ನಮ್ಮ ಕಲಾ ಪ್ರಕಾರಗಳು ಇಂದು ಮನರಂಜನೆ ಆಗದೆ ಪ್ರಚೋದನೆ ಆಗುತ್ತಿರುವ ಬಗ್ಗೆ ರಂಗಕರ್ಮಿ ಕೆ.ವಿ.ಅಕ್ಷರ ಖೇದ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಸಾಗರ
ನಮ್ಮ ಕಲಾ ಪ್ರಕಾರಗಳು ಇಂದು ಮನರಂಜನೆ ಆಗದೆ ಪ್ರಚೋದನೆ ಆಗುತ್ತಿರುವ ಬಗ್ಗೆ ರಂಗಕರ್ಮಿ ಕೆ.ವಿ.ಅಕ್ಷರ ಖೇದ ವ್ಯಕ್ತಪಡಿಸಿದರು.ಇಲ್ಲಿನ ಮಲೆನಾಡು ಗಮಕ ಕಲಾ ಟ್ರಸ್ಟ್ ಸ್ಥಳೀಯ ಶೃಂಗೇರಿ ಶಂಕರಮಠದ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಲಕ್ಷ್ಮೀಶ ಕವಿಯ ಸಮಗ್ರ ಜೈಮಿನಿ ಭಾರತ ಕಾವ್ಯಧಾರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ಕಾವ್ಯ ಪರಂಪರೆ ಉಳಿಸುವಲ್ಲಿ ಗಮಕ ಕಲೆಯ ಪಾತ್ರ ಅನನ್ಯವಾದುದು. ವ್ಯಾಖ್ಯಾನಕಾರರಿಂದಲೇ ಸಾಹಿತ್ಯ ಮತ್ತು ಸಾಹಿತಿ ಅರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗಮಕ ಭಾರತೀಯ ಎಲ್ಲ ಕಲೆಗಳ ಪ್ರತಿಬಿಂಬ ಎಂದ ಅವರು, ೧೫ನೇ ಶತಮಾನದಲ್ಲಿ ಅಕ್ಷರಸ್ಥರು ಕಡಿಮೆ ಇದ್ದರು. ಆದರೂ ಸಹ ಕಾವ್ಯಗಳ ವಾಚನ, ವ್ಯಾಖ್ಯಾಯನ ಪರಿಣಾಮಕಾರಿಯಾಗಿದ್ದರಿಂದ ನಮ್ಮ ದೇಶದಲ್ಲಿ ಜ್ಞಾನ ಭಂಡಾರಕ್ಕೆ ಕೊರತೆ ಇರಲಿಲ್ಲ ಎಂದು ಗಮಕ ಕಲೆಯ ಮಹತ್ವವನ್ನು ಹೇಳಿದರು..ಲಕ್ಷ್ಮೀಶ ಕವಿಯ ಕಾವ್ಯಗಳನ್ನು ನಾವೇ ಓದಿಕೊಂಡರೆ ಅರ್ಥವಾಗುವುದಿಲ್ಲ. ಆದರೆ ಈ ರೀತಿಯ ಗಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಾಚಿಸಿ ವ್ಯಾಖ್ಯಾನ ಮಾಡಿದಾಗ ಎಲ್ಲರಿಗೂ ಇದು ಅರ್ಥವಾಗುತ್ತದೆ. ನಾಟಕ ಮಾಡುವವರಿಗೆ ತರಬೇತಿ ನೀಡಬಹುದು. ಕಲಾವಿದರು ಸಿಗಬಹುದು. ಇವರುಗಳಿಗೆ ತರಬೇತಿ ನೀಡಬಹುದು. ಆದರೆ ಒಬ್ಬ ಉತ್ತಮ ಪ್ರೇಕ್ಷಕನನ್ನು ತಯಾರು ಮಾಡುವುದು ಸವಾಲಿನ ಕೆಲಸ. ಪ್ರತಿಭೆಯಲ್ಲಿ ಕಾರ್ಯಯತ್ರಿ ಪ್ರತಿಭೆ ಹಾಗೂ ಭಾವಯತ್ರಿ ಪ್ರತಿಭೆ ಎಂದು ಎರಡು ವಿಧಗಳಿವೆ. ಕವಿಗಳಿಗೆ ಮಾತ್ರ ಪ್ರತಿಭೆ ಇದ್ದರೆ ಸಾಲದು ಕಾವ್ಯವನ್ನು ಕೇಳುವ ಓದುಗರಿಗೂ ಸಹ ಪ್ರತಿಭೆ ಇರಬೇಕು ಎಂದು ಅಭಿಪ್ರಾಯಪಟ್ಟರು.
ಕೆ.ಆರ್.ಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಉಪಸ್ಥಿತರಿದ್ದರು. ಬಿ.ಟಿ.ಅರುಣ್ ಸ್ವಾಗತಿಸಿ, ರವೀಂದ್ರ ವಂದಿಸಿ, ಡಾ.ವಸುಮತಿಗೌಡ ನಿರೂಪಿಸಿದರು. ನಂತರ ಯುದಿಷ್ಠಿರನ ಅಶ್ವಮೇಧ ಯಾಗದ ಪೂರ್ಣಾಹುತಿ ಕಥಾ ಭಾಗವನ್ನು ಕೆ.ವಿ.ನರಹರಿ ಶರ್ಮ ವಾಚಿಸಿದರು. ಬಿ.ಟಿ.ಅರುಣ ವ್ಯಾಖ್ಯಾನಿಸಿದರು.