ಕಾವ್ಯದ ರಸಭರಿತ ವಾಚನವೇ ಗಮಕ ಕಲೆ: ಕೆ.ಆರ್. ಕುಲಕರ್ಣಿ

| Published : Nov 17 2024, 01:18 AM IST

ಸಾರಾಂಶ

ಗಮಕ ಕಲೆ ಅಂದರೆ ಹಳೆಗನ್ನಡ ಕಾವ್ಯಗಳನ್ನು ರಸಭರಿತವಾಗಿ, ರಾಗಬದ್ಧವಾಗಿ ವಾಚಿಸುವ ಕ್ರಮ.

ಪ್ರಸಿದ್ಧ ಕಾವ್ಯಗಳ ವಾಚನ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಚಾರ್ಯ

ಕನ್ನಡಪ್ರಭ ವಾರ್ತೆ ಕುಕನೂರು

ಗಮಕ ಕಲೆ ಅಂದರೆ ಹಳೆಗನ್ನಡ ಕಾವ್ಯಗಳನ್ನು ರಸಭರಿತವಾಗಿ, ರಾಗಬದ್ಧವಾಗಿ ವಾಚಿಸುವ ಕ್ರಮ ಎಂದು ಕುಕನೂರಿನ ವಿದ್ಯಾನಂದ ಗುರುಕುಲ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಕೆ.ಆರ್. ಕುಲಕರ್ಣಿ ಹೇಳಿದರು.

ತಾಲೂಕಿನ ತಳಕಲ್ಲ ಗ್ರಾಮದ ಸರಕಾರಿ ಪಪೂ ಕಾಲೇಜಿನಲ್ಲಿ ಗಮಕ ಕಲಾ ಪರಿಷತ್ತು ಬೆಂಗಳೂರು ಹಾಗೂ ಜಿಲ್ಲಾ ಘಟಕ ಕೊಪ್ಪಳ, ತಾಲೂಕು ಘಟಕ ಕುಕನೂರು ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಹಳೆಗನ್ನಡ ಪ್ರಸಿದ್ಧ ಕಾವ್ಯಗಳ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮದಲ್ಲಿ ನಾಗಚಂದ್ರ ಕವಿ ವಿರಚಿತ ರಾಮಚಂದ್ರ ಚರಿತ ಪುರಾಣ ಕಾವ್ಯದ ''''''''ಕದಡಿದ ಸಲಿಲಂ ತಿಳಿವಂದದೆ'''''''' ಕಾವ್ಯ ಭಾಗವನ್ನು ವಾಚಿಸಿ, ವ್ಯಾಖ್ಯಾನ ಮಾಡಿ ಮಾತನಾಡಿದರು.

ಗಮಕ ಕಲೆಯನ್ನು ರಾಗಬದ್ಧವಾಗಿ ಹಾಡುವ ಮೂಲಕ ಪಂಡಿತ, ಪಾಮರ ಮನದಲ್ಲಿ ಸದಾ ಹಸಿರಾಗಿ ಉಳಿಯುವಂತೆ ಮಾಡಬಹುದು. ಜೊತೆಗೆ ಕಾವ್ಯದ ಮೌಲ್ಯ ಹೆಚ್ಚಿಸುವುದಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಹಾಗೂ ಕೊಪ್ಪಳ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಡಾ. ಫಕೀರಪ್ಪ ವಜ್ರಬಂಡಿ, ಗಮಕ ಕಲೆಗೆ ತನ್ನದೆಯಾದ ಇತಿಹಾಸವಿದೆ. ನಮ್ಮ ಹಳ್ಳಿಗರ ಪುರಾಣ ವಾಚನ ಕಲೆಯೂ ಗಮಕ ಕಲೆಯೇ. ಯಾವಾಗ ಕಾವ್ಯ ನಿರ್ಮಾಣವಾಯಿತೋ ಅಂದಿನಿಂದಲೇ ಕಾವ್ಯವಾಚನ ಕ್ರಿಯೆ ಪ್ರಾರಂಭವಾಯಿತು. ನಾರದನ ಭಕ್ತಿಯ ಗಾಯನವಾಗಿರಬಹುದು, ಆದಿಕವಿ ವಾಲ್ಮೀಕಿಯ ರಾಮಾಯಣವನ್ನು ವಾಲ್ಮೀಕಿ ಮಹರ್ಷಿಗಳು ಲವ-ಕುಶರ ಮೂಲಕ ಪಠಿಸುವುದರಿಂದ ಹಿಡಿದು ನಮ್ಮ ವೇದ ಮಂತ್ರಗಳು ಉದಾತ್ತ-ಅನುದಾತ್ತಗಳ ಏರಿಳಿತಗಳು ಗಮಕ ಕಲೆ ಎಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ ಎಂದು ಹೇಳಿದರು.

ಕುಕನೂರ ತಾಲೂಕಿನ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಗಂಗಾಧರ ಅವಟೇರ ಮಾತನಾಡಿ, ಗಮಕ ಕಲೆ ಅಂದರೆ ಕಾವ್ಯವಾಚಿಸುವ ಕ್ರಮ. ಅದು ರಾಗಯುಕ್ತವಾಗಿರಬೇಕು. ಕಾವ್ಯ ರಸಕ್ಕೆ ಅನುಗುಣವಾಗಿರಬೇಕು. ಇದರ ಜೊತೆಗೆ ಸಾಹಿತ್ಯ ಪ್ರಧಾನ ಕಾವ್ಯವಾಗಿರಬೇಕು. ವಾಚಿಸುವ ವಾಚನ ಸಹೃದಯರಿಗೆ ಸಹಜವಾಗಿ ತಿಳಿಯಬೇಕು. ಗಮಕ ಕಲೆಯ ಲಕ್ಷಣಗಳನ್ನು ಗುರುತಿಸುವ ಪ್ರಯತ್ನಗಳನ್ನು ಗಮಕಿಗಳು ಮಾಡಿರುವುದು ಕಂಡು ನಮಗೆ ತಿಳಿದು ಬರುತ್ತದೆ ಎಂದರು.

ರಾಜ್ಯಶಾಸ್ತ್ರ ಉಪನ್ಯಾಸಕಿ ಗಿರಿಜಾ ಕನ್ನಾರಿ ಸ್ವಾಗತಿಸಿದರು. ಸಮಾಜಶಾಸ್ತ್ರ ಉಪನ್ಯಾಸಕ ನುನ್ನಾಪ್ ಭಾಷಾ ವಂದಿಸಿದರು. ಕನ್ನಡ ಭಾಷಾ ಉಪನ್ಯಾಸಕಿ ಶಿವಲೀಲಾ ಹಿರೇಮಠ ನಿರೂಪಿಸಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.