನಾಥರು ತಮ್ಮ ಲೇಖಕ ವೃತ್ತಿಗೆ ಸೇರ್ಪಡೆಗೊಳ್ಳುವಾಗ ಕನ್ನಡದ ಅರುಣೋದಯ ಕಾಲವಾಗಿತ್ತು.
ನವೋದಯ ಸಾಹಿತ್ಯವನ್ನು ಗಳಗನಾಥರು ಸ್ವೀಕರಿಸಲಿಲ್ಲ. ಕನ್ನಡದ ಐತಿಹಾಸಿಕ ಸಂಶೋಧನೆ ಇನ್ನೂ ಆರಂಭವಾಗದ ಕಾಲದಲ್ಲಿಯೇ ಸಂಶೋಧನೆ ನಡೆಸುತ್ತಿದ್ದವರು ಗಳಗನಾಥರು. ಐತಿಹಾಸಿಕತೆ ಜತೆಗೆ ಕೃತಿಯಲ್ಲಿ ರೋಮ್ಯಾನ್ಸ್ ಬರಹ ಸೇರಿಸುವುದು ಗಳಗನಾಥರಿಗೆ ಅನಿವಾರ್ಯವಾಗಿತ್ತು. ಓದುಗರು ಸಹಿತ ಗಳಗನಾಥರ ಕಾದಂಬರಿಯನ್ನು ತನ್ಮಯತೆಯಿಂದ ಸ್ವೀಕರಿಸಿದ್ದರು. ಕನ್ನಡಗಿರಲ್ಲಿ ಓದುಗ ಸದಭಿರುಚಿಯನ್ನು ಕೊಟ್ಟಂತಹವರು ಎಂದರು.ಚಿಂತಕ ಹರ್ಷ ಡಂಬಳ ಮಾತನಾಡಿ, ಈ ಗ್ರಂಥ 464 ಪುಟಗಳನ್ನೊಳಗೊಂಡಿದ್ದು, ಒಂದೇ ಒಂದು ಅನವಶ್ಯಕ ಪದ ಹೊಂದಿಲ್ಲ. ಬೇರೆ ಭಾಷೆ ಹಾವಳಿಯಿಂದ ಕನ್ನಡ ಭಾಷೆ ಕ್ಷೀಣಿಸುವುದನ್ನು ಈ ಕೃತಿ ತೋರಿಸುತ್ತದೆ. ಕನ್ನಡದ ಪಿಎಚ್‌ಡಿಗಳಲ್ಲಿ ಧಾರವಾಡಕರ ಅವರ ಪಿಎಚ್.ಡಿ ಒಂದು. ಆ ಪಿಎಚ್.ಡಿಗೆ ಸಮಾನವಾಗಿ ಈ ಕಾದಂಬರಿಯಾಗಿದೆ ಎಂದರು.
ಬರಹಗಾರ ಬಿ.ವಿ. ಕುಲಕರ್ಣಿ ಮಾತನಾಡಿದರು. ಆನಂದತೀರ್ಥ ಕಿತ್ತೂರ, ವೆಂಕಟೇಶ ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನ ಅಧ್ಯಕ್ಷ ದುಷ್ಯಂತ ನಾಡಗೌಡ, ಮನೋಹರ ಗ್ರಂಥ ಮಾಲಾದ ರಮಾಕಾಂತ ಜೋಶಿ, ಸಮೀರ ಜೋಶಿ, ಶ್ರೀನಿವಾಸ ವಾಡಪ್ಪಿ ಇದ್ದರು.