ಸಾರಾಂಶ
ಯಲ್ಲಾಪುರ: ಸರ್ಕಾರ ಶೈಕ್ಷಣಿಕ ವ್ಯವಸ್ಥೆಯ ಅಭಿವೃದ್ಧಿಗಾಗಿ ಸಾಕಷ್ಟು ಗಮನಹರಿಸಿದ್ದರೂ ಸ್ಪರ್ಧಾತ್ಮಕ ಶಿಕ್ಷಣದ ಕೊರತೆ ಕಂಡುಬರುತ್ತಿದೆ. ಇಂತಹ ಸ್ಪರ್ಧಾತ್ಮಕ ಶಿಕ್ಷಣದ ಕೊರತೆಯಾದ ಪರಿಣಾಮವೇ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯೂ ಕ್ಷೀಣವಾಗಿ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ವಿಷಾದಿಸಿದರು.ಆ. ೨೧ರಂದು ತಾಲೂಕಿನ ಹಿತ್ಲಳ್ಳಿಯ ಜೈಹಿಂದ್ ಕ್ರೀಡಾಂಗಣದಲ್ಲಿ ೨೦೨೪- ೨೫ನೇ ಸಾಲಿನ ಮಂಚಿಕೇರಿ ವಲಯಮಟ್ಟದ ೧೪ ವರ್ಷ ವಯೋಮಾನದೊಳಗಿನ ಇಲಾಖಾ ಕ್ರೀಡಾಕೂಟ ಮತ್ತು ತಲಾ ₹೧೩.೯೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ೨ ವಿವೇಕ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ, ಮಾತನಾಡಿ, ಯಾವುದೇ ಶಿಕ್ಷಣ ಸಂಸ್ಥೆಗಳಿಗೆ ಕ್ರೀಡೆಗಳಿಗಾಗಿ ವಿಶಾಲ ಮೈದಾನವಿರುವುದು ಶೋಭೆಯಾಗಿದ್ದು, ಹಿತ್ಲಳ್ಳಿಯಲ್ಲಿ ಇಂತಹ ಉತ್ತಮ ಮೈದಾನವಿರುವುದು ಸಂತಸದ ಸಂಗತಿ. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಗಳು ಅತ್ಯಗತ್ಯ ಎಂದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿದ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಶಾಲಾಭಿವೃದ್ಧಿ ಸಮಿತಿಯವರು ಆಗ್ರಹಿಸಿದಂತೆ ಬಿಸಿಯೂಟದ ಕೊಠಡಿಯನ್ನು ತಮ್ಮ ಅನುದಾನದಲ್ಲಿ ನೀಡಲು ಒಪ್ಪಿಗೆ ನೀಡಿದ್ದೇನೆ ಎಂದರು.ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಸತ್ಯನಾರಾಯಣ ಹೆಗಡೆ ಮಾತನಾಡಿ, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರಿಗೆ ಕೇವಲ ಗೆಲುವೇ ಪ್ರಧಾನವಾಗಿರದೇ ಪಾಲ್ಗೊಳ್ಳುವಿಕೆಯೇ ಮುಖ್ಯವಾಗಿರಬೇಕು ಎಂದರು. ಉಮ್ಮಚಗಿ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಹಿತ್ಲಳ್ಳಿ ಗ್ರಾಪಂ ಸದಸ್ಯರಾದ ಪ್ರಸನ್ನ ಭಟ್ಟ, ನಿರ್ಮಲಾ ನಾಯ್ಕ, ಹಿತ್ಲಳ್ಳಿ ವ್ಯ.ಸೇ.ಸ. ಸಂಘದ ಅಧ್ಯಕ್ಷ ಜಿ.ವಿ. ಹೆಗಡೆ, ಹಿತ್ಲಳ್ಳಿ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ನಾಯ್ಕ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ, ಇಸಿಒ ಪ್ರಶಾಂತ ಜಿ.ಎನ್., ಪ್ರೌಢಶಾಲಾ ಮುಖ್ಯಾಧ್ಯಾಪಕ ಕಮಲಾಕರ ಭಟ್ಟ, ನಿವೃತ್ತ ಶಿಕ್ಷಕ ಎನ್.ವಿ. ಹೆಗಡೆ, ವ್ಯ.ಸೇ.ಸ. ಸಂಘದ ಕಾರ್ಯದರ್ಶಿ ಶ್ರೀಧರ ನಾಯ್ಕ, ಹಿತ್ಲಳ್ಳಿ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕಿ ಯಮುನಾ ನಾಯ್ಕ, ಹಿತ್ಲಳ್ಳಿ ಗ್ರಾಪಂ ಉಪಾಧ್ಯಕ್ಷ ಗೋಪಾಲ ಶಾಸ್ತ್ರಿ ಮತ್ತಿತರರು ವೇದಿಕೆಯಲ್ಲಿದ್ದರು. ಸಿಆರ್‌ಪಿ ಕೆ.ಆರ್. ನಾಯ್ಕ ಸ್ವಾಗತಿಸಿದರು. ಮಳಲಗಾಂವ್ ಶಿಕ್ಷಕ ರಾಘವೇಂದ್ರ ಹೊನ್ನಾವರ ನಿರ್ವಹಿಸಿದರು. ಸಿಆರ್‌ಪಿ ವಿಷ್ಣು ಭಟ್ಟ ವಂದಿಸಿದರು. ಶಿಕ್ಷಕಿ ಭಾಗೀರತಿ ಗೌಡ ಪ್ರತಿಜ್ಞಾವಿಧಿ ಬೋಧಿಸಿದರು. ೬ ಗ್ರಾಪಂ ವ್ಯಾಪ್ತಿಯ ಮಂಚೀಕೇರಿ ವಲಯದ ೪ ಕ್ಲಸ್ಟರಿನ ೨೮ ಶಾಲೆಗಳ ಸುಮಾರು ೨೦೦ ವಿದ್ಯಾರ್ಥಿಗಳು ಗುಂಪು ಮತ್ತು ವೈಯಕ್ತಿಯ ವಿಭಾಗಗಳ ೧೪ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.