ಸಾರಾಂಶ
ಕನ್ನಡಪ್ರಭ ವಾರ್ತೆ ಕಬ್ಬೂರ
ಆಸ್ಟ್ರೇಲಿಯಾದಲ್ಲಿ ಬೆಳಗಾವಿ ಜಿಲ್ಲೆಯ ಕಬ್ಬೂರ ಪಟ್ಟಣದ ಜಲಯೋಗ ಸಾಧಕ ಡಾ.ಪ್ರಕಾಶ ಬೆಲ್ಲದ ಅವರ ಪುತ್ರಿ ಸ್ನೇಹಾ ವಿರೇಶ ವಿಜಾಪೂರೆ ಹಾಗೂ ಪತಿ ಖಾನಾಪುರ ತಾಲೂಕಿನ ಹಲಸಿಯ ವಿರೇಶ ವಿಜಾಪೂರೆ 10 ವರ್ಷಗಳಿಂದ ವೆಸ್ಟರ್ನ್ ಆಸ್ಟ್ರೇಲಿಯಾದ ಪರ್ಥ್ ನಗರದಲ್ಲಿರುವ ಸ್ವಗೃಹದಲ್ಲಿ ಭಾರತದ ಬೆನ್ನೆಲೆಬು ಆಗಿರುವ ಕೃಷಿ ಕಾರ್ಯದ ದೃಶ್ಯಗಳನ್ನು ಸೃಷ್ಟಿಸಿ ಚಕ್ಕಡಿಯಲ್ಲಿ ಗಣೇಶ ಪೂರ್ತಿ ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ.ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ವಿರೇಶ ಗಣೇಶ ಚತುರ್ಥಿಯನ್ನು ಆಸ್ಟ್ರೇಲಿಯಾದಲ್ಲಿಯೂ ಸಂಪ್ರದಾಯ ಬದ್ಧವಾಗಿ ಆಚರಿಸುತ್ತಾರೆ. ಗಣೇಶ ಚತುರ್ಥಿಯಂದು ಆಸ್ಟ್ರೇಲಿಯನ್ನರ ಜೊತೆಗೆ ಸ್ವಗೃಹದಲ್ಲಿ ಮಾಡಿದ್ದ ಸ್ವರಚಿತ ಅಲಂಕಾರ ಮಾಡಿ, ಸಂಪ್ರದಾಯದಂತೆ ಮೋದಕ ಹಾಗೂ ವಿವಿಧ ಬಗ್ಗೆ ಸಿಹಿ ತಿನಿಸು ಮಾಡಿ ಪ್ರಸಾದ ವಿತರಿಸಿದರು. ಚತುರ್ಥಿ ದಿನದಂದು ಮೂರ್ತಿ ತಂದು ಮರುದಿನ ವಿಸರ್ಜನೆ ಮಾಡುತ್ತಾರೆ. ಮೊದಲ ಹಾಗೂ ಎರಡನೆಯ ದಿನ ಇವರು ತಯಾರಿಸಿ ಸಂಪ್ರದಾಯಿಕ ಕಾಲಾಕೃತಿ ನೋಡಲು ಸಹಸ್ರಾರು ಜನರು ಆಗಮಿಸುತ್ತಾರೆ. ಇವರ ಈ ಕಾರ್ಯಕ್ಕೆ ಮಕ್ಕಳಾದ ಆರುಷ ಹಾಗೂ ಅನಿಕಾ ಸಹ ಕೈಜೋಡಿಸಿ ಭಾರತೀಯ ಸಂಪ್ರದಾಯ ಪ್ರತಿಬಿಂಬಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಪ್ರತಿ ವರ್ಷ ಭಾರತ ದೇಶದಲ್ಲಿನ ಯಾವುದಾದರೂ ಒಂದು ವೈಶಿಷ್ಟತೆಯನ್ನು ಗಣೇಶನ ಮುಂದೆ ಪ್ರದರ್ಶಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಸ್ನೇಹಾ ವಿರೇಶ ವಿಜಾಪೂರೆ ಮಾಹಿತಿ ನೀಡಿದರು.ಮೊದಲ, ಎರಡನೆಯ ದಿನ ಇಂತಿಷ್ಟು ನಿಗದಿತ ಜನಕ್ಕೆ ಪ್ರತಿ ವರ್ಷ ಗಣೇಶನ ಮುಂದೆ ಮಾಡಿರುವ ಮಾಡಿದ ವಿಶಿಷ್ಟ ರೂಪಕ ವೀಕ್ಷಿಸಲು ಹಾಗೂ ಪ್ರಸಾದ ವ್ಯವಸ್ಥೆ ಕಲ್ಪಿಸುತ್ತೇವೆ. ಒಟ್ಟಾರೆ ಭಾರತೀಯ ಸಂಸ್ಕೃತಿ ಪರಂಪರೆಯನ್ನು ವಿದೇಶದಲ್ಲಿ ತಿಳಿಸಲು ಹೆಮ್ಮೆ ಎನಿಸುತ್ತದೆ ಎಂದು ವಿರೇಶ ವಿಜಾಪೂರೆ ಹೇಳಿದರು.
ನಾವು ನಮ್ಮ ಮನೆಗಳಲ್ಲಿ ಗಣಪತಿ ಮೂರ್ತಿ ತಂದು ಪೂಜಿಸುತ್ತೇವೆ ನಿಜ, ಆದರೆ, ಮನೆಯಲ್ಲಿಯೇ ಭಾರತೀಯ ಕೃಷಿ ಚಟುವಟಿಕೆಗಳ ಸಾಧನಗಳನ್ನು ವಿದೇಶದಲ್ಲಿ ಪ್ರದರ್ಶಿಸುತ್ತಿರುವುದು ಹೆಮ್ಮೆಯ ವಿಷಯ. ನಮ್ಮ ಮಗಳು ಮೊದಲಿನಿಂದಲೂ ಗಣೇಶನ ಭಕ್ತಳು. ಅದನ್ನು ಆಸ್ಟ್ರೇಲಿಯಾದಲ್ಲೂ ಮುಂದುವರೆಸಿರುವುದು ಸಂತಸವೆನ್ನಿಸುತ್ತದೆ ಎಂದು ಸ್ನೇಹಾರ ತಂದೆ ಡಾ.ಪ್ರಕಾಶ ಬೆಲ್ಲದ ಹೇಳಿದರು.