ಸಾರಾಂಶ
ಚತುರ್ಥ ಗಾನ ನಾಟ್ಯೋತ್ಸವವು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಶ್ರೀ ಶಾರದಾ ಭವನ ನೀಲಾವರದಲ್ಲಿ ಜರುಗಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಹೊಸೂರು ಗ್ರಾಮದ ಕರ್ಜೆಯ ಶ್ರೀ ಸಾಯಿ ಸ್ವರಾಂಜಲಿ ವಿದ್ಯಾಲಯ ಇದರ ಚತುರ್ಥ ವರ್ಷದ ಗಾನ ನಾಟ್ಯೋತ್ಸವವು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಶ್ರೀ ಶಾರದಾ ಭವನ ನೀಲಾವರದಲ್ಲಿ ಇತ್ತೀಚೆಗೆ ಜರುಗಿತು.ಇಲ್ಲಿನ ಪಾಜಕದ ಶ್ರೀ ಆನಂದ ತೀರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕಮಲಾಕ್ಷಿ ಪ್ರಕಾಶ್ ಉಡುಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಶಾನುಭೋಗ್ ಕರ್ಜೆ ಅವರು ಅಧ್ಯಕ್ಷತೆ ವಹಿಸಿದ್ದರು.
ಉಡುಪಿಯ ಶ್ರೀ ವಿಶ್ವ ಯಕ್ಷ ನೃತ್ಯ ಕಲಾ ನಿಕೇತನ ಸಂಸ್ಥೆ ಅಧ್ಯಕ್ಷ ವೈ. ಲಕ್ಷ್ಮೀನಾರಾಯಣ ಮಧ್ಯಸ್ಥ ನೀಲಾವರ, ಲಿಟಲ್ ರಾಕ್ ಇಂಡಿಯನ್ ಸ್ಕೂಲಿನ ಸಂಗೀತ ಶಿಕ್ಷಕ ಗ್ಲಾಡ್ ಸನ್ ರವೀಂದ್ರ, ಕಲಾವಿದ ಮುಂಡ್ಕಿನಜೆಡ್ಡು ಮುರಳೀಧರ ಭಟ್ ಮತ್ತು ಕರ್ಜೆಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.ಸಂಗೀತ ವಿಶಾರದ ಡಾ. ಅಡೋಲ್ಫ್ ಶರ್ವಿನ್ ಅಮ್ಮಣ್ಣ ಅವರಿಗೆ ಶ್ರೀ ಸಾಯಿ ಸ್ವರಾಂಜಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಂಸ್ಥೆಯ ನಿರ್ದೇಶಕಿ ರಾಜರಾಜೇಶ್ವರಿ ಪಿ. ಶಾನುಭೋಗ್ ಸ್ವಾಗತಿಸಿದರು. ಸರ್ವೇಶ್ ಎಳ್ಳಂಪಳ್ಳಿ ಧನ್ಯವಾದ ಸಮರ್ಪಿಸಿದರು. ವೈ. ಎಲ್. ವಿಶ್ವರೂಪ ಮಧ್ಯಸ್ಥ ನೀಲಾವರ ಇವರು ಕಾರ್ಯಕ್ರಮ ನಿರೂಪಿಸಿದರು.