ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶ ಸುಭದ್ರ

| Published : Dec 16 2024, 12:47 AM IST

ಸಾರಾಂಶ

ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ದೇಶ ಸುಭದ್ರವಾಗಿದೆ ಮಾತ್ರವಲ್ಲ, ಅಭಿವೃದ್ದಿಯ ಪಥದಲ್ಲಿ ಅತಿ ವೇಗವಾಗಿ ಸಾಗುತ್ತಿದೆ. ವಿಶ್ವದ ಅಗ್ರಗಣ್ಯ ದೇಶವಾಗಿ ಶಕ್ತಿಯುತವಾಗಿ ಬೆಳೆಯುತ್ತಿದ್ದು ಇದು ಜಗತ್ತು ನಿಬ್ಬೆರಗಾಗಿ ಗಮನಿಸುವಂತಾಗಿದೆ. ದೇಶದ ಜನ ಸಾಮಾನ್ಯರು ನೆಮ್ಮದಿಯಾಗಿ ನಿರ್ಭಯವಾಗಿ ಬದುಕು ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ದೇಶಾದ್ಯಂತ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಯಂ ಪ್ರೇರಿತರಾಗಿ ಕೋಟ್ಯಂತರ ಮಂದಿ ಬಿಜೆಪಿ ಸದಸ್ಯತ್ವ ಪಡೆದಿರುವುದು ಸಾರ್ವಜನಿಕರಲ್ಲಿ ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳ ಬಗ್ಗೆ ಇರುವ ನಂಬಿಕೆಯನ್ನು ಬಿಂಬಿಸುತ್ತದೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್‌ನಾರಾಯಣ್ ತಿಳಿಸಿದರು.ನಗರದ ಮಯೂರ ವೃತ್ತದಲ್ಲಿನ ಬಿಜೆಪಿಯ ಸೇವಾ ಸೌಧ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಘಟನಾ ಪರ್ವ-2024 ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.ಮೋದಿ ನಾಯಕತ್ವದಲ್ಲಿ ದೇಶ ಭದ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಸುಭದ್ರವಾಗಿದೆ ಮಾತ್ರವಲ್ಲ, ಅಭಿವೃದ್ದಿಯ ಪಥದಲ್ಲಿ ಅತಿ ವೇಗವಾಗಿ ಸಾಗುತ್ತಿದೆ. ವಿಶ್ವದ ಅಗ್ರಗಣ್ಯ ದೇಶವಾಗಿ ಶಕ್ತಿಯುತವಾಗಿ ಬೆಳೆಯುತ್ತಿದ್ದು ಇದು ಜಗತ್ತು ನಿಬ್ಬೆರಗಾಗಿ ಗಮನಿಸುವಂತಾಗಿದೆ. ದೇಶದ ಜನ ಸಾಮಾನ್ಯರು ನೆಮ್ಮದಿಯಾಗಿ ನಿರ್ಭಯವಾಗಿ ಬದುಕು ನಡೆಸುತ್ತಿದ್ದಾರೆ ಎಂದು ಹೇಳಿದರು.

ಯೋಜನೆಗಳ ಮಾಹಿತಿ ನೀಡಿಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರವು ಕೈಗೊಂಡ ಅಭಿವೃದ್ದಿ ಕಾರ್ಯಗಳು, ದೇಶವನ್ನು ಕಟ್ಟುವ ಮತ್ತು ದೇಶದ ಜನರ ಬದುಕನ್ನು ಕಟ್ಟುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಇನ್ನಷ್ಟು ಉತ್ತಮವಾಗಿ ಮಾಡಬೇಕೆಂದರು. ಶಿಡ್ಲಘಟ್ಟದಲ್ಲೂ ಹೆಚ್ಚು ನೋಂದಣಿ

ಕೋಲಾರ ಲೋಕಸಭೆ ಕ್ಷೇತ್ರ ಮಾತ್ರವಲ್ಲ ರಾಜ್ಯದಲ್ಲಿಯೆ ಅತಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯತ್ವ ನೋಂದಾಯಿಸಿದ ಕ್ಷೇತ್ರಗಳಲ್ಲಿ ನಮ್ಮ ಶಿಡ್ಲಘಟ್ಟ ಕ್ಷೇತ್ರವೂ ಒಂದಾಗಿದ್ದು ಇದಕ್ಕೆ ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಜನ ಸಾಮಾನ್ಯರಿಗೆ ಹತ್ತಿರವಾಗಿದ್ದೆ ಕಾರಣ, ಬಿಜೆಪಿ ಪಕ್ಷ ಹಾಗೂ ಮೋದಿ ಮೇಲಿನ ನಂಬಿಕೆಯಿಂದ ಇದೆಲ್ಲವೂ ಸಾಧ್ಯವಾಯಿತು ಎಂದು ನುಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ಜಿಲ್ಲಾ ಚುನಾವಣಾಧಿಕಾರಿ ಎಸ್.ಎನ್.ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮುರಳೀಧರ್, ಕೆ.ಬಿ.ಮುರಳಿ, ಮಧು ಸೂರ್ಯನಾರಾಯಣ, ಡಾ.ಶಶಿಧರ್, ಗೌರಿಬಿದನೂರಿನ ವೇಣುಗೋಪಾಲ್ ಸೇರಿದಂತೆ ಜಿಲ್ಲೆಯ ನಾನಾ ಮಂಡಲ, ಮೋರ್ಚಾಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.