ಕನ್ನಡಪ್ರಭ ವಾರ್ತೆ ರಾಮನಗರ
ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಜಿಲ್ಲೆಯ ಸುಪುತ್ರ ಡಿ.ಕೆ.ಶಿವಕುಮಾರ್ ರವರ ಆಡಳಿತ ಯಾವುದೇ ವಿಘ್ನವಿಲ್ಲದೆ ಸುಸೂತ್ರವಾಗಿ ಸಾಗಲೆಂದು ಪ್ರಾರ್ಥಿಸಿ ರಾಮನಗರದ ಕಾಂಗ್ರೆಸ್ ಕಚೇರಿ, ದೇವಾಲಯಗಳು ಹಾಗೂ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಬೆಂಗಳೂರಿನ ಲೋಕಭವನದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಇತ್ತ ತವರು ಜಿಲ್ಲೆ ಬೆಂಗಳೂರು ದಕ್ಷಿಣ (ರಾಮನಗರ ) ದಲ್ಲಿ ಅವರ ಮುಂದಿನ ಆಡಳಿತ ಸುಸೂತ್ರವಾಗಿ ಸಾಗಲೆಂದು ಹಾರೈಸಿ ವಿವಿಧ ದೇವಾಲಯ, ದರ್ಗಾದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ)ಯ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರು ವಿಘ್ನ ನಿವಾರಕ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಕಚೇರಿಯಲ್ಲಿ ಗಣಪತಿ ಹೋಮವನ್ನು ಶ್ರದ್ಧಾಭಕ್ತಿಗಳಿಂದ ನೆರವೇರಿಸಿದರು.ಇಷ್ಟೇ ಅಲ್ಲದೆ, ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಾಲಯ ಹಾಗೂ ಪೀರನ್ ಷಾ ವಲಿ ದರ್ಗಾದಲ್ಲಿಯೂ ಕಾಂಗ್ರೆಸ್ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಗಣಪತಿ ಹೋಮ ನೆರವೇರಿದ ಬಳಿಕ ಮಾತನಾಡಿದ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನದ ಚುಕ್ಕಾಣಿ ಹಿಡಿಯುತ್ತಿದ್ದು, ಅವರ ಆಡಳಿತದಲ್ಲಿ ಯಾವುದೇ ಅಡತಡೆಗಳು ಬರಬಾರದು ಹಾಗೂ ದುಷ್ಟ ಶಕ್ತಿಗಳಿಂದ ಎದುರಾಗಬಹುದಾದ ಅಡೆತಡೆಗಳು ನಿವಾರಣೆಯಾಗಲಿ ಎಂಬ ಉದ್ದೇಶದಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರೊಡಗೂಡಿ ಹೋಮ ನೆರವೇರಿಸಲಾಗಿದೆ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧಿಕಾರ ಅವಧಿಯಲ್ಲಿ ಈಗಿನ ಗ್ಯಾರಂಟಿ ಯೋಜನೆಗಳನ್ನು ಮುನ್ನಡೆಸುವ ಜೊತೆಗೆ ರಾಜ್ಯದ ಜನರಿಗೆ ಹೊಸ ಹೊಸ ಜನಪರ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗಲಿ ಹಾಗೂ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿ ಎಂದು ನಗರದ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ಮಾತೆಯಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್, ನಗರಸಭೆ ಮಾಜಿ ಅಧ್ಯಕ್ಷರಾದ ಬಾಬು, ರವಿಕುಮಾರ್, ಸದಸ್ಯರಾದ ಬಿ.ಸಿ.ಪಾರ್ವ ತಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ರಂಜಿತ್, ಸಾಗುವಳಿ ಸಮಿತಿ ಸದಸ್ಯ ಕೆ.ರವಿ, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಹಿಂದುಳಿದ ಒಕ್ಕೂಟದ ಅಧ್ಯಕ್ಷ ರೈಡ್ ನಾಗರಾಜು ಸೇರಿದಂತೆ ಪಕ್ಷದ ನೂರಾರು ಮುಖಂಡರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.